ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ.30 ಕಡಿತವೇ ಇಲಾಖೆಯ ಮೂಲ ಸಮಸ್ಯೆ

Last Updated 23 ಫೆಬ್ರುವರಿ 2011, 7:00 IST
ಅಕ್ಷರ ಗಾತ್ರ

ಕೋಲಾರ: ‘ಪುಳಿಯೋಗರೆ ಪುಡಿ, ಅರಿಶಿನ, ಎಣ್ಣೆ, ರಾಗಿ, ಸಾಸಿವೆ, ದನಿಯ, ಉಪ್ಪು ಸೇರಿದಂತೆ ಗುತ್ತಿಗೆದಾರರು ಪೂರೈಸುವ ಆಹಾರ ಪದಾರ್ಥಗಳು ಕಳಪೆಯಾಗಿವೆ. ಹುಣಿಸೇಹಣ್ಣು ಕಪ್ಪಗಿದೆ. ಹೀಗಾಗಿ ಸಾಂಬಾರು ಕಪ್ಪಾಗುತ್ತದೆ. ಅದನ್ನು ಕೇಳಿದರೆ ಸಮರ್ಪಕ ಉತ್ತರ ದೊರಕುವುದಿಲ್ಲ. ಅಲ್ಲದೆ, ಕಳಪೆ ಪದಾರ್ಥಗಳ ಮೇಲೆ ದುಪ್ಪಟ್ಟು ದರವನ್ನು ವಿಧಿಸಲಾಗಿದೆ. ಆಹಾರ ಪದಾರ್ಥಗಳಲ್ಲಿ ಶೇ 30ರಷ್ಟು ಕಡಿತ ಮಾಡುವುದು ಇಲಾಖೆಯ ಮೂಲಭೂತ ಸಮಸ್ಯೆ’

-ಕಳೆದ ಫೆ.5ರಂದು ಭೇಟಿ ಸಮಯದಲ್ಲಿ ಎದ್ದು ಕಂಡ ಅಸಮರ್ಪಕ ಕಾರ್ಯನಿರ್ವಹಣೆ ಕುರಿತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ನೀಡಿದ ನೋಟಿಸ್‌ಗೆ ತಾಲ್ಲೂಕಿನ ಬೆಗ್ಲಿ ಹೊಸಳ್ಳಿಯಲ್ಲಿರುವ ಪರಿಶಿಷ್ಟ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಫೆ.7ರಂದು ನೀಡಿದ ಉತ್ತರವಿದು.

ವಾರ್ಡನ್ ನೀಡಿರುವ ಸ್ಪಷ್ಟನೆಯ ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅಲ್ಲಿನ ವಿವರಗಳು ನಿಲಯದಲ್ಲಿರುವ ಮೂಲಸೌಕರ್ಯದ ಕೊರತೆ, ನಿರ್ವಹಣೆಯಲ್ಲಿ ಅಸಮರ್ಪಕತೆ, ಸೌಲಭ್ಯಗಳ ಸೋರಿಕೆ, ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ, ವಾರ್ಡನ್ನರ ನಿರ್ಲಕ್ಷ್ಯ, ಅಸಹಾಯಕತೆ, ನಿಯಮಗಳನ್ನು ಪಾಲಿಸದಿರುವಿಕೆ, ಗುತ್ತಿಗೆದಾರರ ಕಮಿಷನ್ ಅವ್ಯವಹಾರ ಸೇರಿದಂತೆ ಇಲಾಖೆಯ ಒಟ್ಟಾರೆ ಕಾರ್ಯನಿರ್ವಹಣೆಯ ಕಡೆಗೆ ಬೆರಳು ಮಾಡುತ್ತವೆ.

‘ವಾರ್ಡನ್‌ಗಳು ಗುತ್ತಿಗೆದಾರರ ಮುಂದೆ ಭಿಕ್ಷುಕರಂತೆ ಅಲೆಯಬೇಕು’ ಎಂಬುದು ವಾರ್ಡನ್ ವರು ನೀಡಿರುವ ಸ್ಪಷ್ಟನೆಗಳಲ್ಲಿ ಒಂದಾಗಿದೆ. ನಿಯಮಗಳ ಪ್ರಕಾರ ನಿಲಯಗಳಿಗೆ ಆಹಾರ ಪದಾರ್ಥ ಪೂರೈಸಬೇಕಾದವರು ವಾರ್ಡನ್‌ಗಳನ್ನೆ ಅಲೆದಾಡಿಸುವ ಸನ್ನಿವೇಶ ಇಲ್ಲಿದೆ.

ಕಡಿತ: ‘ಜನವರಿ ತಿಂಗಳಲ್ಲಿ ತರಕಾರಿ, ಗ್ಯಾಸ್, ಮೊಟ್ಟೆ, ಬಾಳೆಹಣ್ಣು ಸರಬರಾಜು ಮಾಡಿಲ್ಲ. ಆಹಾರದಲ್ಲಿ ಶೇ.30 ಕಡಿತ. ತರಕಾರಿ ಶೇ 30ಕಡಿತ’ ಎಂಬುದು ಮತ್ತೊಂದು ಸ್ಪಷ್ಟನೆ.  ನಿಯಮಗಳನ್ನು ಪಾಲಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ವಾರ್ಡನ್‌ಗಳೇ ಇಲ್ಲಿ ಅಸಹಾಯಕರಾಗಿದ್ದಾರೆ. ಅವರು ಹೇಳುವಂತೆ ಶೇ 30ಕಡಿತ ಸಮಾಜ ಕಲ್ಯಾಣ ಇಲಾಖೆಯ ಮೂಲಭೂತ ಸಮಸ್ಯೆ.

‘ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಪೂರೈಸದಿರುವ ಗುತ್ತಿಗೆದಾರರಿಗೆ ವಾರ್ಡನ್ ನೋಟಿಸ್ ನೀಡಲು ಅಧಿಕಾರವಿದೆ. ನಿಲಯಕ್ಕೆಂದೇ ಖರ್ಚು ಮಾಡುವ ಹಣದ ಬಿಲ್ ಅನ್ನು ನೀಡಿ ಹಣ ವಾಪಸ್ ಪಡೆಯಲೂ ಅವಕಾಶವಿದೆ. ಆದರೆ ಈ ಅಧಿಕಾರ ಮತ್ತು ಅವಕಾಶವನ್ನು ಯಾವ ವಾರ್ಡನ್ ಕೂಡ ಬಳಸುತ್ತಿಲ್ಲ ಅಥವಾ ಗುತ್ತಿಗೆದಾರರೊಡನೆ ಅವರೂ ಶಾಮೀಲಾಗುವ ಪ್ರಕರಣಗಳೇ ಹೆಚ್ಚು’ ಎಂಬುದು ಇಲಾಖೆಯ ಅಧಿಕಾರಿಯೊಬ್ಬರ ನುಡಿ.

ವಜಾಕ್ಕೆ ಶಿಫಾರಸು?: ನೋಟಿಸ್‌ಗೆ ಜವಾಬ್ದಾರಿಯುತ ಉತ್ತರವನ್ನು ನೀಡದಿರುವುದು, ದಲಿತ ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಾರ್ಡನ್ ಯಶೋಧ ಅವರನ್ನು ಸರ್ಕಾರಿ ಸೇವೆಯಿಂದಲೆ ವಜಾ ಮಾಡುವಂತೆ ಶಿಫಾರಸು ಮಾಡಲು ಇಲಾಖೆಯು ಚಿಂತನೆ ನಡೆಸಿದೆ. ಇಲಾಖೆಯ ಆಯುಕ್ತರ ಗಮನಕ್ಕೂ ಈ ಸಂಗತಿಯನ್ನು ಈಗಾಗಲೇ ತರಲಾಗಿದೆ ಎಂದು ಅಧಿಕೃತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT