ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭ್ರತೆಗೊಂದು ಕಿರು ಹೆಜ್ಜೆ...

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅಂದು ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಜನ ಬೀದಿಗಿಳಿದಿದ್ದರು. ಎಲ್ಲರ ಕೈಯಲ್ಲೂ ಪೊರಕೆ ನಲಿದಾಡುತ್ತಿದ್ದವು. ಓಣಿ, ಬಡಾವಣೆ, ಮೋರಿ, ಚರಂಡಿ ಎಲ್ಲೆಂದರಲ್ಲಿ ಈ ಪೊರಕೆ ತನ್ನ ಚಾಕಚಕ್ಯತೆ ತೋರುತ್ತಿತ್ತು!

ಅರೆ, ಇದೇನಿದು ಪೊರಕೆ ಮಹಿಮೆ ಎಂದುಕೊಂಡಿರಾ? ಹೌದು. ಅಂದು ಸ್ವಾತಂತ್ರ್ಯದ ಸಂಭ್ರಮದಲ್ಲಿ ದೇಶವೆಲ್ಲ ತೇಲಾಡುತ್ತಿದ್ದಾಗ, ದಾವಣಗೆರೆ, ಬೆಳಗಾವಿ, ಹಾವೇರಿ, ಧಾರವಾಡ, ಚಿತ್ರದುರ್ಗ ಜಿಲ್ಲೆಗಳ ಹಲವು ಗ್ರಾಮಗಳು ಕೊಳೆಯ ಬಂಧನದಿಂದ ಮುಕ್ತಗೊಂಡಿದ್ದವು. ಓಣಿ, ಬಡಾವಣೆ, ಮೋರಿ, ಚರಂಡಿ, ಕಳೆಗಳಿಗೆ ಶಾಪಮೋಕ್ಷವಾಗಿತ್ತು. ಗಬ್ಬು ವಾಸನೆಯ ಚರಂಡಿಗಳು ಶುಚಿಯಾದುವು. ಪ್ಲಾಸ್ಟಿಕ್‌ ಪ್ರತ್ಯೇಕಗೊಂಡು ಇನ್ನೊಂದು ಚೀಲ ಸೇರಿದವು. ಕಸ, ರಾಡಿಗಳಿದ್ದ ಓಣಿಗಳಲ್ಲಿ ಪೊರಕೆ ಸದ್ದುಮಾಡಿತು. ಬಯಲು ಶೌಚದಿಂದಾಗುವ ತೊಂದರೆಗಳ ಪಟ್ಟಿ ಕರಪತ್ರದ ಮೂಲಕ ಜನಮನ ತಲುಪಿದವು.

ನೀರೆಯರಿಂದ ನೀರಿನ ನೈರ್ಮಲ್ಯದ ಪಾಠವೂ ನಡೆಯಿತು. ಒಟ್ಟಿನಲ್ಲಿ ಗ್ರಾಮಗಳೆಲ್ಲ ಸಂಪೂರ್ಣ ಶುಭ್ರತೆಗೆ ಮುನ್ನುಡಿ ಬರೆದಿದ್ದವು.

ಇದು ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯ ಅಭಿಯಾನದಲ್ಲಿ ಕಂಡುಬಂದ ದೃಶ್ಯ. ಸ್ವ-ಸಹಾಯ ಸಂಘಗಳ ಸದಸ್ಯರ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಅಂದು ನಾಂದಿ ಹಾಡಲಾಯಿತು.

‘ಮನೆಯಲ್ಲಿ ಶೌಚಾಲಯವಿದ್ದರೆ ದೇವರು ಓಡಿ ಹೋಗ್ತಾರೆ’, ‘ದೇವಾಲಯವಿದ್ದಲ್ಲಿ ಶೌಚಾಲಯ ನಿರ್ಮಿಸುವಂತಿಲ್ಲ. ದೇವರ ಕೋಪ, ಶಾಪಕ್ಕೆ ಒಳಗಾಗಬೇಕಾಗುತ್ತದೆ’ ಎಂಬಿತ್ಯಾದಿ ನಂಬಿಕೆ ಈ ಭಾಗದ ಜನರದ್ದು. ಆದ್ದರಿಂದ ಶೌಚಾಲಯವಿದ್ದರೂ ಬಯಲು ಶೌಚದತ್ತಲೇ ಒಲವು. ಪುರುಷರೇನೋ ಸುಧಾರಿಸಿಯಾರು ಬಿಡಿ, ಮಹಿಳೆಯರ ಪಾಡು? ನರಕ ಯಾತನೆ. ಅದಕ್ಕಾಗಿಯೇ ಅಭಿಯಾನದಲ್ಲಿ ಬಯಲು ಶೌಚದ ದುಷ್ಪರಿಣಾಮಗಳನ್ನು ಮನೆಮನೆಗೆ ಭೇಟಿ ಮೂಲಕ ತಿಳಿಸಲಾಯಿತು.

ಮನೆ ಮುಂದಿರುವ ರಾಡಿಯನ್ನು, ಕಸವನ್ನು ತೆಗೆದು ಶುಚಿ ಮಾಡಲು ಪಂಚಾಯಿತಿಯವರೇ ಬರಬೇಕು  ಎನ್ನುವುದು ಬಹುತೇಕ ಅಮ್ಮಂದಿರ ಅಳಲು. ಆದ್ದರಿಂದ ರಾಡಿಯ ವಾಸನೆಯ ಮಧ್ಯೆ ಜೀವನ. ಇಂಥವರಿಗೆ ಆರೋಗ್ಯವೇ ಭಾಗ್ಯ ಎಂಬುದರ ಅರಿವು ಮೂಡಿಸಲಾಯಿತು. ಆರೋಗ್ಯ ಭಾಗ್ಯವಾಗಬೇಕಾದರೆ ಮನೆ, ಪರಿಸರವನ್ನು ಶುಚಿಗೊಳಿಸಿದರೆ ಮಾತ್ರ ಸಾಧ್ಯವೆನ್ನುವ ಸತ್ಯವನ್ನು ಅಮ್ಮಂದಿರಿಗೆ ತಿಳಿಹೇಳಿ ಮನಸ್ಸನ್ನು ಪರಿವರ್ತಿಸುವ ಕೆಲಸ ಅಭಿಯಾನ ಆರಂಭಿಸಿತು.

ಮನೆಸುತ್ತ ಕಳೆಗಿಡಗಳು ಬೆಳೆದಿವೆ. ಮನೆಯ ಮುಂದೆ ಚಿಕ್ಕ ಮಕ್ಕಳು ಬಹಿರ್ದೆಸೆಯನ್ನು ಪೂರೈಸುತ್ತವೆ. ಸಾರ್ವಜನಿಕ ಕುಡಿಯುವ ನೀರಿನ ನಲ್ಲಿಗಳಲ್ಲಿ ನೀರು ಸೋರುತ್ತಲೇ ಇರುತ್ತದೆ. ಸೋರಿದ ನೀರು ಚರಂಡಿ ಸೇರಿ ರಾಡಿಯಾಗುತ್ತದೆ. ಮೂಗುಮುಚ್ಚಿಕೊಳ್ಳುವಂಥ ಸ್ಥಿತಿ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ತಮಗೇನೂ ಸಂಬಂಧವಿಲ್ಲ ಎನ್ನುವ ನಾಗರಿಕರ ಕದವನ್ನು ತಟ್ಟುವ ಪ್ರಯತ್ನವನ್ನು  ಅಭಿಯಾನ ಮಾಡುತ್ತಿದೆ.
 
ಸ್ವಾತಂತ್ರದ ಬಳಿಕ ದೇಶವು ಪ್ರಗತಿಯಲ್ಲಿದೆ. ಆದರೆ ಸ್ವಚ್ಛ ಭಾರತವಾದರೆ ಮಾತ್ರ ಸ್ವತಂತ್ರ ಭಾರತಕ್ಕೆ ಸನ್ಮಾನ ಪ್ರಾಪ್ತಿ ಎನ್ನುವುದು ಅಭಿಯಾನದ ಕನಸನ್ನು ಹೊತ್ತ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶಯ.

ರಾಜಧಾನಿಯಲ್ಲಿ ಪೌರಕಾರ್ಮಿಕರ ಮುಷ್ಕರ ನಡೆದಾಗ ಕಸದ ರಾಶಿ ಬಿದ್ದಿತ್ತು. ವಿದೇಶಿ ಮಾಧ್ಯಮಗಳು ಕೆಟ್ಟದಾಗಿ ವರದಿ ಮಾಡಿದ್ದುವು. ನಮ್ಮ ಆಡಳಿತದ ಮನಸ್ಸುಗಳಿಗೆ ಗಾಢತೆ ತಟ್ಟಿಲ್ಲ, ಮುಟ್ಟಿಲ್ಲ. ಹಕ್ಕುಗಳ ಕುರಿತು ಹೋರಾಟ ಮಾಡುವ ನಮಗೆ ಕರ್ತವ್ಯಗಳೂ ಇವೆಯಲ್ಲ.

ಸಾಮೂಹಿಕವಾಗಿ ಜನರನ್ನು ಒಂದೆಡೆ ಸೇರಿಸಿ ಗ್ರಾಮದ ಸ್ವಚ್ಛತೆ ಮಾಡಿರುವುದು ಇದೇ ಮೊದಲು ಎಂದು ಹಿರಿಯೂರಿನ ಶೋಭಾ ನುಡಿದರೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಯಾವ ರೀತಿ ಸಂರಕ್ಷಿಸಬೇಕು ಎಂಬುದರ ಬಗ್ಗೆ ಅರಿವಾಯಿತು ಎನ್ನುತ್ತಾರೆ ದಾವಣಗೆರೆ ಗ್ರಾಮಪಂಚಾಯತ್ ಸದಸ್ಯ ಮಹೇಶಪ್ಪ. ನಮ್ಮೂರಲ್ಲಿ ಕಸದ ಡಬ್ಬವಿಲ್ಲ. ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿ ತಿಂಗಳೊಳಗೆ ಕಸದ ಡಬ್ಬ ಮಾಡಿಸುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿರುವುದು ಅಭಿಯಾನದ ಫಲಶ್ರುತಿ.

ಹೆಗ್ಗಡೆಯವರ ಸ್ವಚ್ಛ ಭಾರತದ ಆಶಯಗಳು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಿರಂತರ ಗಟ್ಟಿಯಾಗುತ್ತಿವೆ. ಗ್ರಾಮೀಣ  ನೈರ್ಮಲ್ಯ ಈ ಯೋಜನೆಯ ಪ್ರಮುಖ ಅಂಗ. ಈ ಅಭಿಯಾನ ಕೇವಲ ಒಂದು ದಿನದ ಸ್ವಚ್ಛತೆ ಆಗಿಲ್ಲ, ಬದಲಿಗೆ ಜನಮನದಲ್ಲಿ ಶುಚಿತ್ವದ ಅರಿವು ಮೂಡಿಸುವಲ್ಲಿ ಕಿರು ಹೆಜ್ಜೆ ಊರಿದೆ. ಅಭಿಯಾನವು ಜನರಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ.

ಮನೆಯ ಅಮ್ಮಂದಿರ ಮಾತುಕತೆಯಲ್ಲಿ ಶುಚಿತ್ವದ ಅರಿವನ್ನು ರೂಢಿಸಿಕೊಳ್ಳುವ ವಿಚಾರಗಳು ವ್ಯಕ್ತವಾಗುತ್ತಿವೆ. ಕೆಲವೆಡೆ ಜನರೇ ಗ್ರಾಮ ಸಮಿತಿಗಳನ್ನು ರೂಪಿಸಲು ಮನಸ್ಸು ಮಾಡಿದ್ದಾರೆ  ಎಂದು ಒಟ್ಟು ಅಭಿಯಾನದ ಫಲಿತಾಂಶವನ್ನು ಕಟ್ಟಿಕೊಡುತ್ತಾರೆ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ ಹಾಗೂ ಅಭಿಯಾನದ ಸಾರಥ್ಯ ವಹಿಸಿರುವ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್.ಮಂಜುನಾಥ್. ಗ್ರಾಮಾಭಿವೃದ್ಧಿ ಯೋಜನೆಯು ಅಭಿಯಾನದ ಮೂಲಕ ಚಿಕ್ಕ ಹೆಜ್ಜೆಯಿಟ್ಟಿದೆ.

ಶಾಲೆ, ಸ್ಥಳೀಯ ಸಂಸ್ಥೆಗಳು ಜತೆಸೇರಿವೆ. ನಮ್ಮ ನಡುವೆ ಪರಿಸರದ ಕುರಿತು ಮಾತನಾಡುವ ಅರೆಸರಕಾರಿ ಸಂಸ್ಥೆಗಳು ಸಾಕಷ್ಟಿವೆ. ಪರಿಸರವನ್ನು ಉಸಿರಾಗಿಸಿಕೊಂಡ ಸಂಘಟನೆಗಳು ತಾಲ್ಲೂಕಿಗೊಂದರಂತೆ ಇವೆ!

ಇವೆಲ್ಲ ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಇಂತಹ ಸಾರ್ವಜನಿಕ ಅಭಿಯಾನ ಹಮ್ಮಿಕೊಂಡರೆ ಎಷ್ಟು ಚೆನ್ನ ಅಲ್ಲವೇ? ನವಭಾರತದ ನಿರ್ಮಾಣ ಸಮಾಜದಿಂದಲೇ ಮೈತಳೆಯಬೇಕು. ಆಗಲೇ ಸ್ವಾತಂತ್ರ್ಯದ ಅರ್ಥ ಪುಷ್ಟಿಗೊಳ್ಳುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT