ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 100 `ಅಂಚೆ ಮತದಾನ'ಕ್ಕೆ ಆಯೋಗ ಸಿದ್ಧತೆ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

>ಹುಬ್ಬಳ್ಳಿ: ಬೆರಳೆಣಿಕೆ ಸಂಖ್ಯೆಯಲ್ಲಿ ಚಲಾವಣೆಯಾಗುವ ಅಂಚೆ ಮತಗಳೂ ಅಭ್ಯರ್ಥಿಯ ಭವಿಷ್ಯ ನಿರ್ಧರಿಸಬ್ಲ್ಲಲವು. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಗರಿಷ್ಠ ಮಟ್ಟಕ್ಕೆ ಏರಬೇಕು, ಗೆಲ್ಲುವ ಅಭ್ಯರ್ಥಿಯ ಮತಗಳ ಅಂತರದಲ್ಲೂ ಗಣನೀಯ ಅಂತರ ಇರಬೇಕು ಎಂಬ ಆಶಯ ಈಡೇರಿಕೆ ನಿಟ್ಟಿನಲ್ಲಿ ಮತದಾರರ ಜಾಗೃತಿಯಲ್ಲಿ ತೊಡಗಿರುವ ರಾಜ್ಯ ಚುನಾವಣಾ ಆಯೋಗವು, ಅಂಚೆ ಮತದಾನವೂ ಬೆರಳೆಣಿಕೆ ಸಂಖ್ಯೆಯ ಬದಲು, ಶೇಕಡಾ 100ರಷ್ಟು ಪ್ರಮಾಣದಲ್ಲಿ ಚಲಾವಣೆಯಾಗಬೇಕು ಎಂಬ ಉದ್ದೇಶದಿಂದ ವಿಶೇಷ ಯೋಜನೆ ರೂಪಿಸಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ರಾಜ್ಯ ಚುನಾವಣಾ ಆಯೋಗ `ಅಂಚೆ ಮತಪತ್ರ ಸಹಾಯ ಕೇಂದ್ರ' (ಫೆಸಿಲಿಟೇಶನ್ ಸೆಂಟರ್) ಆರಂಭಿಸಿದೆ.

ರಾಜ್ಯದ ಸುಮಾರು 6.90 ಲಕ್ಷ ಸರ್ಕಾರಿ ನೌಕರರಲ್ಲಿ ಬಹುತೇಕ ಮಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಗೊಳ್ಳುತ್ತಾರೆ. ಈ ಪೈಕಿ ಬಹುತೇಕ ಮಂದಿ ಕೆಲಸದ ಒತ್ತಡ, ದೂರದ ಊರಿನಲ್ಲಿ ಕರ್ತವ್ಯ ನಿಭಾಯಿಸಬೇಕಾಗಿರುವುದರಿಂದ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಾರೆ. ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಒಟ್ಟು ಅಂಚೆ ಮತಗಳಲ್ಲಿ ಶೇಕಡಾ 10ರಷ್ಟು ಮಾತ್ರ ಚಲಾವಣೆಯಾಗಿದೆ. ಆದರೆ ಈ ಬಾರಿ ಈ ಪ್ರಮಾಣವನ್ನು ಶೇ 100ಕ್ಕೆ ಏರಿಸಬೇಕು ಎಂಬ ಉದ್ದೇಶದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಚಾಲಕರು, ಹೋಮ್ ಗಾರ್ಡ್‌ಗಳಿಗೆ ಅಂಚೆ ಮೂಲಕ ಮತ ಚಲಾಯಿಸಲು ಅನುಕೂಲವಾಗುವಂತೆ ಆಯೋಗ ಈ ವಿಶೇಷ ವ್ಯವಸ್ಥೆ ಕಲ್ಪಿಸಿದೆ.

ಅಂಚೆ ಮತಗಳ ಕಾರ್ಯನಿರ್ವಹಣೆಗೆಂದೇ ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ಜಿಲ್ಲಾ ಮಟ್ಟದಲ್ಲಿ ಆಯೋಗವು ಸಮನ್ವಯ ಅಧಿಕಾರಿ (ನೋಡಲ್) ನೇಮಿಸಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸುವಂತೆ ಈ ಅಧಿಕಾರಿಗಳಿಗೆ ಆಯೋಗ ನಿರ್ದೇಶನ ನೀಡಿದೆ. ಅಲ್ಲದೆ ಕರ್ತವ್ಯ ನಿಯೋಜನೆಗೆ ಸಂಬಂಧಿಸಿದ ಆದೇಶ ಪತ್ರದ ಜೊತೆಗೆ ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ಪಡೆಯುವ ಅರ್ಜಿಯನ್ನೂ ಕಡ್ಡಾಯವಾಗಿ ವಿತರಿಸುವಂತೆ ಸೂಚಿಸಿದೆ. 

ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ನೌಕರರು ಅಂಚೆ ಮತಪತ್ರ ಪಡೆಯುವ ಅರ್ಜಿ ನಮೂನೆಯನ್ನು ಏ. 17ರೊಳಗೆ ಅಗತ್ಯ ಮಾಹಿತಿಗಳೊಂದಿಗೆ ಭರ್ತಿ ಮಾಡಿ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಭ್ಯರ್ಥಿಗಳ ಪಟ್ಟಿ ತಯಾರಾದ ಬಳಿಕ ನಿಗದಿಪಡಿಸಿದ ದಿನದಂದು ಅಂಚೆ ಮತಪತ್ರ ಪಡೆದುಕೊಳ್ಳಲು ಮತ್ತು ಮತ ಚಲಾಯಿಸುವ ಸೂಚನೆ ನೀಡಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿದೆ.

`ಇದೇ ಮೊದಲ ಬಾರಿಗೆ ಅಂಚೆ ಮತದಾನಕ್ಕೆ ಸಂಬಂಧಿಸಿ ಹೆಚ್ಚಿನ ಒತ್ತು ನೀಡಲು ಆಯೋಗ ಆದ್ಯತೆ ನೀಡಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಮಹಿಳೆಯಾಗಿದ್ದರೆ, ಅಂಥವರು ಕೋರಿಕೆ ಸಲ್ಲಿಸಿದರೆ ಕುಟುಂಬದ ಇತರ ಸದಸ್ಯರಿಗೂ ಅಂಚೆ ಮತದಾನದ ಸೌಲಭ್ಯ ನೀಡಲಾಗುವುದು. ನಿಗದಿತ ದಿನದಂದು ಫೆಸಿಲಿಟೇಶನ್ ಕೇಂದ್ರದಲ್ಲಿ ಅಂಚೆ ಮತದಾನ ಮಾಡಲು ಸಾಧ್ಯವಾಗದೇ ಇರುವವರು ಅಂಚೆ ಮತಪತ್ರಗಳನ್ನು ಅಂಚೆ ಮೂಲಕ ರವಾನಿಸಲು ಅಥವಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಇಟ್ಟಿರುವ ಮತ ಪೆಟ್ಟಿಗೆಯಲ್ಲಿ ಹಾಕಲು ವ್ಯವಸ್ಥೆ ಮಾಡಲಾಗುವುದು.

ಮತ ಎಣಿಕೆ ನಡೆಯುವ ಕೊನೆಕ್ಷಣದವರೆಗೂ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅಂಚೆ ಮತಪತ್ರಗಳ ವಿತರಣೆ, ಚಲಾವಣೆಯಾಗಿರುವ ಮತಪತ್ರಗಳ ಅಂಕಿಅಂಶಗಳನ್ನು ನಿಖರವಾಗಿ ದಾಖಲಿಸಿಕೊಂಡು ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಹೊಣೆಯನ್ನು ನೋಡಲ್ ಅಧಿಕಾರಿಗಳಿಗೆ ನೀಡಲಾಗಿದೆ.

ಅಂಚೆ ಮತಪತ್ರಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನೂ ವಿಡಿಯೊ ಚಿತ್ರೀಕರಣ ಮಾಡಲಾಗುವುದು' ಎಂದು ಅಂಚೆ ಮತಪತ್ರಗಳ ಕಾರ್ಯ ನಿರ್ವಹಣೆಗೆ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿ ಎಸ್.ಎಚ್. ನರೇಗಲ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT