ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯ ಕೃಷಿಯಲ್ಲಿ ಖುಷಿ

ಅಮೃತ ಭೂಮಿ;
Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ರಾಸಾಯನಿಕ ಗೊಬ್ಬರದ ಬೆಲೆ ಗಗನಕ್ಕೆ ಏರಿದಂತೆ ಎಲ್ಲ ರೈತರ ಅದರಲ್ಲೂ ವಿಶೇಷವಾಗಿ ಕಾಫಿ, ಅಡಿಕೆಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರಲ್ಲಿ ಚಿಂತೆ ಮೂಡಿದೆ. ರಾಸಾಯನಿಕ ಗೊಬ್ಬರ ಬಳಸದಿದ್ದರೆ ಇಳುವರಿ ಕುಸಿತ, ಬಳಸಿದರೆ ಕೃಷಿಯಲ್ಲಿ ಲಾಭ ಕಷ್ಟ ಎಂಬ ಪರಿಸ್ಥಿತಿ ಇದೆ. ಆದರೆ ಕಳಸ ಸಮೀಪದ ತಲಗೋಡಿನ ಬಾಳೆಕೊಂಡದ ಸಹೋದರರಿಬ್ಬರು ಕಳೆದ 10 ವರ್ಷದಿಂದ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಶೂನ್ಯ ಕೃಷಿ ನಡೆಸುತ್ತಾ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಅವರ ಕೃಷಿ ಪದ್ಧತಿಯ ಪ್ರತ್ಯಕ್ಷ ವರದಿ ಇಲ್ಲಿದೆ.

ಶೂನ್ಯ ಕೃಷಿ ಸಾಧಕ ತಲಗೋಡಿನ ಬಾಳೆಕೊಂಡದ ಬಿ.ಆರ್.ನಾಗೇಶ್ ಅವರ ಮನೆಗೆ ನಾವು ಹೋದಾಗ ಮನೆಯಂಗಳದಲ್ಲಿದ್ದ ಅಡಿಕೆ ಸುಲಿಯುವ ಯಂತ್ರ ಸರಸರನೆ ಅಡಿಕೆ ಕಾಯಿ ಸುಲಿಯುತ್ತಿತ್ತು. ಮಹಿಳೆಯೊಬ್ಬರು ಯಂತ್ರಕ್ಕೆ ಅಡಿಕೆ ಸುರಿಯುವ ಜೊತೆಗೆ ಬೇಯಿಸಿದ ಅಡಿಕೆ ಹರಡುವ ಕೆಲಸವನ್ನೂ ಮಾಡುತ್ತಿದ್ದರು.

ಹಳೆಯ ಮನೆಯೊಳಗಿಂದ ಬಂದ ನಾಗೇಶ್ `ತೋಟಕ್ಕೆ ಹೋಗೋಣ ಬನ್ನಿ' ಎಂದು ದುರ್ಗಮ ರಸ್ತೆಯಲ್ಲಿ ಬೈಕ್ ಸವಾರಿಯ ಮೂಲಕ ತೋಟಕ್ಕೆ ಕರೆದೊಯ್ದರು.  ತೋಟದಲ್ಲಿದ್ದ ಕೆಂಪು ಬಾಳೆ, ರೊಬಸ್ಟಾ ತಳಿಗಳಲ್ಲಿ ಉತ್ತಮ ಎನ್ನಬಹುದಾದ ಗಾತ್ರದ ಗೊನೆಗಳು. ಸಾಲುಸಾಲು ಅಡಿಕೆ ಮರಗಳಲ್ಲೂ ಅಡಿಕೆ ಗೊನೆಗಳು ಕಟಾವಿಗೆ ಸಿದ್ಧವಾಗಿದ್ದವು.

ಕಾರ್ಮಿಕರಿಲ್ಲದ ತೋಟ
ಬೇರೆ ತೋಟಗಳಿಗೆ ಹೋಲಿಸಿದರೆ ತೋಟದಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿತ್ತು. ಈ ಬಗ್ಗೆ ನಾಗೇಶ್ ಅವರನ್ನು ಪ್ರಶ್ನಿಸಿದಾಗ ಅವರು, `ನಮ್ಮ ತೋಟದಲ್ಲಿ ಕಾರ್ಮಿಕರೇ ಇಲ್ಲ. ನಾವು ತೋಟಕ್ಕೆ ಗೊಬ್ಬರವನ್ನೂ ಹಾಕುವುದಿಲ್ಲ. ಕಳೆಯನ್ನೂ ತೆಗೆಯುವುದಿಲ್ಲ' ಎಂದಾಗ ನಮಗಂತೂ ಅಚ್ಚರಿ. ಮಲೆನಾಡಿನ ತೋಟಗಳಲ್ಲಿ ವರ್ಷಕ್ಕೆ ಎರಡು ಬಾರಿ ರಾಸಾಯನಿಕ ಗೊಬ್ಬರ ನೀಡುವುದು ಮತ್ತು ಎರಡು ಬಾರಿ ಕಳೆ ನಿವಾರಣೆ ಮಾಡುವುದು ಸಂಪ್ರದಾಯವೇನೋ ಎಂಬಷ್ಟು ಸರ್ವ ವ್ಯಾಪಿ. ಆದರೆ ನಾಗೇಶ್ ಯಾವುದೇ ಗೊಬ್ಬರ ಬಳಸುತ್ತಿಲ್ಲ ಎಂದು ಹೇಳಿದೊಡನೆ ಅಚ್ಚರಿ ಮೂಡಿತ್ತು. `ಹಾಗಾದರೆ ಗಿಡಗಳಿಗೆ ಏನನ್ನು ಕೊಡುತ್ತೀರಿ' ಎಂಬ ಕುತೂಹಲದ ಪ್ರಶ್ನೆಗೆ `ಏನೂ ಕೊಡುವುದಿಲ್ಲ...' ಎಂಬ ಉತ್ತರ ಅಷ್ಟೇ ನಿರ್ಲಿಪ್ತವಾಗಿ ಬಂತು.

ತೋಟಕ್ಕೆ ರಾಸಾಯನಿಕ ಗೊಬ್ಬರ ನೀಡುವುದನ್ನು 2000 ಇಸವಿಯಲ್ಲೇ ನಿಲ್ಲಿಸಿದ್ದೇವೆ. 2005ರಲ್ಲಿ ಸುಭಾಷ್ ಪಾಳೇಕರ್‌ರ ಶೂನ್ಯ ಕೃಷಿ ಬಗ್ಗೆ ತಿಳಿದಾಗಿನಿಂದ ಅಡಿಕೆ ತೋಟಕ್ಕೆ ಕೊಟ್ಟಿಗೆ ಗೊಬ್ಬರದ ಬೇಸಾಯವನ್ನೂ ಮಾಡಿಲ್ಲ ಎಂದ ನಾಗೇಶ್ ತಮ್ಮ ಕೃಷಿಯ ಗುಟ್ಟು ಬಿಚ್ಚಿಟ್ಟರು. ಗಿಡ ಮರಗಳು ಮಣ್ಣು ಮತ್ತು ಸುತ್ತಲಿನ ಪರಿಸರದಿಂದ ತಮಗೆ ಬೇಕಾದ ಪೋಷಕಾಂಶ ಪಡೆಯುತ್ತವೆ ಎಂಬುದನ್ನು ನಾಗೇಶ್ ಬಲವಾಗಿ ನಂಬಿದ್ದಾರೆ.

ರಾಸಾಯನಿಕ ಅಥವಾ ಬೇರೆ ಸಾವಯವ ಗೊಬ್ಬರ ಬಳಸದಿದ್ದರೆ ಇಳುವರಿ ಕಡಿಮೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಅವರು `ಯಾವುದೇ ಗೊಬ್ಬರ ಬಳಸದೆ ನಮ್ಮ ತೋಟದಲ್ಲಿ ಎಕರೆಗೆ 5-6 ಕ್ವಿಂಟಾಲ್ ಅಡಿಕೆ ಫಸಲು ಪಡೆಯುತ್ತಿದ್ದೇವೆ. ಬೇರೆ ತೋಟಗಳಲ್ಲಿ ಈ ಪ್ರಮಾಣ 8-10 ಕ್ವಿಂಟಾಲ್ ಇರಬಹುದು. ನಮ್ಮ ಉತ್ಪಾದನಾ ವೆಚ್ಚ ಕ್ವಿಂಟಾಲ್‌ಗೆ 3500 ರೂಪಾಯಿ. ಆದರೆ ಅವರ ಉತ್ಪಾದನಾ ವೆಚ್ಚ 9 ಸಾವಿರ ರೂಪಾಯಿ ಎಂದು ನಾಗೇಶ್ ಲೆಕ್ಕಾಚಾರ ಶುರು ಮಾಡಿದರು.

ರಾಸಾಯನಿಕ ಬಳಕೆ ನಿಷಿದ್ಧ
ಅಡಿಕೆ ಕೊಳೆ ರೋಗಕ್ಕೆ ಔಷಧಿಯನ್ನೂ ಹೊಡೆಯುವುದಿಲ್ಲವೇ ಎಂಬ ಪ್ರಶ್ನೆಗೆ ನಾಗೇಶ್ `ಆಗಸ್ಟ್‌ನಲ್ಲಿ ಒಂದು ಬಾರಿ ಬೋರ್ಡೋ ಸ್ಪ್ರೇ ಹೊಡೆಯುತ್ತೇವೆ ಅಷ್ಟೇ. ಸ್ಪ್ರೇ ಮತ್ತು ಅಡಿಕೆ ಕೊನೆ ತೆಗೆಯಲು ಒಟ್ಟು 50 ಆಳು ಕೆಲಸ ಬಿಟ್ಟರೆ ಐದೂ ಎಕರೆ ತೋಟದಲ್ಲಿ ಉಳಿದ ಕೆಲಸ ನಾವೇ ಮಾಡುತ್ತೇವೆ' ಎಂದರು. `15 ವರ್ಷದ ಹಿಂದೆ ನಮ್ಮ ಮನೆಯಲ್ಲಿ 18-20 ಕಾರ್ಮಿಕರು ಖಾಯಂ ಕೆಲಸ ಮಾಡುತ್ತಿದ್ದರು. ಈಗ ಒಬ್ಬ ಕಾರ್ಮಿಕರೂ ಇಲ್ಲ' ಎಂದು ನಾಗೇಶ್ ಶೂನ್ಯ ಕೃಷಿಯ ಅನುಕೂಲದ ವಿವರ ಪಟ್ಟಿ ಮಾಡಿದರು.
 
ತೋಟದಿಂದ ಮನೆಗೆ ಮರಳಿದಾಗ ನಾಗೇಶ್ ಅವರ ಅಣ್ಣ ಚಂದ್ರಶೇಖರ್ ಕೂಡ ತೋಟದಿಂದ ಮನೆಗೆ ಬಂದಿದ್ದರು. ಅವರು ಕೂಡ ಐದು ವರ್ಷದಿಂದ ಸಹೋದರನಿಂದ ಪ್ರೇರಿತರಾಗಿ ಶೂನ್ಯ ಕೃಷಿಯನ್ನೇ ನಡೆಸುತ್ತಿದ್ದಾರೆ. ತಮ ಎರಡು ಎಕರೆ ಕಾಫಿ ತೋಟಕ್ಕೂ ರಾಸಾಯನಿಕ ಗೊಬ್ಬರ ನೀಡದ ಅವರು ಸರಾಸರಿ ಇಳುವರಿ ಪಡೆಯುತ್ತಿದ್ದಾರೆ. ಕಾರ್ಮಿಕರ ಬದಲಿಗೆ ಸಹೋದರರಿಬ್ಬರೂ ಯಂತ್ರಗಳನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ.

ಕಳೆ ತೆಗೆಯುವ ಯಂತ್ರ, ಸರಕು ಸಾಗಿಸಲು ಜೀಪ್, ಅಡಿಕೆ ಸುಲಿಯುವ ಯಂತ್ರ, ಅಡಿಕೆ ಉದುರು ಮಾಡುವ ಯಂತ್ರದ ಜೊತೆಗೆ ವಿದ್ಯುತ್ ಉತ್ಪಾದಿಸುವ ಟರ್ಬೋ ಯಂತ್ರ, ಸೋಲಾರ್ ದೀಪಗಳು ಹೀಗೆ ತರಾವರಿ ಯಂತ್ರಗಳು ಇವರಿಗೆ ನೆರವಾಗುತ್ತಿವೆ. ಶೂನ್ಯ ಕೃಷಿಯಲ್ಲಿ ಖಂಡಿತವಾಗಿಯೂ ಖುಷಿ ಇದೆ ಎಂಬುದು ಸಹೋದರರ ಅನುಭವ. ಅವರ ಮನೆಯಿಂದ ನಾವು ಹೊರಟಾಗ ನಾಗೇಶ್ ನೀಡಿದ ಏಲಕ್ಕಿ ಬಾಳೆಯ ಅದ್ಭುತ ರುಚಿ ಕೂಡ ಶೂನ್ಯ ಕೃಷಿಯ ಸಮರ್ಥನೆ ಮಾಡುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT