ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 0.5 ವ್ಯಾಟ್‌ ಕಡಿತ: ಸಿಎಂ

Last Updated 8 ಡಿಸೆಂಬರ್ 2013, 20:13 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ವರ್ಷ ವ್ಯಾಟ್‌­ನಲ್ಲಿ ಶೇಕಡಾ 0.5ರಷ್ಟು ಕಡಿತಗೊಳಿ­ಸಲು ಪರಿಶೀಲನೆ ಮಾಡಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾ­ರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿ­ಐ)ಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾ­ಲೋಚನಾ ಸಭೆಯಲ್ಲಿ ಮಾತ­ನಾ­ಡಿದ ಅವರು, ಹಿಂದಿನ ಸರ್ಕಾರಗಳು ಹೆಚ್ಚಿಸಿ­ರುವ ತೆರಿಗೆ ಕೈಗಾರಿಕೆಗಳ ಬೆಳ­ವಣಿಗೆಗೆ ಪೂರಕವಾಗಿಲ್ಲ ಎನ್ನುವ ಅಭಿ­ಪ್ರಾಯ ವ್ಯಕ್ತವಾಗಿದೆ. ಆದ್ದರಿಂದ, ಸರ್ಕಾರ ಅಲ್ಪಪ್ರಮಾಣದಲ್ಲಿ ವ್ಯಾಟ್‌ ಕಡಿತ­­ಗೊಳಿಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಲಿದೆ ಎಂದರು.

ಕೈಗಾರಿಕೆಗಳು ಬೆಂಗಳೂರಿಗೆ ಸೀಮಿತ­ವಾಗಬಾರದು. ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆಗಳ ಬೆಳವಣಿಗೆಯಾಗಬೇಕು. ಇದರಿಂದ ವಲಸೆ ತಡೆಗಟ್ಟಬಹುದು. ಬಂಡ­ವಾಳ ಹೂಡಿಕೆ ವಿಕೇಂದ್ರೀಕರಣ­ವಾಗಬೇಕು. ಆದ್ದರಿಂದ, ಸರ್ಕಾರ ರೂಪಿ­ಸುವ 2014–19ರ ಕೈಗಾರಿಕಾ ನೀತಿ­­ಯಲ್ಲಿ ಬಂಡವಾಳ ಹೂಡಿಕೆ ವಿಕೇಂದ್ರೀ­­ಕರಣ­ಕ್ಕೆ ಹೆಚ್ಚು ಒತ್ತು ನೀಡ­ಲಾಗುವುದು. ಕೈಗಾರಿಕೆಗಳ ಬೆಳವ­ಣಿ­ಗೆಗೆ ಪೂರಕ ವಾತಾವರಣ ನಿರ್ಮಿಸುವ ನೀತಿ ಇದಾ­ಗಲಿದೆ ಎಂದು ತಿಳಿಸಿದರು.

ಕರ್ನಾಟಕ ತೆರಿಗೆ ವಸೂಲಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ವರ್ಷವೂ ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನ­ದಲ್ಲಿದ್ದರೂ, ನಿರೀಕ್ಷೆಗೆ ತಕ್ಕಂತೆ ತೆರಿಗೆ ಸಂಗ್ರಹವಾಗಿಲ್ಲ. ಈ ವರ್ಷ ರೂ. 37,760 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ವರ್ಷ ರೂ.32 ಸಾವಿರ ಕೋಟಿ ತೆರಿಗೆ ಸಂಗ್ರ­ಹಿ­ಸಲಾಗಿತ್ತು. ಈ ವರ್ಷ ರೂ. 38 ಸಾವಿರ ಕೋಟಿ ದಾಟಬೇಕು ಎನ್ನು­ವುದು ಸರ್ಕಾರದ ಆಶಯ ಎಂದರು.

ಕೈಗಾರಿಕೆಗಳ ಬೆಳವಣಿಗೆಗೆ ಮೂಲ­ಸೌಕರ್ಯ­ಗಳನ್ನು ಅಭಿವೃದ್ಧಿ­ಪಡಿಸು­ವುದು ಮುಖ್ಯ. ಈಗಾಗಲೇ ರಾಜ್ಯದಲ್ಲಿ ರೈಲ್ವೆ ಮಾರ್ಗಗಳನ್ನು ನಿರ್ಮಿಸಲು ರೂ. 12 ಸಾವಿರ ಕೋಟಿ ವೆಚ್ಚ ಮಾಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಉಚಿತ­ವಾಗಿ ಜಮೀನು ನೀಡಲು ಮುಂದಾ­ಗಿದೆ. ಜತೆಗೆ ಯೋಜನೆಯ ಶೇಕಡಾ 50ರಷ್ಟು ವೆಚ್ಚವನ್ನು ಸಹ ರಾಜ್ಯ ಸರ್ಕಾ­ರವೇ ಭರಿಸಲಿದೆ ಎಂದರು.

ಬೆಂಗಳೂರು ನಗರವೊಂದರಲ್ಲೇ ಗುತ್ತಿ­­ಗೆ­­ದಾರರ ರೂ.2000 ಕೋಟಿ ಬಿಲ್‌ ಬಾಕಿ ಉಳಿದಿದೆ. ಬೆಳೆ ಸಾಲ ಮನ್ನಾ ಮಾಡಿದ್ದ ಹಿಂದಿನ ಸರ್ಕಾರ ರೂ.3500 ಕೋಟಿ ಪೈಕಿ ಕೇವಲ ರೂ. 950 ಕೋಟಿ ಮಾತ್ರ ರೈತರಿಗೆ ನೀಡಿದೆ. ಉಳಿದ ರೂ.2550 ಕೋಟಿಗಳನ್ನು ಕಾಂಗ್ರೆಸ್‌ ಸರ್ಕಾರ ನೀಡಿದೆ. ಆದ್ದರಿಂದ ಮುಂದಿನ ವರ್ಷದಿಂದ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾ­ರಿಕಾ ಮಹಾಸಂಸ್ಥೆ ಅಧ್ಯಕ್ಷ ಆರ್‌. ಶಿವ­ಕುಮಾರ್‌ ಮಾತನಾಡಿ, ಎಲ್ಲ ಜಿಲ್ಲೆ­ಗ­ಳಲ್ಲೂ ಮೂಲಸೌಕರ್ಯ ಕಲ್ಪಿಸಿ ಕೈಗಾ­ರಿಕೆ­ಗಳ ಬೆಳವಣಿಗೆಗೆ ಪೂರಕ ವಾತಾ­ವ­ರಣ ನಿರ್ಮಿಸಬೇಕು ಎಂದು ಕೋರಿ­ದರು.

ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಎಸ್‌. ಸಂಪತ್‌ರಾಮನ್‌, ಉಪಾಧ್ಯಕ್ಷ ತಲ್ಲಂ ಆರ್‌. ದ್ವಾರಕನಾಥ್‌, ಮಾಜಿ ಅಧ್ಯಕ್ಷ ಶಿವಷಣ್ಮುಗಂ, ವಿಧಾನ­ಪರಿ­ಷತ್‌ ಸದಸ್ಯ ದಯಾನಂದರೆಡ್ಡಿ ಇದ್ದರು.

‘ಕೈಗಾರಿಕೆ ವಿರೋಧಿ ಅಲ್ಲ’
‘ನಾನು ಹಳ್ಳಿ ಹಿನ್ನೆಲೆಯಿಂದ ಬಂದವನು. ಹೀಗಾಗಿ ಕೈಗಾರಿಕೆಗಳ ಬೆಳವಣಿಗೆ ಪರ ಇಲ್ಲ ಎಂದು ಕೆಲ­ವರು ಅಪಪ್ರಚಾರ ಮಾಡಿದ್ದಾರೆ. ಆದರೆ, ಇದು ತಪ್ಪು ಅಭಿಪ್ರಾಯ. ನಾನು ಕೈಗಾರಿಕಾ ವಿರೋಧಿ ಅಲ್ಲ.
– ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT