ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾಕ್ಕೆ ಬಂಪರ್ ಬೆಲೆ: ರೈತರ ಸಂತಸ

Last Updated 23 ಫೆಬ್ರುವರಿ 2012, 9:15 IST
ಅಕ್ಷರ ಗಾತ್ರ

ಯಾದಗಿರಿ: ಹೆಸರು, ತೊಗರಿಯ ನಂತರದ ಸ್ಥಾನದಲ್ಲಿರುವ ಶೇಂಗಾಕ್ಕೆ ಈ ಬಾರಿ ಒಳ್ಳೆಯ ಬೆಲೆ ಬಂದಿದೆ. ಇಳುವರಿಯೂ ಉತ್ತಮವಾಗಿದ್ದು, ಬೆಲೆಯೂ ಸಿಗುತ್ತಿರುವುದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ.
ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾಕಷ್ಟು ಶೇಂಗಾ ಆವಕ ಆಗುತ್ತಿದ್ದು, ಇದೀಗ ಕರ್ನಾಟಕ ಎಣ್ಣೆ ನಿಗಮ ಮಾರುಕಟ್ಟೆ ಪ್ರವೇಶಿಸಿರುವುದರಿಂದ ಶೇಂಗಾದ ಬೆಲೆ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಹೆಸರು, ತೊಗರಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿದ್ದ ರೈತರು, ಶೇಂಗಾದಿಂದ ಸ್ವಲ್ಪ ನೆಮ್ಮದಿ ಪಡೆಯುವಂತಾಗಿದೆ.

ಕಳೆದ ಜನವರಿ 12ರಿಂದ ಶೇಂಗಾ ಮಾರುಕಟ್ಟೆಗೆ ಬರುತ್ತಿದೆ. ಆರಂಭದಲ್ಲಿ ರೂ.3338-3859 ಬೆಲೆ ಇತ್ತು. ಸಂಕ್ರಾಂತಿಯ ಮುನ್ನಾದಿನವಾದ ಜನವರಿ 13 ರಂದು ಕೇವಲ ರೂ. 2676 ಬೆಲೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಹೆಸರು ಮತ್ತು ತೊಗರಿಯಂತೆ ಶೇಂಗಾದಲ್ಲಿಯೂ ನಷ್ಟ ಅನುಭವಿಸುವ ಆತಂಕವನ್ನು ರೈತರು ಎದುರಿಸುತ್ತಿದ್ದರು. ಆದರೆ ಕರ್ನಾಟಕ ಎಣ್ಣೆ ನಿಗಮದ ಪ್ರವೇಶದಿಂದಾಗಿ ರೈತರ ಆತಂಕ ದೂರವಾಗಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಶೇಂಗಾಕ್ಕೆ ರೂ.3,800-4,600 ಬೆಲೆ ಇದೆ. ಹೀಗಾಗಿ ಸಾಕಷ್ಟು ರೈತರು, ಶೇಂಗಾ ಮಾರಾಟಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ ಮಾರುಕಟ್ಟೆಗೆ ಶೇಂಗಾ ಆವಕವೂ ಹೆಚ್ಚಾಗಿದೆ.

ಕೆಓಎಫ್ ಪ್ರವೇಶ: ಆರಂಭದಲ್ಲಿ ಶೇಂಗಾದ ಬೆಲೆ ಕಡಿಮೆ ಆಗಿದ್ದರಿಂದ ರೈತರ ಮುಖದಲ್ಲಿ ಸಹಜವಾಗಿ ಆತಂಕ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕ ಎಣ್ಣೆ ನಿಗಮವು ಎಪಿಎಂಸಿಯಲ್ಲಿ ಖರೀದಿಗೆ ಮುಂದಾಗಿದ್ದು, ಶೇಂಗಾಕ್ಕೆ ಒಳ್ಳೆಯ ಬೆಲೆ ಬಂದಿದೆ.

ಕಳೆದ 20 ದಿನಗಳಿಂದ ನಿಗಮದಿಂದ ನೇರ ಖರೀದಿ ನಡೆಯುತ್ತಿದ್ದು, ರೈತರಿಗೂ ಒಳ್ಳೆಯ ಬೆಲೆ ಸಿಗುವಂತಾಗಿದೆ. ಒಂದೆಡೆ ಎಣ್ಣೆ ನಿಗಮದಿಂದ ಖರೀದಿ ಆರಂಭವಾಗಿರುವುದರಿಂದ ಮಾರುಕಟ್ಟೆಯಲ್ಲಿಯೂ ಶೇಂಗಾದ ಬೆಲೆ ಹೆಚ್ಚಳವಾಗಿದೆ. ಎಣ್ಣೆ ನಿಗಮದಿಂದ ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ಬಹುತೇಕ ರೈತರು, ನಿಗಮಕ್ಕೆ ಶೇಂಗಾ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ವರ್ತಕರೂ, ಶೇಂಗಾದ ಬೆಲೆಯನ್ನು ಹೆಚ್ಚಿಸಿದ್ದಾರೆ. ಇದೆಲ್ಲದರ ಪರಿಣಾಮ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ರೈತರಿಗೆ ಒಳ್ಳೆಯ ಬೆಲೆ ಸಿಗಬೇಕಾದರೆ, ಹೊರಗಿನ ಸಂಸ್ಥೆಗಳು ಮಾರುಕಟ್ಟೆ ಪ್ರವೇಶ ಮಾಡಬೇಕು. ಇದೀಗ ಕೆಓಎಫ್ ಪ್ರವೇಶದಿಂದಾಗಿ ಶೇಂಗಾಕ್ಕೆ ಪ್ರತಿ ಕ್ವಿಂಟಲ್‌ಗೆ ರೂ. 4 ಸಾವಿರಕ್ಕಿಂತಲೂ ಹೆಚ್ಚಿಗೆ ಬೆಲೆ ಸಿಗುತ್ತಿದೆ. ವರ್ತಕರೂ ಬೆಲೆ ಹೆಚ್ಚಿಗೆ ಮಾಡುತ್ತಿದ್ದು, ಒಟ್ಟಾರೆ ರೈತರಿಗೆ ಲಾಭ ಆಗುತ್ತಿದೆ ಎಂದು ಹೇಳುತ್ತಾರೆ.

ರೈತರ ಮುಖದಲ್ಲೂ ಸಂತಸ: ಶೇಂಗಾಕ್ಕೆ ಉತ್ತಮ ಬೆಲೆ ಸಿಗುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಪ್ರತಿ ಬಾರಿ ಸೂಕ್ತ ಬೆಲೆ ಇಲ್ಲದೇ ಕಂಗಾಲಾಗುತ್ತಿದ್ದ ರೈತರು, ಇದೀಗ ಸ್ವಲ್ಪ ಉತ್ಸಾಹದಿಂದಲೇ ಕೃಷಿ ಉತ್ಪನ್ನ ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ನಿತ್ಯವೂ ಸುಮಾರು 10 ಸಾವಿರದಿಂದ 15 ಸಾವಿರ ಕ್ವಿಂಟಲ್ ಶೇಂಗಾ ಇಲ್ಲಿಯ ಎಪಿಎಂಸಿಗೆ ಬರುತ್ತಿದೆ. ಶಿವರಾತ್ರಿ ಅಮಾವಾಸ್ಯೆ ಮುಗಿದ ನಂತರ ಬುಧವಾರ ಎಪಿಎಂಸಿಗೆ ಒಟ್ಟು 17,179 ಕ್ವಿಂಟಲ್ ಶೇಂಗಾ ಆವಕವಾಗಿದೆ. ಅಷ್ಟೇ ಪ್ರಮಾಣದಲ್ಲಿ ಖರೀದಿಯೂ ಆಗುತ್ತಿದೆ. ಹೀಗಾಗಿ ರೈತರಿಗೆ ಕಾಯುವ ತಾಪತ್ರಯವೂ ಇಲ್ಲದಂತಾಗಿದೆ. ಕರ್ನಾಟಕ ಎಣ್ಣೆ ನಿಗಮದವರು ನಿತ್ಯವೂ 3 ಸಾವಿರ ಕ್ವಿಂಟಲ್‌ಗೂ ಹೆಚ್ಚು ಖರೀದಿ ಮಾಡುತ್ತಿದ್ದು, ಇತ್ತ ಎಪಿಎಂಸಿ ವರ್ತಕರೂ ಖರೀದಿಗೆ ಮುಂದಾಗಿರುವುದರಿಂದ ಶೇಂಗಾಕ್ಕೆ ಬೇಡಿಕೆ ಹೆಚ್ಚಿದಂತಾಗಿದೆ.

“ಹೆಸರು, ತೊಗರ‌್ಯಾಗ ಏನೂ ಉಳಿದ್ಹಂಗ ಆಗಿತ್ರಿ. ಇನ್ನ ಶೇಂಗಾದ ಮ್ಯಾಲ ಭರೋಸಾ ಇಟ್ಟಿದ್ವಿ. ದೇವರ ಕೈ ಹಿಡಿದರ. ಶೇಂಗಾಕ್ಕೆ ಭಾರಿ ರೇಟ್ ಸಿಕ್ಕೈತಿ. ಈ ಸರ‌್ತಿ ಶೇಂಗಾ ಇಳವರಿನೂ ಛೊಲೋ ಆಗೈತ್ರಿ. ಹಿಂಗಾಗಿ ಶಿವರಾತ್ರಿ ಭಾಳ ಭಕ್ತಿಯಿಂದ ಆಚರಿಸೋ ಹಂಗ ಆಗೈತ್ರಿ” ಎಂದು ರೈತ ಮಲ್ಲಪ್ಪ ತಮ್ಮ ಸಂತಸ ಹಂಚಿಕೊಳ್ಳುತ್ತಾರೆ.

ಇನ್ನೊಂದೆಡೆ ಹಳಿಗೇರಾದ ದೇವಿಂದ್ರಪ್ಪ, “ಈ ಸಲ ಶೇಂಗಾದ ರೇಟೂ ಬಿದ್ದಿತ್ತ ಅಂದ್ರ, ರೈತರ ಜೀವನಾ ಭಾಳ ತ್ರಾಸ ಇತ್ರಿ. ಪುಣ್ಯಾಕ ಅದ್ಯಾವುದೋ ನಿಗಮದಾವ್ರ ಬಂದ ಖರೀದಿ ಮಾಡ್ಲಾಕತ್ತಾರ. ಹಿಂಗಾಗಿ ಮಾರ್ಕೆಟ್‌ನ್ಯಾಗ ರೇಟೂ ಜಾಸ್ತಿ ಆಗೇತಿ ನೋಡ್ರಿ. ಎಲ್ಲ ಶಿವನ ಪುಣ್ಯಾರಿ” ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT