ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶೈಕ್ಷಣಿಕಾಭಿವೃದ್ಧಿ ಅನುದಾನ ಶೇ 75 ಬಳಕೆ'

Last Updated 6 ಸೆಪ್ಟೆಂಬರ್ 2013, 8:34 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನಲ್ಲಿ ಶೈಕ್ಷಣಿಕಾಭಿವೃದ್ಧಿಗೆ ಕಳೆದ ಸಾಲಿನ ವಿಧಾನಸಭಾ ಸದಸ್ಯರ ಅವಧಿಯಲ್ಲಿ ರೂ 19 ಕೋಟಿ ಅನುದಾನ ತರಲಾಗಿದ್ದು, ಈ ಅನುದಾನದಲ್ಲಿ ಶೇ 75ರಷ್ಟು ವಿವಿಧ ಕಾಮಗಾರಿಗಳಿಗೆ ಬಳಕೆಯಾಗಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.

ತಾಲ್ಲೂಕಿನ ಚಿಕ್ಕಹುಣಸೂರು ಗ್ರಾಮದಲ್ಲಿ ರೂ 32 ಲಕ್ಷ ವೆಚ್ಚದಲ್ಲಿ ಪ್ರೌಢಶಾಲಾ ಕಟ್ಟಡ ಕಾಮಗಾರಿಗೆ ಸೆ. 6ರಂದು ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲ್ಲೂಕಿನ ರತ್ನಾಪುರಿ ಗ್ರಾಮದಲ್ಲಿ ರೂ 1.14 ಕೋಟಿ ವೆಚ್ಚದಲ್ಲಿ ಕಸ್ತೂರಬಾ ವಸತಿ ನಿಲಯ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಗುತ್ತದೆ. ಹನಗೋಡು ಹೋಬಳಿ ಕೇಂದ್ರದ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಿಸಲು ರೂ 2 ಕೋಟಿ, ಹುಣಸೂರು ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಮೊದಲ ಮಹಡಿಯ ಹೆಚ್ಚುವರಿ ಕೊಠಡಿ ನಿರ್ಮಿಸಲು ರೂ 1 ಕೋಟಿ, ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮೊದಲ ಮಹಡಿ ನಿರ್ಮಿಸಲು ರೂ 1 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದರು. ಈ ಎಲ್ಲ ಕಾಮಗಾರಿಗಳಿಗೂ ಸೆ.11ರಂದು ಚಾಲನೆ ನೀಡಲಿದ್ದೇನೆ ಎಂದರು.

ಹುಣಸೂರು ತಾಲ್ಲೂಕು ಉಪವಿಭಾಗವಾಗಿದ್ದರೂ ಕ್ಷೇತ್ರದಲ್ಲಿ ತಾಂತ್ರಿಕ ಶಿಕ್ಷಣದ ಕೊರತೆ ಸ್ಥಳಿಯರನ್ನು ಕಾಡುತ್ತಿತ್ತು. ಈ ಕೊರತೆಯನ್ನು ನೀಗಿಸುವ ದಿಕ್ಕಿನಲ್ಲಿ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ವಿಚಾರವಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ತಾಂತ್ರಿಕ ಶಿಕ್ಷಣ ಕಾಲೇಜು ತೆರೆಯಲು ನಿವೇಶನ ಹುಡುಕಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದ್ದಾರೆ ಎಂದರು.

ಲಕ್ಷ್ಮಣತೀರ್ಥ ನದಿ ಹನಗೋಡು ನಾಲೆ ಮತ್ತು ಹಾರಂಗಿ ನಾಲಾ ಬಯಲು ಇದ್ದು, ಈ ಎರಡೂ ನಾಲೆಗಳನ್ನು ಅಧುನಿಕೀಕರಣಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ವರದಿಯಲ್ಲಿ ರೂ 120 ಕೋಟಿ ಅನುದಾನ ಅಗತ್ಯವಿದ್ದು, ಸರ್ಕಾರದಲ್ಲಿ ನೀರಾವರಿಗೆ ಅನುದಾನ ಇರುವುದರಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದರು.

ಲೋಕೋಪಯೋಗಿ ಇಲಾಖೆ ಸಚಿವಾಲಯಕ್ಕೆ ತಾಲ್ಲೂಕಿನ ರಸ್ತೆ ದುರಸ್ತಿ ಕಾಮಗಾರಿ ನಡೆಸಲು ರೂ 65 ಕೋಟಿ ವೆಚ್ಚದ ಕಾಮಗಾರಿಗಳ ವರದಿ ನೀಡಲಾಗಿದೆ. ಸಚಿವರು ಸ್ಪಂದಿಸಿ ಎರಡೂ ಹಂತದಲ್ಲಿ ತಾಲ್ಲೂಕಿನ ರಸ್ತೆ ಕಾಮಗಾರಿಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಪಟ್ಟಣದ ವಿವಿಧ ಬಡಾವಣೆಯ ರಸ್ತೆ ಕಾಮಗಾರಿಗಳನ್ನು ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ ತೆಗೆದುಕೊಳ್ಳಲಾಗುತ್ತಿದ್ದು, ಮಲೆನಾಡು ಅಭಿವೃದ್ಧಿ ಸಮಿತಿ ಈಗಾಗಲೇ ರೂ 35 ಲಕ್ಷ ಅನುದಾನ ಮಂಜೂರು ಮಾಡಿದೆ. ಹೆಚ್ಚುವರಿ ರೂ 70 ಲಕ್ಷ ನೀಡುವಂತೆ ಮನವಿ ಮಾಡಲಾಗಿದೆ. ಪಟ್ಟಣದ ಪಂಪ್ ಹೌಸ್ ಬಳಿಯಿಂದ ಸ್ಮಶಾನಕ್ಕೆ ತೆರಳುವ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಗಿದ್ದು, ಈ ಜನರಿಗೆ ಅನುಕೂಲ ಕಲ್ಪಿಸಲು ತೂಗು ಸೇತುವೆಯನ್ನು ರೂ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸಕಲ ಸಿದ್ಧತೆ ನಡೆದಿದೆ ಎಂದರು.

ತಾಲ್ಲೂಕಿನ ಪ್ರಮುಖ ಇಲಾಖೆ ಅಧಿಕಾರಿಗಳನ್ನು ಬದಲಾಯಿಸಿದ ಬಳಿಕವಷ್ಟೇ ಕೆಡಿಪಿ ಸಭೆ ನಡೆಸಿ ಅಭಿವೃದ್ಧಿ ಪರಿಶೀಲನೆ ನಡೆಸಲಿದ್ದೇನೆ ಎಂದು ಎಂದರು.

ಸೋಮಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಮೇಶ್, ಡಾ.ಪುಷ್ಪಾ ಅಮರನಾಥ್, ಸುನಿತಾಜಯರಾಮೇಗೌಡ, ಡೇರಿ ರಾಮಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT