ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ವಸೂಲಿ: ಪರ-ವಿರೋಧದ ಹಗ್ಗ ಜಗ್ಗಾಟ

Last Updated 20 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಬೆಳಗಾವಿ: ಕಂಟೋನ್ಮೆಂಟ್ ವ್ಯಾಪ್ತಿ ಪ್ರವೇಶಿಸುವ ವಾಣಿಜ್ಯ ಉದ್ದೇಶದ ವಾಹನಗಳಿಗೆ ಶುಲ್ಕ ವಿಧಿಸುವ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಾ ಸಾಗಿದೆ. ಇದನ್ನು ವಿರೋಧಿಸಿ ಹಲವಾರು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ.

ಕಂಟೋನ್ಮೆಂಟ್ ಬೋರ್ಡ್ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ವಾಹನಗಳಿಗೆ ಶುಲ್ಕ ವಿಧಿಸಲು ನಿರ್ಧಾರಿಸಲಾಗಿದೆ. ದ್ವಿಚಕ್ರ, ಸಾರಿಗೆ ಬಸ್, ವೈಯಕ್ತಿಕ ಕಾರು, ಜೀಪು, ರೈತರ ಟ್ರ್ಯಾಕ್ಟರ್, ಸರ್ಕಾರಿ ಇಲಾಖೆಯ ವಾಹನಗಳಿಂದ ಯಾವುದೇ ಶುಲ್ಕ ವಸೂಲು ಮಾಡುವುದಿಲ್ಲ ಎನ್ನುತ್ತಾರೆ ಬೋರ್ಡ್ ಸಿಇಓ ವಿಜಯ ಆರ್.

`ವಾಣಿಜ್ಯ ವಸ್ತುಗಳನ್ನು ಸಾಗಾಟ ಮಾಡುವ ವಾಹನಗಳಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಆ ಮೂಲಕ ವಾರ್ಷಿಕ ಹತ್ತು ಲಕ್ಷ ರೂಪಾಯಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸಂಚಾರ ಸಮಸ್ಯೆಯಾಗದಂತೆ ಶುಲ್ಕ ವಸೂಲಿ ಮಾಡಲಾಗುವುದು~ ಎನ್ನುತ್ತಾರೆ ಅವರು.

ಆದರೆ ಇದಕ್ಕೆ ಕರ್ನಾಟಕ ನವ ನಿರ್ಮಾಣ ಪಡೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾನೂನಿನ್ವಯ ಬೋರ್ಡ್‌ಗೆ ಶುಲ್ಕ ವಿಧಿಸುವ ಯಾವುದೇ ಅಧಿಕಾರವಿಲ್ಲ. ಆರಂಭದಲ್ಲಿ ವಾಣಿಜ್ಯ ವಾಹನಗಳಿಗೆ ಎಂದು ಹೇಳುವ ಅವರು, ಮುಂದಿನ ದಿನಗಳಲ್ಲಿ ಎಲ್ಲ ವಾಹನಗಳಿಗೆ ವಿಸ್ತರಿಸುತ್ತಾರೆ ಎನ್ನುವುದು ಪಡೆಯ ಅಧ್ಯಕ್ಷ ರಾಜೀವ ಟೋಪಣ್ಣವರ ಅಭಿಪ್ರಾಯ.

ಶುಲ್ಕ ವಸೂಲಿ ಮಾಡುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರೂ ಪ್ರತಿಭಟನೆ ಮಾಡಿದ್ದಾರೆ. ಈ ನಡುವೆಯೇ ನವ ನಿರ್ಮಾಣ ಪಡೆಯವರು ವಿಷಯವನ್ನು ರಾಜ್ಯದ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೂ ತಂದಿದ್ದಾರೆ.

ಇಷ್ಟೆಲ್ಲ ವಿರೋಧದ ನಡುವೆಯೂ ಶುಲ್ಕು ವಸೂಲಿಗೆ ನಾಕಾ (ಶುಲ್ಕ ವಸೂಲಿ ಕೇಂದ್ರ)ಗಳನ್ನು ನಿರ್ಮಿಸಿರುವ ಕಂಟೋನ್ಮೆಂಟ್ ಬೋರ್ಡ್ ಶುಕ್ರವಾರದಿಂದ ಶುಲ್ಕ ವಸೂಲಿಯನ್ನು ಆರಂಭಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ನವ ನಿರ್ಮಾಣ ಪಡೆಯ ಕಾರ್ಯಕರ್ತರು ನಾಕಾಗಳಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾರೆ.
ಬೋರ್ಡ್‌ನವರು ಮಿಲಿಟರಿಯವರ ಬಂದೋಬಸ್ತ್‌ನಲ್ಲಿ ಶುಕ್ರವಾರದಿಂದ ಮತ್ತೆ ಶುಲ್ಕ ವಸೂಲಿ  ಆರಂಭಿಸಿದ್ದಾರೆ.

ಜಾರ್ಖಂಡ್ ರಾಜ್ಯದ ರಾಮಘಡ ಕಂಟೋನ್ಮೆಂಟ್ ಬೋರ್ಡ್ ಶುಲ್ಕ ವಿಧಿಸುತ್ತಿತ್ತು. ಅದನ್ನು ಪ್ರಶ್ನಿಸಿ ಅಲ್ಲಿನ ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಸುಪ್ರೀಂಕೋರ್ಟ್ ಶುಲ್ಕ ವಸೂಲಿ ಮಾಡುವ ಅಧಿಕಾರ ಬೋರ್ಡ್‌ಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇಲ್ಲಿ ಮಾತ್ರ ನ್ಯಾಯಾಲಯ ಆದೇಶದ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಪಡೆಯ ಅಧ್ಯಕ್ಷ ರಾಜೀವ ಟೋಪಣ್ಣವರ ದೂರುತ್ತಾರೆ.

ಶುಲ್ಕ ವಸೂಲಿ ವಿರೋಧಿಸಿ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದ್ದೇವೆ.  ಬೋರ್ಡ್‌ಗೆ ಮಂಗಳವಾರ ಈ ಕುರಿತು ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಅದನ್ನು ನೋಡಿಕೊಂಡು ಹೋರಾಟ ಮಾಡಲಾಗುವುದು ಎನ್ನುತ್ತಾರೆ ಅವರು.

`ಕಂಟೋನ್ಮೆಂಟ್ ಬೋರ್ಡ್ ಲಾಭದಲ್ಲಿದೆ. ಆಕ್ಟ್ರಾಯ್ ರದ್ದು ಮಾಡಿದ ನಂತರ ವರ್ಷಕ್ಕೆ ಮೂವತ್ತು ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಕೆಯುಡಬ್ಲುಸಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ.  ಆದರೂ ಶುಲ್ಕ ವಸೂಲಿ ಮಾಡುವುದು ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಈ ಕುರಿತು ಜನಪ್ರತಿನಿಧಿಗಳು ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ವಿರೋಧದ ನಡುವೆಯೂ ಶುಲ್ಕ ವಸೂಲಿ ಆರಂಭವಾಗಿದೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT