ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟಿಹಳ್ಳಿ ಬಡಾವಣೆ ನಿವಾಸಿಗಳ ಗೋಳು

ಕೊನೆಗಾಣದ ಚರಂಡಿ ಸಮಸ್ಯೆ
Last Updated 23 ಏಪ್ರಿಲ್ 2013, 8:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚರಂಡಿಯಲ್ಲಿ ನಿಂತ ನೀರಿನಿಂದ ಬರುವ ದುರ್ವಾಸನೆ ಹಾಗೂ ಮಾಲಿನ್ಯದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿರುವ ಶೆಟ್ಟಿಹಳ್ಳಿ ಬಡಾವಣೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಾಗಿ ಹಿರಿಯ ನಾಗರಿಕರೇ ವಾಸವಿರುವ ಈ ಬಡಾವಣೆಯಲ್ಲಿ ಚರಂಡಿಗಳು ಸಮರ್ಪಕವಾಗಿ ಶುಚಿಗೊಳ್ಳದೆ ಹಲವು ದಿನಗಳೇ ಕಳೆದಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ.

ಮನೆಬಾಗಿಲು ಬಳಿಯೇ ಹರಿಯುವ ಚರಂಡಿ ನೀರು ಮನೆಯೊಳಗೆ ನುಸುಳಿ ಬರುವುದರಿಂದ ಅಲ್ಲಿನ ನಿವಾಸಿಗಳು ಒಂದು ರೀತಿಯ ಸಮಸ್ಯೆ ಎದುರಿಸಿದರೆ, ವಿಪರೀತವಾದ ಸೊಳ್ಳೆ ಕಾಟದಿಂದಲೂ ಅವರು ಬೇಸತ್ತಿದ್ದಾರೆ. ಅತ್ತ ಮನೆಗಳಲ್ಲೂ ಇರಲಾಗದೆ ಮತ್ತು ಹೊರಬರಲೂ ಆಗದೇ ಅಲ್ಲಿನ ನಿವಾಸಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

`ನಾವು ಇಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಿಂದ ಇರಲು ಬಯಸಿದ್ದೇವೆ. ಆದರೆ ಮನೆಯೆದುರೇ ಹರಿಯುವ ಚರಂಡಿ ನೀರು ಮನೆಯೊಳಗೆ ಹೊಕ್ಕಾಗ ತುಂಬ ಸಮಸ್ಯೆ ಎದುರಿಸುತ್ತೇವೆ. ದುರ್ವಾಸನೆಯು ಎಲ್ಲೆಡೆ ಹರಡುವ ಕಾರಣ ಮನೆಯ ಹೊರ ಆವರಣದಲ್ಲೂ ಕೂತುಕೊಳ್ಳಲು ಆಗದಂತಹ ಪರಿಸ್ಥಿತಿಯಿದೆ' ಎಂದು ಬೆಸ್ಕಾಂನ ನಿವೃತ್ತ ಎಂಜಿನಿಯರ್ ಸೀತಾರಾಮ ಗುಪ್ತಾ `ಪ್ರಜಾವಾಣಿ'ಗೆ ತಿಳಿಸಿದರು.

`ಚರಂಡಿ ನೀರು ಸುಗಮನವಾಗಿ ಹರಿಯುವುದಿಲ್ಲ. ಚರಂಡಿಯಲ್ಲಿ ಬೀಳುವ ತ್ಯಾಜ್ಯವಸ್ತುಗಳನ್ನು ಯಾರೂ ತೆರವುಗೊಳಿಸುವುದಿಲ್ಲ. ಚರಂಡಿಯಲ್ಲಿನ ನೀರು ಹರಿಯದೇ ಅಲ್ಲೇ ನಿಲ್ಲುವುದರಿಂದ ಹುಳಹುಪ್ಪಟೆಗಳ ಕಾಟವೂ ಹೆಚ್ಚಿದೆ. ನಗರಸಭೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಈ ಸಮಸ್ಯೆಗಳ ಕುರಿತು ಹಲವಾರು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ' ಎಂದು ಅವರು ತಿಳಿಸಿದರು.

`ಮನೆಮನೆಗೆ ತೆರಳಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚರಂಡಿಗಳನ್ನು ಶುಚಿಗೊಳಿಸುವ ಕಾರ್ಯವನ್ನು ಸಹ ಕೈಗೊಳ್ಳಬೇಕು. ಇದರಿಂದ ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುತ್ತದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT