ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ರದ್ದು: ಜಿಲ್ಲಾಡಳಿತ

ಶ್ರೀರಂಗಪಟ್ಟಣ ಪ್ರವಾಸಿ ತಾಣಗಳಲ್ಲಿ ವಾಹನ ನಿಲುಗಡೆ
Last Updated 2 ಜುಲೈ 2013, 7:02 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲ ಪ್ರವಾಸಿ ತಾಣಗಳ ವಾಹನ ಪಾರ್ಕಿಂಗ್ ಶುಲ್ಕವನ್ನು ಜಿಲ್ಲಾಡಳಿತ ಸೋಮವಾರ ರದ್ದುಪಡಿಸಿದೆ.

ಇಲ್ಲಿನ ಟಿಪ್ಪು ಸಮಾಧಿ ಸ್ಥಳವಾದ ಗುಂಬಸ್, ಕಾವೇರಿ ಸಂಗಮ, ಶ್ರೀರಂಗನಾಥಸ್ವಾಮಿ ದೇವಾಲಯ, ನಿಮಿಷಾಂಬ ದೇವಾಲಯ ಹಾಗೂ ಗೋಸಾಯಿಘಾಟ್‌ಗಳ ವಾಹನ ಪಾರ್ಕಿಂಗ್ ಶುಲ್ಕವನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಮಂಗಳವಾರದಿಂದ ಪ್ರವಾಸಿ ವಾಹನಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ತಿಳಿಸಿದ್ದಾರೆ. ಟಿಪ್ಪು ಬೇಸಿಗೆ ಅರಮನೆ ದರಿಯಾದೌಲತ್ ಬಳಿ ಕೂಡ ವಾಹನ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.

2012-13ನೇ ಆರ್ಥಿಕ ವರ್ಷದಲ್ಲಿ ರಂಗನಾಥಸ್ವಾಮಿ ದೇವಾಲಯ ಪಾರ್ಕಿಂಗ್‌ನಿಂದ ರೂ.48 ಲಕ್ಷ, ಗುಂಬಸ್‌ನಿಂದ ರೂ.30 ಲಕ್ಷ, ಗೋಸಾಯಿಘಾಟ್‌ನಿಂದ ರೂ. 9.40 ಲಕ್ಷ, ನಿಮಿಷಾಂಬ ದೇವಾಲಯದಿಂದ ರೂ.33 ಲಕ್ಷ ಹಾಗೂ ಕಾವೇರಿ ಸಂಗಮದ ಪಾರ್ಕಿಂಗ್‌ನಿಂದ ರೂ.25 ಲಕ್ಷ ಆದಾಯ ಬಂದಿತ್ತು.

ಈ ಪೈಕಿ ನಿಮಿಷಾಂಬ ದೇವಾಲಯ ಹಾಗೂ ಕಾವೇರಿ ಸಂಗಮದ ಪಾರ್ಕಿಂಗ್ ಶುಲ್ಕವನ್ನು ಮಾತ್ರ ಪುರಸಭೆ ಸಂಗ್ರಹಿಸುತ್ತಿತ್ತು. ರಂಗನಾಥಸ್ವಾಮಿ ದೇವಾಲಯದ ಪಾರ್ಕಿಂಗ್ ಶುಲ್ಕ ಆ ದೇವಾಲಯಕ್ಕೆ, ಗುಂಬಸ್ ಪಾರ್ಕಿಂಗ್ ಶುಲ್ಕ ವಕ್ಫ್ ಮಂಡಳಿಗೆ ಹಾಗೂ ಗೋಸಾಯಿ ಘಾಟ್ ವಾಹನ ಪಾರ್ಕಿಂಗ್ ಶುಲ್ಕ ಮುಜರಾಯಿ ಇಲಾಖೆಗೆ ಸಲ್ಲುತ್ತಿತ್ತು.

ಶಾಸಕ ಸ್ವಾಗತ: ಪುರಸಭೆ ವ್ಯಾಪ್ತಿಯ ಪ್ರವಾಸಿ ತಾಣಗಳ ಬಳಿ ವಾಹನ ಪಾರ್ಕಿಂಗ್ ಶುಲ್ಕ ರದ್ದುಪಡಿಸಿರುವ ಜಿಲ್ಲಾಡಳಿತದ ಕ್ರಮವನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಸ್ವಾಗತಿಸಿದ್ದಾರೆ. ವಾಹನ ಪಾರ್ಕಿಂಗ್ ಶುಲ್ಕ ರದ್ದುಪಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿರುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಆದರೆ ಪ್ರವಾಸಿ ತಾಣಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಆದಾಯ ತಪ್ಪಲಿದ್ದು, ಆ ಹಣವನ್ನು ಸರ್ಕಾರ ತುಂಬಿಕೊಡಬೇಕು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT