ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 72 ಮನೆಗಳ ನೀರು ಕಲುಷಿತ

`ಜನಾಗ್ರಹ' ಸಮೀಕ್ಷೆಯಿಂದ ಬೆಳಕಿಗೆ
Last Updated 21 ಜುಲೈ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶೇ 72 ಮನೆಗಳಿಗೆ ಪೂರೈಕೆಯಾಗುವ ಕುಡಿಯುವ ನೀರು ಕಲುಷಿತವಾಗಿರುವ ಆಘಾತಕಾರಿ ಸಂಗತಿ ಬಹಿರಂಗಗೊಂಡಿದೆ.

ನಗರದ `ಜನಾಗ್ರಹ' ಸ್ವಯಂಸೇವಾ ಸಂಸ್ಥೆಯು 198 ವಾರ್ಡ್‌ಗಳಲ್ಲಿ ವಾಸಿಸುವ ಜನರ ಜೀವನ ಗುಣಮಟ್ಟ ಅಳೆಯುವ ಉದ್ದೇಶದಿಂದ ನಡೆಸಿದ ಸಮೀಕ್ಷೆಯಿಂದ `ವಾರ್ಡ್ ಗುಣಮಟ್ಟ ಅಂಕ'ದಿಂದ ಈ ಸಂಗತಿ ಬೆಳಕಿಗೆ ಬಂದಿದೆ.

ಸಮೀಕ್ಷಾ ವಿಧಾನ: ನಗರದ ಸಂರಚನೆ ಹಾಗೂ ಸೇವೆಗಳ ಬಗ್ಗೆ ಮಾಹಿತಿ ಪಡೆಯಲು ಸಂಸ್ಥೆಯು ಆರು ತಿಂಗಳ ಕಾಲ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ನಗರ ಜೀವನ ಗುಣಮಟ್ಟದ ಪ್ರಮುಖ ನಿರ್ಧಾರಕಗಳೆಂದು ಪರಿಗಣನೆಗೆ ಒಳಗಾಗಿರುವ ನೀರು ಪೂರೈಕೆ, ಪರಿಸರ ವ್ಯವಸ್ಥೆ, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ನೈರ್ಮಲ್ಯದ ಸ್ಥಿತಿ, ಉದ್ಯಾನ, ಸಾರ್ವಜನಿಕ ಸೌಲಭ್ಯ, ಬೀದಿದೀಪ, ಸಾರ್ವಜನಿಕ ಶೌಚಾಲಯ ಹಾಗೂ ಪಾದಚಾರಿ ಮಾರ್ಗಗಳ ಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆಯಲ್ಲಿ ನಗರದ ಹೊರವಲಯಗಳ ವಾರ್ಡ್‌ಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಗುರುತಿಸಲಾಗಿದೆ. ಇಲ್ಲಿ 62 ವಾರ್ಡ್‌ಗಳಿವೆ. ಒಳವಲಯದ ವಾರ್ಡ್‌ಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಎಂದು ಗುರುತಿಸಲಾಗಿದೆ. ಇಲ್ಲಿ 136 ವಾರ್ಡ್‌ಗಳಿವೆ. ಇದೇ ವೇಳೆ 2010 ಹಾಗೂ 2013ರ ಸಮೀಕ್ಷೆಗಳ ತುಲನೆ ಮಾಡಲಾಗಿದ್ದು, ಈ ಅವಧಿಯಲ್ಲಿ ಮೂಲಸೌಕರ್ಯದ ಗುಣಮಟ್ಟದಲ್ಲಿ ಕುಸಿತ ಕಂಡುಬಂದಿದೆ. ನೀರು ಪೂರೈಕೆಯ ಅಂಕ (6.2ರಿಂದ 3.8ಕ್ಕೆ) ಗಣನೀಯವಾಗಿ ಇಳಿಕೆ ಕಂಡಿದೆ. ಕಳೆದ ಮೂರು ವರ್ಷಗಳಲ್ಲಿ ನಗರದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ನೂರಾರು ಕೋಟಿ ವ್ಯಯ ಮಾಡಿದ ಬಳಿಕವೂ ನೀರಿನ ಗುಣಮಟ್ಟದಲ್ಲಿ ಕುಸಿತ ಉಂಟಾಗಿದೆ.

ಒಟ್ಟು 7,910 ಮನೆಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಬ್ಯಾಕ್ಟೀರಿಯಾಗಳಿಂದ ನೀರು ಕಲುಷಿತವಾಗಿದೆಯೇ ಎಂದು ಪರಿಶೀಲನೆ ನಡೆಸಲಾಗಿದೆ. ಈ ಪೈಕಿ 5,734 ಮನೆಗಳಲ್ಲಿ (ಶೇ 72) ನೀರು ಕಲುಷಿತವಾಗಿರುವುದು ಕಂಡುಬಂತು. ನೀರಿನ ಗುಣಮಟ್ಟದಲ್ಲಿ ದೇವಸಂದ್ರ ವಾರ್ಡ್ 10 ಅಂಕಗಳನ್ನು ಪಡೆದಿದ್ದು, 19 ವಾರ್ಡ್‌ಗಳು ಸೊನ್ನೆ ಅಂಕ ಪಡೆದಿವೆ. ನೀರನ್ನು ಕಲುಷಿತಗೊಳಿಸಲು ಕಾರಣವಾದ ಕಾಲಿಫಾರ್ಮ ಬ್ಯಾಕ್ಟೀರಿಯಾ ಭೇದಿ, ಮೂತ್ರ ಸಂಬಂಧಿ ಕಾಯಿಲೆ, ಟೈಫಾಯ್ಡ, ಜಠರಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹರಡಲು ಕಾರಣವಾಗುತ್ತದೆ ಎಂದು ಜನಾಗ್ರಹ ವಿಶ್ಲೇಷಿಸಿದೆ.

`ನೀರು ಪೂರೈಕೆ ದಿನದ 24 ಗಂಟೆಗಳ ಕಾಲವೂ ಇರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಸದಾಕಾಲ ನೀರು ಪೂರೈಕೆ ಆಗುತ್ತಿದ್ದರೆ ಜನರ ಆರೋಗ್ಯ ಚೆನ್ನಾಗಿರುತ್ತದೆ. ನೀರು ಆಗಾಗ ಬಿಡುತ್ತಿದ್ದರೆ ಮೊದಲ 10 ನಿಮಿಷದಲ್ಲಿ ಬ್ಯಾಕ್ಟೀರಿಯಾಗಳು ನೀರನ್ನು ಕಲುಷಿತಗೊಳಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಇದು 20 ನಿಮಿಷಗಳವರೆಗೂ ಮುಂದುವರಿಯಬಹುದು. ನಿರಂತರ ನೀರಿನ ಒತ್ತಡವಿದ್ದರೆ ಕಲುಷಿತಗೊಳ್ಳುವುದನ್ನು ತಡೆಯಬಹುದು' ಎಂದು ಸಂಸ್ಥೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT