ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟರ್ ಸರ್ಕಾರದ ಅಂತ್ಯ ಸನಿಹ: ಬಿಎಸ್‌ವೈ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಹಾವೇರಿ: `ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಅಂತ್ಯ ಸಮೀಪಿಸಿದೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಚಿವ ಬಿ.ಜೆ.ಪುಟ್ಟಸ್ವಾಮಿ, ಸಂಸದ ಜಿ.ಎಸ್.ಬಸವರಾಜು ಅವರ ವಿರುದ್ಧ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕ್ರಮ ಕೈಗೊಂಡಿರುವುದಕ್ಕೆ ಹಾವೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, `ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಎಂಬಂತೆ  ಬಿಜೆಪಿ ಸರ್ಕಾರ ಬುದ್ಧಿಹೀನ ಕೆಲಸ ಮಾಡುವ ಮೂಲಕ ತನ್ನ ಅಂತ್ಯಕ್ಕೆ ತಾನೇ ನಾಂದಿ ಹಾಡಿಕೊಳ್ಳುತ್ತಿದೆ' ಎಂದರು.

`ಹಲವರ ವಿರೋಧ ಕಟ್ಟಿಕೊಂಡು ಡಿ.ವಿ.ಸದಾನಂದಗೌಡ ಅವರನ್ನು ಕೆಳಗಿಳಿಸಿ ಶೆಟ್ಟರ್ ಅವರನ್ನು ನಾನು ಮುಖ್ಯಮಂತ್ರಿ ಮಾಡಿದೆ. ನಾನು ಅವರಿಗೆ ಮಾಡಿದ ಅನ್ಯಾಯವಾದರೂ ಏನು? ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ತಪ್ಪಾ? ಅದಕ್ಕೆ ಪ್ರತಿಫಲವಾಗಿ ಅವರು ನನಗೆ ಕೊಟ್ಟಿದ್ದಾದರೂ ಏನು? ನನ್ನ ಬೆಂಬಲಿಗರಿಗೆ ಕಿರುಕುಳ ನೀಡುವುದೇ ನನಗೆ ಕೊಡುವ ಬಳುವಳಿಯೇ' ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.

`ನಮ್ಮ ಬೆಂಬಲಿಗರ ಮೇಲೆ ಏನೇ ಕ್ರಮ ಕೈಗೊಂಡರೂ ಹೆದರುವ ಪ್ರಶ್ನೆಯೇ ಇಲ್ಲ. ಇದರಿಂದ ನಮ್ಮ ಸಮಾವೇಶಕ್ಕೆ ಇನ್ನಷ್ಟು ಅನುಕೂಲವಾಗಲಿದೆ. ನಮ್ಮವರು ಸಮಾವೇಶದಲ್ಲಿ ಪಾಲ್ಗೊಳ್ಳಲು ಸರ್ವ ಸ್ವತಂತ್ರವಾಗಲಿದ್ದಾರೆ. ಇಂತಹ ಬೆದರಿಕೆ ತಂತ್ರಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ' ಎಂದು ಗುಡುಗಿದರು.

`ನಾನು ಮೊದಲೇ ಹೇಳಿದಂತೆ ಯಾವತ್ತು ನಾನಾಗಿಯೇ ಶೆಟ್ಟರ್ ಸರ್ಕಾರ ಬೀಳಿಸಲು ಯತ್ನಿಸುವುದಿಲ್ಲ. ಅವರಾಗಿಯೇ ಅನಾಹುತ ಮಾಡಿಕೊಂಡು
ಸರ್ಕಾರವನ್ನು ಬೀಳಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ನಾಳೆ ನಡೆಯುವ ಸಮಾವೇಶಕ್ಕೆ ಶಾಸಕ, ಸಚಿವರು ಸೇರಿದಂತೆ ಯಾರನ್ನು ಆಹ್ವಾನಿಸಿಲ್ಲ. ಅವರಾಗಲೇ ಬಂದರೆ, ಯಾರನ್ನು ತಡೆಯುವುದಿಲ್ಲ' ಎಂದು ಹೇಳಿದರು.

ಚಹಾಕೂಟದ ಮಾಹಿತಿ ಇಲ್ಲ:
`ಹಾವೇರಿಯಲ್ಲಿ ಚಹಾಕೂಟ ನಡೆಯುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದರಿಂದ ಯಾವ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂಬುದರ ಬಗ್ಗೆಯೂ ಗೊತ್ತಿಲ್ಲ. ನಾನು ಯಾರನ್ನೂ ಆಹ್ವಾನಿಸುವ ಪ್ರಶ್ನೆಯೇ ಇಲ್ಲ' ಎಂದು ಯಡಿಯೂರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT