ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ5.7ಕ್ಕೆ ತಗ್ಗಿದ ಜಿಡಿಪಿ ಮುನ್ನೋಟ

ಅರ್ಧ ವಾರ್ಷಿಕ ಆರ್ಥಿಕ ವಿಶ್ಲೇಷಣೆ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಒಂದೂವರೆ ತಿಂಗಳ ಹಿಂದೆ ಕೈಗೊಂಡು ಸುಧಾರಣಾ ಕ್ರಮಗಳ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ಪ್ರಮಾಣ ನಿರೀಕ್ಷೆಗಿಂತ ಬಹಳ ಕಡಿಮೆಯೇ ಇರಲಿದೆ ಎಂದು ಆರ್ಥಿಕ ವಿಶ್ಲೇಷಣೆಯ ಅರ್ಧ ವಾರ್ಷಿಕ ವರದಿ ಹೇಳಿದೆ.

2012-13ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ) ಪ್ರಮಾಣ ಹೆಚ್ಚೆಂದರೆ ಶೇ 5.7ರಿಂದ ಶೇ 5.9ರಷ್ಟಿರಲಿದೆ ಎಂದು ವರದಿ ಸ್ಪಷ್ಟಪಡಿಸಿದೆ.

ವರದಿಯನ್ನು ಸಂಸತ್ತಿನಲ್ಲಿ ಸೋಮವಾರ ಮಂಡಿಸಲಾಗಿದ್ದು, ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸ ಮತ್ತು ಭರವಸೆ ಮೂಡಿಸಬೇಕಾದರೆ ಇನ್ನೂ ಕೆಲವು ವಿತ್ತೀಯ ನೀತಿಗಳನ್ನು ಪ್ರಕಟಿಸಬೇಕಿದೆ. ಜತೆಗೆ ಅಗತ್ಯ ಹಣಕಾಸು ನೆರವಿನ ಕ್ರಮಗಳನ್ನೂ ಕೈಗೊಳ್ಳಬೇಕಿದೆ ಎಂಬ ಶಿಫಾರಸನ್ನೂ ಮಾಡಲಾಗಿದೆ.
ಪ್ರಸಕ್ತ ಸಾಲಿನ `ಜಿಡಿಪಿ' ಶೇ 7.6ರಷ್ಟಿರಲಿದೆ ಎಂದು ಮೊದಲು ಅಂದಾಜು ಮಾಡಲಾಗಿದ್ದಿತು. ಆದರೆ, ಈಗಾಗಲೇ ವರ್ಷದ ಪ್ರಥಮಾರ್ಧ ಮುಗಿದಿದೆ. ವಾಸ್ತವ ಕಣ್ಣ ಮುಂದೆಯೇ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಈ ವರ್ಷದ ಪ್ರಗತಿಯ ಮುನ್ನೋಟವನ್ನು ಗರಿಷ್ಠ ಶೇ 5.9ಕ್ಕಿಂತ ಹೆಚ್ಚಿಗೆ ನಿರೀಕ್ಷಿಸುವಂತಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

ಏಪ್ರಿಲ್-ಸೆಪ್ಟೆಂಬರ್ ನಡುವಿನ ಆರು ತಿಂಗಳ ಅವಧಿಯಲ್ಲಿ `ಜಿಡಿಪಿ' ಶೇ 5.4ರಷ್ಟಿದೆ. ಈಗ ಅಂದಾಜು ಮಾಡಿರುವಂತೆ ಶೇ 5.7ರಿಂದ 5.9ರ ಪ್ರಮಾಣಕ್ಕೆ ದೇಶದ ಆರ್ಥಿಕ ಪ್ರಗತಿ ಪ್ರಮಾಣವನ್ನು ಹೆಚ್ಚಿಸಬೇಕಿದ್ದರೆ ಈ ಸಾಲಿನ ದ್ವಿತೀಯಾರ್ಧದಲ್ಲಿ ಶೇ 6ರಷ್ಟು ಕಾಯ್ದುಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ಆರ್‌ಬಿಐ ಅಂದಾಜು: ಇದಕ್ಕೂ ಮುನ್ನವೇ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ), ಪ್ರಸಕ್ತ ಹಣಕಾಸು ವರ್ಷದ `ಜಿಡಿಪಿ' ಶೇ 5.8ರಷ್ಟಿರಲಿದೆ. 2013ರ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿನ ಹಣದುಬ್ಬರ ಶೇ 6.8ರಿಂದ ಶೇ 7ರ ಮಟ್ಟಕ್ಕೆ ಸುಧಾರಣೆ ಕಾಣಲಿದೆ ಎಂದು ಹೇಳಿದ್ದಿತು.

ವಿತ್ತೀಯ ಕೊರತೆ: ಆರ್ಥಿಕ ವಿಶ್ಲೇಷಣಾ ವರದಿ, ವಿತ್ತೀಯ ಕೊರತೆ ವಿಚಾರದತ್ತಲೂ ಸರ್ಕಾರದ ಗಮನ ಸೆಳೆದಿದೆ. ವಿತ್ತೀಯ ಕೊರತೆಯನ್ನು `ಜಿಡಿಪಿ'ಯ ಶೇ 5.3ರಷ್ಟು ಪ್ರಮಾಣಕ್ಕೆ ನಿಯಂತ್ರಿಸಬೇಕಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಗಮನ ಹರಿಸಬೇಕಿದೆ ಎಂದೂ ಹೇಳಿದೆ. ಪ್ರಸಕ್ತ ಸಾಲಿನ ಮುಂಗಡಪತ್ರದಲ್ಲಿ `ವಿತ್ತೀಯ ಕೊರತೆ ಪ್ರಮಾಣ ಶೇ 5.1ರಲ್ಲಿ ಇರುತ್ತದೆ' ಎಂದು ತಿಳಿಸಲಾಗಿದ್ದಿತು.

ಕಾರಣಗಳು: `ಜಿಡಿಪಿ' ಮುನ್ನೋಟ ತಗ್ಗಿಸಲು ಸಮರ್ಪಕ ಕಾರಣಗಳೂ ಇವೆ ಎಂದಿರುವ ಆರ್ಥಿಕ ವಿಶ್ಲೇಷಣಾ ವರದಿ, ವರ್ಷದ ದ್ವಿತೀಯಾರ್ಧ ಸಾಕಷ್ಟು ಆಶಾದಾಯಕವಾಗಿದೆ ಎಂಬ ಮಾತನ್ನೂ ಹೇಳಿದೆ.

ಮುಂಗಾರು ಕೆಲವೆಡೆ ಕೈಕೊಟ್ಟಿತು, ಕೆಲವೆಡೆ ತಡವಾಯಿತು. ಆದರೆ, ಹಿಂಗಾರು ಕೃಷಿ ಚಟುವಟಿಕೆ ಉತ್ತಮವಾಗಿದೆ. ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರದಿಂದ ಉತ್ತಮ ಕೊಡುಗೆ ನಿರೀಕ್ಷಿಸಬಹುದಾಗಿದೆ. ವ್ಯಾಪಾರ, ಸಾರಿಗೆ ಮತ್ತು ಹಣಕಾಸು ಸೇವೆಗಳ ವಲಯಕ್ಕೆ ಸಂಬಂಧಿಸಿದ ಬಹಳಷ್ಟು ಸೇವೆಗಳಲ್ಲಿಯೂ ಹೆಚ್ಚಳ ಕಂಡುಬಂದಿದೆ.

ಬಂದಿದ್ದು, ಪರಿಸ್ಥಿತಿ ಆಶಾದಾಯಕವಾಗಿದೆ. ಜತೆಗೆ, ಅಕ್ಟೋಬರ್ 29ರಂದು ಕೇಂದ್ರ ಸರ್ಕಾರ ಪ್ರಕಟಿಸಿದ ಆರ್ಥಿಕ ಸುಧಾರಣಾ ಕ್ರಮಗಳೂ ಪ್ರಗತಿಯ ಗತಿಯನ್ನು ತಕ್ಕಮಟ್ಟಿಗೆ ವೇಗಗೊಳಿಸಲಿವೆ ಎಂದು ವರದಿ ಹೇಳಿದೆ.

`ಇನ್ನಷ್ಟು ಸುಧಾರಣೆ ಕ್ರಮ ಅಗತ್ಯ'
ನವದೆಹಲಿ (ಪಿಟಿಐ):
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5.7ರಿಂದ ಶೇ 5.9ಕ್ಕೆ ತಗ್ಗಲಿರುವ `ಜಿಡಿಪಿ'ಯನ್ನು ಮೇಲ್ಮಟ್ಟಕ್ಕೆ ಒಯ್ದು ಹೆಚ್ಚಿನ ಆರ್ಥಿಕ ಸಾಧನೆ ತೋರಬೇಕಾದರೆ ಇನ್ನಷ್ಟು ಅಗತ್ಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ರಘುರಾಮ್ ರಾಜನ್ ಹೇಳಿದ್ದಾರೆ.


ಹೆಚ್ಚಿನ ವಿಶ್ವಾಸ ಮೂಡಿಸುವಂತಹ ಪ್ರೋತ್ಸಾಹದಾಯಕ  ಮುಂಗಡಪತ್ರದ ಅಗತ್ಯವಿದೆ, ಅಭಿವೃದ್ಧಿ ಯೋಜನೆಗಳ ಶೀಘ್ರ ಜಾರಿಗೆ ತ್ವರಿತಗತಿಯಲ್ಲಿ ಅನುಮೋದನೆ ನೀಡಬೇಕಿದೆ, ಹಣಕಾಸು ಮಾರುಕಟ್ಟೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ಕೈಗೊಳ್ಳಬೇಕಿದೆ ಎಂಬ ಮೂರು ಶಿಫಾರಸುಗಳನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT