ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 9ರಷ್ಟು ವೃದ್ಧಿ ದರ ನಿರೀಕ್ಷೆ

Last Updated 25 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2011-12ನೇ ಸಾಲಿನ ಮುಂದಿನ ಹಣಕಾಸು ವರ್ಷದಲ್ಲಿ  ಶೇ 9ರಷ್ಟು ಆರ್ಥಿಕ ವೃದ್ಧಿ ದರದ ಅಂದಾಜು ಮಾಡಲಾಗಿದ್ದು, ಹಣದುಬ್ಬರಕ್ಕೆ ಕಡಿವಾಣ ಹಾಕುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿರಲಿದೆ ಎಂದು  ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ಮೂಲ ಸೌಕರ್ಯ ಯೋಜನೆಗಳಿಗೆ ಪರಿಸರ ಅನುಮತಿ ನೀಡುವುದನ್ನು ಇನ್ನಷ್ಟು ಸರಳಗೊಳಿಸುವ, ಸರಕು - ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿಗೆ ತರುವ  ಮತ್ತು ಎರಡನೇ ಹಸಿರು ಕ್ರಾಂತಿ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಹೊಸ ಸುಧಾರಣಾ ಕ್ರಮಗಳನ್ನು  ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ.

ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಆರ್ಥಿಕ ಸಮೀಕ್ಷೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು. ಶೇ 9ರಷ್ಟು ಆರ್ಥಿಕ ವೃದ್ಧಿ ದರ ಸಾಧಿಸುವ ನಿಟ್ಟಿನಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ ಮತ್ತು ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಪ್ರಕ್ಷುಬ್ಧ ಪರಿಸ್ಥಿತಿಯು ದೇಶದ ಉದೇಶಿತ  ಆರ್ಥಿಕ ವೃದ್ಧಿದರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಲಾರದು ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ಬಜೆಟ್ ಮಂಡನೆ ಪೂರ್ವ ಸಂಸತ್‌ನಲ್ಲಿ ಮಂಡಿಸಲಾಗಿರುವ ಸಮೀಕ್ಷೆಯು 2008-09ನೇ ಸಾಲಿನಲ್ಲಿ ಕಂಡುಬಂದಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಕೈಗಾರಿಕಾ ವಲಯಕ್ಕೆ ನೀಡಲಾಗಿದ್ದ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ಕೈಬಿಡಬಹುದಾಗಿದೆ ಎಂದು ಸಲಹೆ ನೀಡಿದೆ. ಜಾಗತಿಕ ಆರ್ಥಿಕ  ಪರಿಸ್ಥಿತಿಯ  ನಿಧಾನಗತಿಯ ಚೇತರಿಕೆಯು ದೇಶದ ರಫ್ತು ವಹಿವಟಿನ ಮೇಲೆ ಪ್ರತಿಕೂಲ ಪರಿಣಾಮ  ಮತ್ತು ದೇಶಿ ಸರಕುಗಳ ಬಳಕೆ ಪ್ರಮಾಣ ಹೆಚ್ಚಳದಿಂದ ಚಾಲ್ತಿ ಖಾತೆ ಕೊರತೆಯು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ದೇಶದ ಅರ್ಥ ವ್ಯವಸ್ಥೆಯ ಸ್ಥಿತಿಗತಿಯ ನೈಜ ಚಿತ್ರಣ ನೀಡುವ ಆರ್ಥಿಕ ಸಮೀಕ್ಷೆಯು , ಅಂತರ್‌ರಾಷ್ಟ್ರೀಯ ವಿದ್ಯಮಾನಗಳು ಹೆಚ್ಚು ಪ್ರಭಾವ ಬೀರಲಾರವು ಎಂದೂ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT