ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಷಗಿರಿ 2ಡಿ ಗರಿ

Last Updated 24 ಡಿಸೆಂಬರ್ 2010, 7:15 IST
ಅಕ್ಷರ ಗಾತ್ರ

ಇದು ಹೊಸ ಬಗೆಯ ಸ್ಕೂಲ್! ಕನ್ನಡದ ಚಿಣ್ಣರನ್ನು ಕನಸುಗಳ ಅನಿಮೇಷನ್ ಲೋಕಕ್ಕೆ ಕೊಂಡೊಯ್ಯಲು ತುದಿಗಾಲಲ್ಲಿ ನಿಂತಿದ್ದಾರೆ ಶೇಷಗಿರಿ ಯಲಮೇಲಿ. ‘ಚಿಂಟು ಸ್ಕೂಲ್’ ಎನ್ನುವ 2ಡಿ ಅನಿಮೇಷನ್ ಚಿತ್ರವನ್ನು ರೂಪಿಸುತ್ತಿರುವ ಶೇಷಗಿರಿ, ಕನ್ನಡ ಚಿತ್ರರಂಗಕ್ಕೆ ಹೊಸ ಗರಿಯನ್ನು ಮುಡಿಸುವ ಉತ್ಸಾಹದಲ್ಲಿದ್ದಾರೆ.

ಮಕ್ಕಳ ಚಿತ್ರಗಳು ಅಪರೂಪವಾಗುತ್ತಿರುವ ಈ ದಿನಗಳಲ್ಲಿ, ‘ಚಿಂಟು ಸ್ಕೂಲ್’ ಎನ್ನುವ ‘2ಡಿ’ ಚಿತ್ರವನ್ನು ಶೇಷಗಿರಿ ರೂಪಿಸುತ್ತಿದ್ದಾರೆ. ಇಂಥ ಸಿನಿಮಾ ಮಾಡುವುದು ತಮಾಷೆಯ ಮಾತಲ್ಲ ಎನ್ನುವುದು ಶೇಷಗಿರಿ ಅವರಿಗೆ ಗೊತ್ತು. ಅರಿವಿದ್ದೂ, ಈ ಸವಾಲಿಗೆ ಪ್ರೀತಿಯಿಂದಲೇ ಮುಖಾಮುಖಿಯಾಗಿರುವ ಅವರು, ‘ಚಿಂಟು ಸ್ಕೂಲ್’ ನಿರ್ಮಾಣದ ಹಂತದಲ್ಲಿ ಈಗಾಗಲೇ ಸಾಕಷ್ಟು ಹೆಜ್ಜೆ ಇಟ್ಟಾಗಿದೆ. ಇನ್ನೊಂದು ತಿಂಗಳಲ್ಲಿ ಸಿನಿಮಾ ಹೆಚ್ಚೂಕಡಿಮೆ ಮುಗಿಯಲಿದೆ.
ಸಾಕಷ್ಟು ಪ್ರಚಾರದ ನಂತರ ಏಪ್ರಿಲ್‌ನಲ್ಲಿ ಸಿನಿಮಾ ತೆರೆಕಾಣಿಸುವುದು ಅವರ ಉದ್ದೇಶ. ಬೇಸಿಗೆ ರಜೆಗಳು ಆರಂಭವಾಗುವ ಆ ಸಮಯ ತಮ್ಮ ಚಿತ್ರಕ್ಕೆ ಟಾನಿಕ್‌ನಂತೆ ಪರಿಣಮಿಸಬಹುದು ಎನ್ನುವುದು ಶೇಷಗಿರಿ ಬಳಗದ ನಿರೀಕ್ಷೆ.ಶೇಷಗಿರಿ ಅವರ ಪ್ರಯತ್ನದ ಹಿಂದೆ ಲಭ್ಯ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕನಸಿದೆ. ಅನೇಕ ಹಾಲಿವುಡ್ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸ ಭಾರತದಲ್ಲಿ ನಡೆಯುವಾಗ, ಇಲ್ಲಿನ ತಂತ್ರಜ್ಞಾನವನ್ನು ನಾವೇಕೆ ಬಳಸಿಕೊಳ್ಳಬಾರದು ಎನ್ನುವ ಪ್ರಶ್ನೆ ಅವರದ್ದು.

‘ಚಿಂಟು ಸ್ಕೂಲ್’ ಕಥೆ ಸರಳವಾದುದೇ. ಉಳ್ಳವರ ಮಕ್ಕಳು ದುರ್ಬಲ ವರ್ಗದ ಮಕ್ಕಳಿಗೆ ನೆರವಾಗಬೇಕು ಎನ್ನುವ ಆಶಯ ಕಥೆಯಲ್ಲಿದೆ. ಈ ಕಥೆ ತಂತ್ರಜ್ಞಾನದ ಪ್ರಭಾವಳಿಯಲ್ಲಿ ಅದ್ಭುತವಾಗಿ ಮೂಡಿಬರಲಿದೆ; ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ದಕ್ಷಿಣ ಭಾರತದ ಮೊದಲ ಅನಿಮೇಷನ್ ಚಿತ್ರವಿದು ಎನ್ನುವಾಗ ಕನ್ನಡಕದ ಹಿಂದಿನ ಶೇಷಗಿರಿ ಅವರ ಕಣ್ಣುಗಳಲ್ಲಿ ಹೊಳಪು ಕಾಣಿಸುತ್ತದೆ.

ಸಂಭಾಷಣೆಕಾರ ಜೆ.ಎಂ.ಪ್ರಹ್ಲಾದ್ ಅವರಿಗೂ ‘ಚಿಂಟು ಸ್ಕೂಲ್’ ಬಗ್ಗೆ ನಿರೀಕ್ಷೆಗಳಿವೆ. ಕಲ್ಪನೆಗೆ ಅಪಾರ ಅವಕಾಶವಿರುವ ಇಂಥ ಚಿತ್ರವನ್ನು ರೂಪಿಸಿರುವ ಚಿತ್ರತಂಡದ ಬಗ್ಗೆ ಪ್ರಹ್ಲಾದ್ ಅವರದ್ದು ಮುಕ್ತ ಪ್ರಶಂಸೆ. ಚಿತ್ರದ ಪಾತ್ರವೊಂದಕ್ಕೆ ಕಿರುತೆರೆಯ ಜನಪ್ರಿಯ ಕಲಾವಿದ ಚಿದಾನಂದ ಕಂಠದಾನ ಮಾಡಿದ್ದಾರೆ.
ವಿ.ಮನೋಹರ್, ಎಂ.ಎನ್.ವ್ಯಾಸರಾವ್ ಹಾಗೂ ಜೆ.ಎಂ.ಪ್ರಹ್ಲಾದ್ ‘ಚಿಂಟು ಸ್ಕೂಲ್’ಗೆ ಹಾಡುಗಳನ್ನು ಬರೆದಿದ್ದಾರೆ. ಆನಂದ ಕಿಡಂಬಿ ಹಾಗೂ ಜಿ.ವಿ.ರಾಘವೇಂದ್ರ ಸ್ಕೂಲ್‌ಗೆ ಬಂಡವಾಳ ಹಾಕಿದವರು. ಮುಂದಿನ ದಿನಗಳಲ್ಲಿ ‘ಮಾಲ್ಗುಡಿ ಡೇಸ್’ ಕಥನವನ್ನು ಅನಿಮೇಷನ್‌ನಲ್ಲಿ ರೂಪಿಸುವ ಆಸೆ ಅವರದು. 
                                                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT