ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ರಾಜಕಾರಣಕ್ಕೆ ಸಜ್ಜನರ ಅಗತ್ಯ

ಚಿತ್ರದುರ್ಗ: ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಶಂಕರ ಬಿದರಿ ಅಭಿಮತ
Last Updated 22 ಏಪ್ರಿಲ್ 2013, 8:57 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದ ಹಿತ ಕಾಯುವ ಸಜ್ಜನರು ಪ್ರವೇಶಿಸಿದರೆ ಮಾತ್ರ ಕಲುಷಿತಗೊಂಡಿರುವ ರಾಜಕಾರಣ ಶುದ್ಧಗೊಳಿಸಲು ಸಾಧ್ಯವಿದೆ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಮುಖಂಡ ಹಾಗೂ ನಿವೃತ್ತ ಡಿಜಿಪಿ ಶಂಕರ್‌ಬಿದರಿ ಅಭಿಪ್ರಾಯಪಟ್ಟರು.

ನಗರದ ಹಳೇ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭ್ರಷ್ಟರು, ಅಯೋಗ್ಯರು ಹಾಗೂ ಲೂಟಿಕೋರರು ಸೇರಿಕೊಂಡು ರಾಜಕಾರಣವನ್ನು ಕಲುಷಿತ ಗೊಳಿಸಿದ್ದಾರೆ. ಇದರಿಂದಾಗಿ ಉತ್ತಮರು ರಾಜಕೀಯದಿಂದ ದೂರ ಉಳಿದು ಬಹಳಷ್ಟು  ಮನನೊಂದಿದ್ದಾರೆ ಎಂದು ಹೇಳಿದರು.

ಸಜ್ಜನರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬಹುಮುಖ್ಯವಾಗಿದೆ. ದಿನದ 24 ಗಂಟೆ ರಾಜಕಾರಣ ಮಾಡದಿದ್ದರೂ ಕೂಡ ಈಗಾಗಲೇ ಯಾವ್ಯಾವ ವೃತ್ತಿ ಮಾಡುತ್ತಿದ್ದಾರೋ ಅದೇ ಕಾಯಕದಲ್ಲಿ ಮುಂದುವರಿಯುವ ಮೂಲಕ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಕ್ಕೆ ಬರಲಿ. ಯಾರೂ ಕೂಡ ಅಧಿಕಾರದ ಆಸೆ ಇಟ್ಟು ರಾಜಕಾರಣಕ್ಕೆ ಬರುವುದು ಬೇಡ, ತಾವು ಮಾಡುವ ಕೆಲಸದಿಂದ ಅಧಿಕಾರ ಮನೆ ಬಾಗಿಲಿಗೆ ಹುಡುಕಿಕೊಂಡು ಬರುವಂತ ವ್ಯಕ್ತಿತ್ವ ಬೆಳೆಸಿಕೊಳ್ಳಲಿ ಎಂದು ಹೇಳಿದರು.

ಕಾಂಗ್ರೆಸ್ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಆಸ್ತಿಯಲ್ಲ. ಬದಲಿಗೆ ಸ್ವಾಭಿಮಾನದ ಪಕ್ಷವಾಗಿದೆ. ಈ ಬಾರಿ ಎಲ್ಲೆಡೆ ಕಾಂಗ್ರೆಸ್ ಗಾಳಿ ಬೀಸುತ್ತಿದ್ದೂ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಯಾವ ರೀತಿ ಆಡಳಿತ ನಡೆಸಿದೆ ಎನ್ನುವುದು ರಾಜ್ಯದ ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ ಎಂದರು.

ಈ ಚುನಾವಣೆಯಲ್ಲಿ ಮತದಾರರು ಭ್ರಷ್ಟರು, ಅಯೋಗ್ಯರು, ಸ್ವಾರ್ಥಿಗಳು ಹಾಗೂ ಕುಟುಂಬದ ಹಿತ ಕಾಯುವವರಿಗೆ ಮತ ಹಾಕದೇ ಪ್ರತಿ ಕ್ಷೇತ್ರದಲ್ಲಿ ತುಲನೆ ಮಾಡುವ ಮೂಲಕ ಯಾವುದೇ ಆಮಿಷಗಳಿಗೆ ಬಲಿಯಾಗದೇ ನಂಬಿಕೆಗೆ ಅರ್ಹವಾದ ಉತ್ತಮರಿಗೆ ಮಾತ್ರ ಮತ ನೀಡಿ ಎಂದು ಕರೆ ನೀಡಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್. ಆಂಜನೇಯ, ಕಾಂಗ್ರೆಸ್ ಜಾತ್ಯತೀತ ಪಕ್ಷ. ಎಲ್ಲ ಧರ್ಮ, ವರ್ಗದವರಿಗೆ ಕಾಂಗ್ರೆಸ್ ಆದ್ಯತೆ ನೀಡಿದೆ. ಕಾಂಗ್ರೆಸ್‌ಗೆ ಐತಿಹಾಸಿಕ ಹಿನ್ನೆಲೆಯ ಶಕ್ತಿ ಇದೆ. ರೈತರ, ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೋರಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ. ಸೇತುರಾಮ್ ಮಾತನಾಡಿ, ಕಾಂಗ್ರೆಸ್‌ನ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣವಾಗದೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಮುಖಂಡರು ಜಿಲ್ಲೆಯ 6 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗ್ಲ್ಲೆಲಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.

ಟಿಕೆಟ್ ಹಂಚಿಕೆಯಲ್ಲಿ ಸಣ್ಣಪುಟ್ಟ ಲೋಪವಾಗಿದ್ದರೆ ಮುಂಬರುವ ಚುನಾವಣೆಗಳಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಿ ನ್ಯಾಯ ಒದಗಿಸಲಾಗುವುದು. ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಕೈಜೋಡಿಸಿ ಶ್ರಮಿಸೋಣ ಎಂದು ಕರೆ ನೀಡಿದರು.

ಚಿತ್ರದುರ್ಗದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಮಂಜುನಾಥ್ ಮಾತನಾಡಿ, ಮತದಾರರು ಈಗಾಗಲೇ ಎರಡು ಸಲ ಸೋಲಿಸಿ ಶಿಕ್ಷೆ ನೀಡಿದ್ದಾಗಿದೆ. ನನ್ನಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ತಿದ್ದಿಕೊಳ್ಳುತ್ತೇನೆ ದಯಮಾಡಿ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಮತದಾರರು ಆಶೀರ್ವಾದ ಮಾಡಬೇಕು. ಇಂದು ಪ್ರಜ್ಞಾವಂತ ಮತದಾರರು ಕಾಂಗ್ರೆಸ್‌ನತ್ತ ನೋಡುತ್ತಿದ್ದಾರೆ. ಅಲ್ಲದೆ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ವಿವಿಧ ಪಕ್ಷಗಳ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಟಿ. ರಘುಮೂರ್ತಿ, ಸುಧಾಕರ್ ಮಾತನಾಡಿದರು.ಪೌರಸೇವಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಹೂವಿನಹೊಳೆ ಸಿ. ಮಹೇಶ್, ಎಚ್.ಎ. ಷಣ್ಮುಖಪ್ಪ, ನೂರುಲ್ಲಾ ಷರೀಷ್, ಡಾ. ತಿಪ್ಪೇಸ್ವಾಮಿ, ಕೆ.ಪಿ. ಪ್ರಶಾಂತ್‌ಕುಮಾರ್, ಡಿ.ಎನ್. ಮೈಲಾರಪ್ಪ, ಜಗದೀಶ್, ಆರ್. ಚಂದ್ರಯ್ಯ, ಅಖಿತ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕೆ. ಕುಮಾರಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT