ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಡ್‌ಗಳಿಗೆ ಬೆಂಕಿ; ಮಗು ಸಜೀವ ದಹನ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಿರೀಸಾವೆ (ಹಾಸನ ಜಿಲ್ಲೆ): ಕಾರ್ಮಿಕರ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿ, ನಾಲ್ಕು ವರ್ಷದ ಮಗುವೊಂದು ಸಜೀವ ದಹನವಾಗಿರುವ ದಾರುಣ ಘಟನೆ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಪುರ ಗೇಟ್ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಗುಲ್ಬರ್ಗ ಜಿಲ್ಲೆಯ ಸೆಡಂ ತಾಲ್ಲೂಕಿನ ಬೇಟಗೇರಿ ಗ್ರಾಮದ ಸಾಯಮ್ಮ ಎಂಬುವವರ ಪುತ್ರ ಹನುಮಂತ ಮೃತ ಮಗು. ಇವರ ಆರು ವರ್ಷದ ಇನ್ನೊಂದು ಮಗು ಆಟವಾಡಲು ಗುಡಿಸಲಿನಿಂದ ಹೊರಗೆ ಹೋಗಿದ್ದರಿಂದ ಪಾರಾಗಿದೆ. ಸಾಯಮ್ಮ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ತೀರಿಕೊಂಡಿದ್ದಾರೆ.

ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾರ್ಮಿಕರಿಗಾಗಿ ಹಲವು ಶೆಡ್‌ಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಯಾವುದೋ ಒಂದು ಶೆಡ್‌ಗೆ ಬೆಂಕಿ ತಗುಲಿತ್ತು. ಈ ಬೆಂಕಿ ಇತರ ಶೆಡ್‌ಗಳಿಗೂ ವ್ಯಾಪಿಸಿದ ಪರಿಣಾಮ 24 ಶೆಡ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ತೆಂಗಿನ ಸೋಗೆ ಮತ್ತು ಕಬ್ಬಿಣದ ಶಿಟ್‌ಗಳಿಂದ ಇಲ್ಲಿ ಸುಮಾರು 100 ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಇವುಗಳಲ್ಲಿ  500ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ.

ಶೆಡ್‌ಗಳಲ್ಲಿ ವಾಸಿಸುವ ಕಾರ್ಮಿಕರು ಸಾಮಾನ್ಯವಾಗಿ ಬೆಳಿಗ್ಗೆ 6ಕ್ಕೆ ಕೆಲಸಕ್ಕೆ ತೆರಳುತ್ತಾರೆ. ಶನಿವಾರವೂ ಎಲ್ಲರೂ ಇದೇ ಸಮಯಕ್ಕೆ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಮತ್ತು ಕೆಲವರು ಗುಡಿಸಲುಗಳ ಬಳಿ ಇದ್ದರು. 8 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ಸ್ಥಳದಲ್ಲಿದ್ದವರು ಬೆಂಕಿ ನಂದಿಸುವ ಪ್ರಯತ್ನ  ಮಾಡಿದರೂ ಅಗ್ನಿ ತಹಬದಿಗೆ ಬಾರದಿದ್ದಾಗ ಅಗ್ನಿ ಶಾಮಕ ದಳದವರನ್ನು ಕರೆಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಆಗಬಹುದಾದ ಇನ್ನಷ್ಟು ಅಪಾಯವಾಗುವುದನ್ನು ತಡೆದರು.

ಸಾಯಮ್ಮ ಅವರು ತಮ್ಮ ನಾಲ್ಕು ವರ್ಷದ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿ ಕೆಲಸಕ್ಕೆ ಹೋಗಿದ್ದರು. ಇನ್ನೂಬ್ಬ ಮಗ ಸುಂಕಪ್ಪ (6) ಗುಡಿಸಲಿನ ಮುಂದೆ ಆಟವಾಡುತ್ತಿದ್ದ. ಬೆಂಕಿ ಬಿದ್ದ ವಿಷಯ ತಿಳಿದು ಸಾಯಮ್ಮ ಸ್ಥಳಕ್ಕೆ ಬರುವಷ್ಟರಲ್ಲಿ ಮಗು ಸಂಪೂರ್ಣ ಬೆಂದು ಹೋಗಿತ್ತು.

ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಮಗುವನ್ನು ಕಾಪಾಡಲು ಆಗಲಿಲ್ಲ. ಘಟನೆ ನಡೆದಾಗ 20ಕ್ಕೂ ಹೆಚ್ಚು ಮಕ್ಕಳು ಶೆಡ್‌ಗಳ ಬಳಿ ಇದ್ದರು. ಬೆಂಕಿ ಜ್ವಾಲೆಯನ್ನು ಕಂಡು ದೂರಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.  ಡಿವೈಎಸ್‌ಪಿ ಪರುಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT