ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯ ಬಂಡವಾಳದಲ್ಲಿ ‘ಟಿಎಲ್‌ಎಂ ಕೃಷಿ’!

ಶೈಕ್ಷಣಿಕ ಅಂಗಳ
Last Updated 21 ಡಿಸೆಂಬರ್ 2013, 6:57 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಇವರ ಹೆಸರು ಜೆ. ಮಹದೇವಯ್ಯ. ತಾಲ್ಲೂಕಿನ ಪಿ. ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ. ಆದರೆ, ಶಿಕ್ಷಕ ವರ್ಗ ಇವರನ್ನು ‘ಟಿಎಲ್‌ಎಂ ಮೇಷ್ಟ್ರು’ ಎಂದು ಕರೆಯುವ ಮಟ್ಟಿಗೆ ಇವರ ಹೆಸರು ಜನಜನಿತವಾಗಿದೆ.

ಜೆ. ಮಹದೇವಯ್ಯ ಕಲಿಕೋಪಕರಣ (ಟಿಎಲ್‌ಎಂ) ಸಿದ್ದಪಡಿಸುವಲ್ಲಿ ಎತ್ತಿದ ಕೈ. ಇವರ ಕೈಯಲ್ಲಿ ನಿರುಪಯುಕ್ತ ವಸ್ತುಗಳು ಕಲೆಯಾಗಿ ಅರಳುತ್ತವೆ. ವಿದ್ಯಾರ್ಥಿಗಳು ಬಿಸಾಡುವ ನೋಟ್‌ಬುಕ್‌ ‘ಪದಚಕ್ರ’ವಾಗುತ್ತದೆ. ಚಹದ ಲೋಟ ‘ಹೂ ಕುಂದ’ ವಾಗುತ್ತದೆ.

ಬಟ್ಟೆ ಅಂಗಡಿಯ ತ್ಯಾಜ್ಯ ‘ಜಾಣರ ಜಾರುಪಟ್ಟಿ’ಯಾಗಿ ರೂಪ ಪಡೆಯುತ್ತದೆ. ಮಹದೇವಯ್ಯ ತಮ್ಮ 32 ವರ್ಷಗಳ ಶಿಕ್ಷಕ ಸೇವೆಯಲ್ಲಿ ವಿವಿಧ ತಾಲ್ಲೂಕುಗಳ ಶಾಲೆಗಳಲ್ಲಿ, ಸಹಸ್ರಾರು ಕಲಿಕೋಪಕರಣ ತಯಾರಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈಚೆಗೆ ತಾಲ್ಲೂಕಿನ ಪಿ. ಹೊಸಹಳ್ಳಿ ಶಾಲೆಯಲ್ಲಿ ನಡೆದ ‘ಅಕ್ಷರ ಜಾತ್ರೆ’ ಕಾರ್ಯಕ್ರಮಕ್ಕೆ ಆಕರ್ಷಕ ರಥವನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಕನ್ನಡ ವರ್ಣಮಾಲೆಯ 49 ಅಕ್ಷರಗಳಿಂದ ರಥವನ್ನು ಅಲಂಕರಿಸಿ ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆದಿದ್ದಾರೆ.

ತಾಲ್ಲೂಕಿನ ಆರತಿಉಕ್ಕಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರಿಗೆ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ತಾಲ್ಲೂಕು ಮಟ್ಟದಲ್ಲಿ ಈ ಶಾಲೆ ಸತತ ಮೂರು ವರ್ಷ ಪ್ರಥಮ ಸ್ಥಾನ ಪಡೆಯಲು ಕಾರಣಕರ್ತರಾಗಿದ್ದಾರೆ. ನೆಲಮನೆ, ಎಂ. ಶೆಟ್ಟಹಳ್ಳಿ, ಪಾಂಡವಪುರ ತಾಲ್ಲೂಕಿನ ಜಯಂತಿನಗರ, ಬ್ಯಾಟೆತಿಮ್ಮನ ಕೊಪ್ಪಲು, ಮದ್ದೂರು ತಾಲ್ಲೂಕು ಕದಲೀಪುರ ಶಾಲೆಯಗಳಲ್ಲಿ ಇವರು ಸೇವೆ ಸಲ್ಲಿಸಿದ್ದು, ನಲಿಕಲಿಗೆ ಅಗತ್ಯ ಕಲಿಕೋಪರಣ ಸಿದ್ದಪಡಿಸಿದ್ದಾರೆ.

ಜೆ. ಮಹದೇವಯ್ಯ ಅವರು ಸಿದ್ಧಪಡಿಸಿದ ಕಲಿಕೋಪಕರಣಗಳು ಆ ಶಾಲೆಗಳಿಗೆ ಮೆರಗು ತಂದುಕೊಟ್ಟಿದ್ದು, ಶಿಕ್ಷಕರ ಹೊರೆ ತಗ್ಗಿಸಿವೆ. ಪಾಂಡವವಪುರ ತಾಲ್ಲೂಕಿನ ಕ್ಯಾತನಹಳ್ಳಿ ಬಾಲಕರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭ ಇವರಿಗೆ ಜಿಲ್ಲಾ ಪ್ರಶಸ್ತಿ (1998) ಲಭಿಸಿದೆ. ಮಹದೇವಯ್ಯ ಅವರನ್ನು ಪ್ರಗತಿಯಲ್ಲಿ ಹಿಂದುಳಿದ ಶಾಲೆಗೆ ವರ್ಗಾಯಿಸಿ ಶಾಲೆಗಳಿಗೆ ನವ ಚೈತನ್ಯ ಕೊಡಿಸಲಾಗುತ್ತಿದೆ.

ಶಿಕ್ಷಕರಿಗೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿಯೂ ಕೆಲಸ ಮಾಡುವ ಮಹದೇವಯ್ಯ ತಮ್ಮ ಸಹೋದ್ಯೋಗಿಗಳಿಗೆ ಕಲಿಕಾ ಉಪಕರಣಗಳು ಮತ್ತು ಅವುಗಳ ಪರಿಣಾಮಕಾರಿ ಬಳಕೆ ಬಗ್ಗೆ ಸಲಹೆ ನೀಡುತ್ತಾ ಬಂದಿದ್ದಾರೆ. ಮಹದೇವಯ್ಯ ಅವರ ಮೊ. 94832 75966.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT