ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟರ್‌ಗೆ ಲಿಂಗಾಯತ ಬಲ

Last Updated 1 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿ ಎಂದು ಜಗದೀಶ ಶೆಟ್ಟರ್ ಅವರ ಹೆಸರು ಪಕ್ಷದ ಕಡೆಯಿಂದ ಪ್ರಸ್ತಾಪ ಆಗಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪರ ಇದ್ದ ಅನೇಕ ಲಿಂಗಾಯತ ಶಾಸಕರು ಮತ್ತು ಉತ್ತರ ಕರ್ನಾಟಕದ ಶಾಸಕರು ತಮ್ಮ ವರಸೆ ಬದಲಿಸಿ, ಶೆಟ್ಟರ್ ಪಾಳಯಕ್ಕೆ ಸರಿದಿದ್ದಾರೆ. ಈ ನಡುವೆ ಮಠಾಧೀಶರೂ ಕಣಕ್ಕೆ ಇಳಿದು ಶೆಟ್ಟರ್ ಪರ ಲಾಬಿ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಹೊಸ ನಾಯಕನ ಆಯ್ಕೆ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಎರಡೂ ಬಣಗಳಲ್ಲಿ ಆತಂಕ ಹೆಚ್ಚಾಗಿದೆ. ಶಾಸಕರನ್ನು ತಮ್ಮತ್ತ ಸೆಳೆದು ಶಕ್ತಿ ಪ್ರದರ್ಶಿಸುವ ಕಸರತ್ತು ಬಿರುಸು ಪಡೆದಿದೆ. ಯಡಿಯೂರಪ್ಪ ಬಣ ಸಂಸದ ಡಿ.ವಿ.ಸದಾನಂದ ಗೌಡ ಅವರ ಪರ ನಿಂತಿದ್ದರೆ, ಈಶ್ವರಪ್ಪ, ಅನಂತಕುಮಾರ್ ಮತ್ತು ಅಶೋಕ ಬಣ ಶೆಟ್ಟರ್ ಪರ ಲಾಬಿ ನಡೆಸುತ್ತಿದೆ. ಅಂತಿಮವಾಗಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ಇನ್ನೂ ನಿಗೂಢವಾಗಿದೆ.

ಭಾನುವಾರ ರಾತ್ರಿ ಒಮ್ಮತದ ಆಯ್ಕೆ ಸಾಧ್ಯವಾಗದ ಕಾರಣ ವೀಕ್ಷಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ ಸಿಂಗ್ ದೆಹಲಿಗೆ ವಾಪಸಾಗಿದ್ದು, ಪುನಃ ಬರಲಿದ್ದಾರೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಹೊಸ ನಾಯಕನ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಈ ಸಭೆಯನ್ನು ಗಮನದಲ್ಲಿ ಇಟ್ಟುಕೊಂಡು ಎರಡೂ ಬಣಗಳಲ್ಲಿ ಶಾಸಕರ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಕಸರತ್ತು ತೀವ್ರಗೊಳಿಸಲಾಗಿದೆ. ಶೆಟ್ಟರ್ ಪರವಾಗಿ ಬಲ ಹೆಚ್ಚುತ್ತಿರುವುದು ಯಡಿಯೂರಪ್ಪ ಬಣವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪಕ್ಷಕ್ಕೆ ಬೆನ್ನೆಲುಬಾದ ಲಿಂಗಾಯತರಿಗೇ ಪಕ್ಷದ ನಾಯಕತ್ವ ನೀಡಬೇಕೆಂದು ಪಕ್ಷವೇ ತೀರ್ಮಾನಿಸಿದ ನಂತರ ಯಡಿಯೂರಪ್ಪ ಏಕೆ ವಿರೋಧಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಲಿಂಗಾಯತ ಮುಖಂಡರನ್ನು ಕಾಡುತ್ತಿದೆ. ಯಡಿಯೂರಪ್ಪ ಅವರ ವಿರುದ್ಧ ಲಿಂಗಾಯತ ನಾಯಕರನ್ನೇ ಎತ್ತಿಕಟ್ಟುವ ಮೂಲಕ ಅವರನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಪ್ರಯತ್ನವೂ ನಡೆದಿದೆ.

ಅನಂತಕುಮಾರ್ ಮುಖ್ಯಮಂತ್ರಿಯಾಗುವುದು ಬೇಡ ಎನ್ನುವ ಕಾರಣಕ್ಕೆ ಅನೇಕ ಶಾಸಕರು ಯಡಿಯೂರಪ್ಪ ಪರ ಇದ್ದರು. ಆದರೆ, ಪಕ್ಷ ಶೆಟ್ಟರ್ ಪರ ಇರುವ ಸೂಚನೆ ಸಿಕ್ಕ ನಂತರ ಎಲ್ಲರೂ ತಮ್ಮ ವರಸೆ ಬದಲಿಸಿರುವುದು ರಾಜಕೀಯ ಚಟುವಟಿಕೆ ತೀವ್ರಗೊಳ್ಳಲು ಕಾರಣವಾಗಿದೆ ಎಂದು ಗೊತ್ತಾಗಿದೆ.

ಈ ಸುಳಿವು ಅರಿತ ಯಡಿಯೂರಪ್ಪ ಬಣ ತಮ್ಮ ಜತೆಗಿದ್ದ ಎಲ್ಲ ಶಾಸಕರನ್ನೂ ಒಂದು ಕಡೆ ಕೂಡಿ ಹಾಕುವ ಕೆಲಸ ಮಾಡುತ್ತಿದೆ. ನಗರದ ಪಂಚತಾರಾ ಹೋಟೆಲ್ ಛಾನ್ಸರಿ ಪೆವಿಲಿಯನ್‌ನಲ್ಲಿ ಹಲವು ಶಾಸಕರನ್ನು ಉಳಿಸಿದೆ. ಇನ್ನೂ ಕೆಲವರಿಗೆ ನಗರದ ಹೊರವಲಯದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲೂ ವ್ಯವಸ್ಥೆ ಮಾಡಿದ್ದು, ಅಲ್ಲಿಗೆ ಶಾಸಕರನ್ನು ಇನ್ನೂ ಕರೆದೊಯ್ದಿಲ್ಲ.

ಇದರ ನಡುವೆಯೂ ಅಲ್ಲಿರುವ ಉತ್ತರ ಕರ್ನಾಟಕದ ಬಹುತೇಕ ಶಾಸಕರು ಶೆಟ್ಟರ್ ಅವರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. `ಮೊದಲೇ ನಿಮ್ಮ ಹೆಸರು ಹೇಳಿದ್ದರೆ ಖಂಡಿತ ಯಡಿಯೂರಪ್ಪ ಪರ ಹೋಗುತ್ತಿರಲಿಲ್ಲ~ ಎನ್ನತೊಡಗಿದ್ದಾರೆ.

ಈ ನಡುವೆ ವೀಕ್ಷಕರು ತಂಗಿದ್ದ ಅಶೋಕ ಹೋಟೆಲ್‌ನಲ್ಲೇ ಶೆಟ್ಟರ್ ಪರ ಶಾಸಕರು ಬೀಡುಬಿಟ್ಟಿದ್ದಾರೆ. ಅಲ್ಲೇ ಪಕ್ಷದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಕೂಡ ಉಳಿದಿದ್ದಾರೆ. ಅವರ ಜತೆ ಪಕ್ಷದ ಮುಖಂಡರಾದ ಈಶ್ವರಪ್ಪ, ಅನಂತಕುಮಾರ್, ಅಶೋಕ ಅವರು ಇಡೀ ದಿನ ಹಲವು ಸುತ್ತಿನ ಮಾತುಕತೆ ನಡೆಸಿದರು.

ಈ ಮುಖಂಡರು ಮತ್ತೊಂದು ಹೋಟೆಲ್‌ನಲ್ಲಿ ಪ್ರತ್ಯೇಕ ಸಭೆ ನಡೆಸಿ, ಶಾಸಕಾಂಗ ಪಕ್ಷದ ಸಭೆಯಲ್ಲಿ ಮತದಾನ ನಡೆದರೂ ಗೆಲ್ಲುವ ಹಾಗೆ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಅವರೂ ಕೈಹಾಕಿದ್ದಾರೆ.

ರೇಸ್‌ನಿಂದ ಹಿಂದಕ್ಕೆ: `ಯಡಿಯೂರಪ್ಪ ಪಕ್ಷವನ್ನೇ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ಬಣಕ್ಕೆ ಸರಿಯಾದ ಬುದ್ಧಿ ಕಲಿಸಬೇಕು~ ಎಂದು  ಅವರ ವಿರೋಧಿ ಬಣದಲ್ಲಿರುವ ಈಶ್ವರಪ್ಪ, ಶೆಟ್ಟರ್, ಅನಂತಕುಮಾರ್ ಮತ್ತು ಅಶೋಕ ಒಟ್ಟಾಗಿದ್ದಾರೆ. ಇವರಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಎಲ್ಲರೂ ಶೆಟ್ಟರ್ ಅವರಿಗೆ ಬೆಂಬಲಿಸಿ, ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ಈಶ್ವರಪ್ಪ ಅವರು ಪಕ್ಷದ ಸಂಘಟನೆಯಲ್ಲೇ ಉಳಿಯುವುದಾಗಿ ಹೇಳಿದ್ದಾರೆ. ಸದಾನಂದ ಗೌಡರ ಹೆಸರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಸ್ತಾಪ ಆಗುತ್ತಿದ್ದಂತೆ ಅಶೋಕ ಕೂಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅನಂತಕುಮಾರ್ ಕೂಡ ಇದೇ ಅಭಿಪ್ರಾಯಕ್ಕೆ ಬಂದಿದ್ದು, ಶೆಟ್ಟರ್ ಪರ ನಿಲ್ಲಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಮಠಾಧೀಶರ ರಂಗಪ್ರವೇಶ: ಭಾನುವಾರ ರಾತ್ರಿ ಶೆಟ್ಟರ್ ಹೆಸರು ಪಕ್ಷದ ಕಡೆಯಿಂದ ಅಂತಿಮಗೊಳ್ಳುತ್ತಿದ್ದಂತೆ ಆ ವಿಷಯ ಮಠಾಧೀಶರಲ್ಲೂ ಸಂಚಲನ ಉಂಟುಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕದ ಲಿಂಗಾಯತ ಮಠಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಾತ್ರಿಯೆಲ್ಲ ತಮ್ಮ ಭಾಗದ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಶೆಟ್ಟರ್ ಪರ ನಿಲ್ಲಲು ಸ್ವಾಮೀಜಿಗಳು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಶೆಟ್ಟರ್ ಅವರಿಗೆ ದೂರವಾಣಿ ಕರೆ ಮಾಡಿ ಅನೇಕರು ಮಾತುಕತೆ ನಡೆಸಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಮತದಾನವೇ ಆದರೆ, ಮತ ಹಾಕುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿ, ಮೈಸೂರಿನ ಜೆ.ಎಸ್.ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಜತೆಗೂ ದೂರವಾಣಿ ಮೂಲಕ ಶೆಟ್ಟರ್ ಮಾತನಾಡಿ, ಸಹಕರಿಸುವಂತೆ ಕೋರಿದ್ದಾರೆ. ಇದಕ್ಕೆ ಸ್ವಾಮಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.

ಮಠಾಧೀಶರು ಕೂಡ ಯಡಿಯೂರಪ್ಪ ಅವರನ್ನು ಮನವೊಲಿಸಿ, ಅವರ ಮೂಲಕವೇ ಶೆಟ್ಟರ್ ಹೆಸರು ಹೇಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ವೀರೇಂದ್ರ ಪಾಟೀಲ್ ನಂತರ ಉತ್ತರ ಕರ್ನಾಟಕದ ಲಿಂಗಾಯತರು ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗಿರುವ ಅವಕಾಶಕ್ಕೆ ಅಡ್ಡಿ ಮಾಡಬೇಡಿ ಎನ್ನುವ ಮನವಿ ಮಠಾಧೀಶರಿಂದಲೇ ಬಂದಿದೆ ಎಂದು ಗೊತ್ತಾಗಿದೆ.

ಮತದಾನಕ್ಕೂ ಸೈ: ಶೆಟ್ಟರ್ ಬಣ ಮೊದಲು ನಾಯಕನ ಆಯ್ಕೆಗೆ ಮತದಾನ ಬೇಡ ಎಂದು ವಾದ ಮಾಡುತ್ತಿತ್ತು. ಆದರೆ, ಶಾಸಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಾತು ಬದಲಿಸಿದ್ದು, ಮತದಾನ ನಡೆದರೂ ಪರವಾಗಿಲ್ಲ ಎನ್ನುವ ನಿಲುವಿಗೆ ಬಂದಿದೆ.

ಭಾನುವಾರ ವಿವಾದ ಇತ್ಯರ್ಥವಾಗದಂತೆ ನೋಡಿಕೊಂಡ ಆ ಬಣ, ಈಗ ಶಾಸಕರನ್ನು ತಮ್ಮ ಪರ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಸಂಖ್ಯೆ ಹೆಚ್ಚಾದ ಹಾಗೆ ಮಾತಿನ ವರಸೆ ಕೂಡ ಬದಲಿಸಿದ್ದು, ಹೊಸ ನಾಯಕನನ್ನು ಮತದಾನದ ಮೂಲಕವೇ ಆಯ್ಕೆ ಮಾಡಲಿ ಎಂದು ಹೇಳುತ್ತಿದೆ. ಆದರೆ ವೀಕ್ಷಕರು ಮತದಾನಕ್ಕೆ ಅವಕಾಶ ಕೊಡದೆ ಒಮ್ಮತದಿಂದ ನಾಯಕನ ಆಯ್ಕೆ ಮಾಡಲು ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.
 
ಈ ನಡುವೆ ತಾವು ಹೇಳಿದವರನ್ನು ಆಯ್ಕೆ ಮಾಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆಯನ್ನು ಯಡಿಯೂರಪ್ಪ ಬಣ ಹಾಕಿದ್ದು, ವರಿಷ್ಠರ ಜತೆ ಮಾತುಕತೆಗೆ ಲೆಹರ್‌ಸಿಂಗ್ ಅವರನ್ನು ದೆಹಲಿಗೆ ಕಳುಹಿಸಿಕೊಟ್ಟಿದೆ. ಯಡಿಯೂರಪ್ಪ ಅವರ ಕಾರ್ಯತಂತ್ರಗಳ ಬಗ್ಗೆ ವರಿಷ್ಠರು ಅಸಮಾಧಾನಗೊಂಡಿದ್ದು, ಅವರ ಕೋರಿಕೆ ಪ್ರಕಾರ ನಾಯಕನ ಆಯ್ಕೆ ನಡೆಯುವುದು ಅನುಮಾನ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT