ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಸಮ್ಮೇಳನ: ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ

Last Updated 3 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘವು ಪ್ರಾಂಶುಪಾಲರ ಸಂಘದೊಂದಿಗೆ ಆಯೋಜಿಸಲು ಹೊರಟಿರುವ ಜಿಲ್ಲಾ ಶೈಕ್ಷಣಿಕ ಸಮ್ಮೇಳನವು ಏಕಪಕ್ಷೀಯ ನಿರ್ಧಾರವಾಗಿದ್ದು, ಇದರಲ್ಲಿ ನಾವು ಭಾಗವಹಿಸಲ್ಲ ಎಂದು ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ನೌಕರರ ಸಂಘದ ಅಧ್ಯಕ್ಷ ಪಿ.ಮಹದೇವಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನವನ್ನು ಎಲ್ಲ ಸಂಘಗಳ ಸಹಭಾಗಿತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು ಎಂದರು.

ಆದರೆ, ಈಗ ಏಕಾಏಕಿಯಾಗಿ ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಏಕಪಕ್ಷೀಯವಾಗಿ ಸಮ್ಮೇಳನ ಆಯೋಜಿಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಒಲವು ಗಳಿಸುವುದಕ್ಕಾಗಿ ಸಂಘದ ಸದಸ್ಯರು ಈ ಸಮ್ಮೇಳನವನ್ನು ಆಯೋಜಿಸುತ್ತಿದ್ದಾರೆ ಹೊರತು, ನಿಜವಾದ ಶೈಕ್ಷಣಿಕ ಕಾಳಜಿಗಾಗಿ ಅಲ್ಲ. ಅಲ್ಲಿ ಯಾವುದೇ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ತಿಳಿಸಿದರು.

ಈ ಸಂಘವು ಇದುವರೆಗೆ ನೋಂದಣಿಯಾಗಿಲ್ಲ. ಆದರೆ, ನೋಂದಣಿಯಾಗಿದೆ ಎಂದು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ.

ಅಲ್ಲದೇ, ಆ ಸಂಘದ ಕೆಲವು ಪದಾಧಿಕಾರಿಗಳು ಅರೆಕಾಲಿಕ ಹುದ್ದೆಗಳಲ್ಲಿದ್ದರೂ ಹಿರಿಯ ಉಪನ್ಯಾಸಕರು, ಹಿರಿಯ ಪ್ರಾಂಶುಪಾಲರು ಎಂದೆಲ್ಲ ತಪ್ಪುತಪ್ಪಾಗಿ ಹುದ್ದೆಗಳನ್ನು ಹೆಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂಘದಲ್ಲಿ ಕೇವಲ 26 ಕಾಲೇಜುಗಳ ಉಪನ್ಯಾಸಕರು ಮಾತ್ರ ಸದಸ್ಯರಾಗಿದ್ದಾರೆ.

ಆದರೆ, ನಮ್ಮ ಸಂಘದಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ಕಾಲೇಜುಗಳ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕೂಡ ಸದಸ್ಯರಾಗಿದ್ದಾರೆ. ಇಷ್ಟಾಗಿಯೂ ನಮ್ಮನ್ನು ಕಡೆಗಣಿಸಿ ಶೈಕ್ಷಣಿಕ ಸಮ್ಮೇಳನ ನಡೆಸಲು ಅವರು ಮುಂದಾಗಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಎಚ್. ಖಂಡೋಬಾ, ಸಹ-ಕಾರ್ಯದರ್ಶಿ ಸಿದ್ದರಾಜು, ನಿರ್ದೇಶಕ ನಾಗಮಾದೇಶ ಇದ್ದರು.

ತಾ.ಪಂ.ಸಭೆ ಇಂದು
ಮಡಿಕೇರಿ: ಮಡಿಕೇರಿಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೊಸಮನೆ ಕವಿತಾ ಪ್ರಭಾಕರ ಅವರ ಅಧ್ಯಕ್ಷತೆಯಲ್ಲಿ ಅ.3 ರಂದು ಬೆಳಿಗ್ಗೆ 11 ಗಂಟೆಗೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಅವರು ತಿಳಿಸಿದ್ದಾರೆ.

ವಾರ್ಷಿಕ ಶಿಬಿರ ಇಂದಿನಿಂದ

ಮಡಿಕೇರಿ: ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆರೋಗ್ಯ ಪೂರ್ಣ ಭಾರತಕ್ಕೆ ಆರೋಗ್ಯವಂತ ಯುವ ಜನತೆ 2012-13ನೇ ವಾರ್ಷಿಕ ವಿಶೇಷ ಶಿಬಿರ ಅ.3 ರಿಂದ ಅ.9 ರ ವರೆಗೆ ವಿರಾಜಪೇಟೆಯ ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ಕಾಲೇಜು ಬಾಳುಗೋಡಿನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08274-200447ನ್ನು ಸಂಪರ್ಕಿಸಬಹುದು.

ಅವಿರೋಧ ಆಯ್ಕೆ
ಮಡಿಕೇರಿ: ಬೈರಂಬಾಡ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನಿಯಮಿತದ ಅಧ್ಯಕ್ಷರಾಗಿ ಕೆ.ಪಿ.ನಾಗರಾಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

ಆಯ್ಕೆ
ಮಡಿಕೇರಿ: ವಿರಾಜಪೇಟೆ ತಾಲ್ಲೂಕು ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿ ಕೆ.ಪಿ. ನಾಗರಾಜ್ ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಂ.ಬಿ.ಅಪ್ಪಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT