ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಲಜಾ, ಆಶಾ ನಡುವೆ ಪೈಪೋಟಿ

Last Updated 8 ಫೆಬ್ರುವರಿ 2011, 9:35 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಗೆ ನೂತನ ಸಾರಥಿಗಳ ಆಯ್ಕೆ ಇಂದು (ಮಂಗಳವಾರ) ನಡೆಯಲಿದ್ದು ಕೊನೆಯ ಕ್ಷಣದವರೆಗೂ ಉಪಾಧ್ಯಕ್ಷೆ ಸ್ಥಾನಕ್ಕಿಂತ ಅಧ್ಯಕ್ಷೆ ಹುದ್ದೆಗೆ ಇಬ್ಬರು ಮಹಿಳಾ ಸದಸ್ಯರಲ್ಲಿ ತೀವ್ರ ಪೈಪೋಟಿ ಕಂಡುಬಂದಿದೆ.ಅಧ್ಯಕ್ಷೆ ಯಾರಾಗಬೇಕು ಎಂಬುದರ ಕುರಿತು ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ಸಂಜೆಯಿಂದ ರಾತ್ರಿತನಕ ಇಲ್ಲಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದರೂ ಯಾರೊಬ್ಬರ ಪರವಾಗಿ ಸ್ಪಷ್ಟ ಅಭಿಪ್ರಾಯ ಮೂಡಿಲ್ಲ ಎನ್ನಲಾಗಿದೆ. ಚುನಾವಣೆ ನಡೆಯುವ ಮಂಗಳವಾರ ಬೆಳಿಗ್ಗೆಯೇ ಆಯ್ಕೆಯ ಕುರಿತು ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಸಂಸದ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಹಲವು ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದು ತಡರಾತ್ರಿತನಕ ಎಲ್ಲ ಮುಖಂಡರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡು ಮಹಿಳೆಯರಿಗೆ ಮೀಸಲಾಗಿರುವುದರಿಂದ ಬಿಜೆಪಿಯ 13 ಮಂದಿ ಮಹಿಳಾ ಸದಸ್ಯರಲ್ಲೆ ಪೈಪೋಟಿ ಕಂಡಿದ್ದು ಕೊನೆ ಕ್ಷಣದಲ್ಲಿ ಇಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ.

ವಿಟ್ಲ ಕ್ಷೇತ್ರದಿಂದ ಗೆದ್ದಿರುವ ಶೈಲಜಾ ಭಟ್ ಇಲ್ಲವೆ ಬೆಳ್ಳಾರೆ ಕ್ಷೇತ್ರದಲ್ಲಿ ಮರು ಆಯ್ಕೆಯಾಗಿರುವ ಆಶಾ ತಿಮ್ಮಪ್ಪ ಅವರಲ್ಲಿ ಒಬ್ಬರು ಅಧ್ಯಕ್ಷೆಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.ಅಧ್ಯಕ್ಷೆ ಹುದ್ದೆ ಮಹಿಳಾ (ಸಾಮಾನ್ಯ) ವರ್ಗಕ್ಕೆ ಮೀಸಲಾಗಿರುವುದರಿಂದ ಪೈಪೋಟಿ ಸಹಜವಾಗಿ ಹೆಚ್ಚಿದ್ದು ಹಿರಿಯ ಸದಸ್ಯೆ ಆಶಾ ತಿಮ್ಮಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಜಿಪಂ ಕಲಾಪ ಸುಗಮವಾಗಿ ನಡೆಸಿಕೊಂಡು ಹೋಗಬಹುದು ಎಂಬ ಲೆಕ್ಕಾಚಾರ ಮುಖಂಡರಲ್ಲಿದೆ. ಆದರೆ ದಿಢೀರನೆ ಬದಲಾದ ಪಕ್ಷದ ಮುಖಂಡರ ಲೆಕ್ಕಾಚಾರದಲ್ಲಿ ಆಶಾ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದ್ದು ಶೈಲಜಾ ಭಟ್ ಅವರೇ ಅಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ, ಭಟ್ ಆಯ್ಕೆಗೆ ಸಂಘ ಪರಿವಾರ ಒಲವು ತೋರಿಸಿದ್ದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಇದೇ ವರ್ಗದಲ್ಲಿ ಒಳಗೊಂಡು, ಸಂಘ ಪರಿವಾರಕ್ಕೂ ಹತ್ತಿರವಾಗಿರುವ ಸದಸ್ಯೆ ಶೈಲಜಾ ಭಟ್ ಆಗಿದ್ದಾರೆ. ಹಲವು ವರ್ಷಗಳ ನಂತರ ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಆಶಾ ತಿಮ್ಮಪ್ಪ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಸಾಮಾನ್ಯ ವರ್ಗದ ಮಹಿಳೆಯರು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಬೇಕಾಗುತ್ತದೆ ಎಂಬ ಆತಂಕವೂ ವರಿಷ್ಠರಲ್ಲಿದೆ.

ಆಶಾಗೆ ಅಧ್ಯಕ್ಷ ಸ್ಥಾನ ಕೈತಪ್ಪಿದಲ್ಲಿ ಅವರನ್ನು ಉಪಾಧ್ಯಕ್ಷೆಯಾಗಿ ನೇಮಿಸುವ ಸಾಧ್ಯತೆಯೂ ಹೆಚ್ಚಾಗಿದೆ.ಆಶಾಗೆ ಹೋಲಿಸಿದರೆ ಶೈಲಜಾ ಜಿಪಂ ಅನುಭವದಲ್ಲಿ ಕಿರಿಯ ಎನಿಸಿದ್ದರೂ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದು ಮುಖಂಡರು ಅವರ ಪರ ಒಲವು ತೋರಿಸಲು ಕಾರಣ ಎನ್ನಲಾಗಿದೆ. ಪದವೀಧರೆಯಾದ ಶೈಲಜಾ ಇಡ್ಕಿದು ಗ್ರಾಪಂ ಅಧ್ಯಕ್ಷೆಯಾಗಿ, ಬಂಟ್ವಾಳ ಎಪಿಎಂಸಿ ಸದಸ್ಯೆಯಾಗಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
 
ಇದಕ್ಕಿಂತ ಮುಖ್ಯವಾಗಿ ಆರ್‌ಎಸ್‌ಎಸ್ ಮುಖಂಡರಿಗೆ ಶೈಲಜಾ ಹತ್ತಿರವಾಗಿ ಗುರುತಿಸಿಕೊಂಡಿರುವುದು ಅಧ್ಯಕ್ಷೆ ಹುದ್ದೆ ಅಲಂಕರಿಸುವಲ್ಲಿ ನೆರವಾಗುತ್ತಿದೆ. ಹೊಸಬರಿಗೆ ಅವಕಾಶ ನೀಡುವುದು ಬೇಡ ಎಂದು ಮುಖಂಡರು ಕೊನೆ ಕ್ಷಣದಲ್ಲಿ ತೀರ್ಮಾನ ಕೈಗೊಂಡಲ್ಲಿ ಶೈಲಜಾಗೆ ಅಧ್ಯಕ್ಷ ಸ್ಥಾನ ಕೈತಪ್ಪಬಹುದು. ಆದರೆ ಅಧ್ಯಕ್ಷೆ ಸ್ಥಾನ ಕೈಕೊಟ್ಟರೂ ಉಪಾಧ್ಯಕ್ಷೆ ಸ್ಥಾನವಾದರೂ ಶೈಲಜಾಗೆ ಸಿಕ್ಕುವುದು ಖಚಿತ. ಉಪಾಧ್ಯಕ್ಷೆ ಸ್ಥಾನಕ್ಕೆ ಬೆಳ್ತಂಗಡಿ ತಾಲ್ಲೂಕಿನ ತುಳಸಿ ಹಾರಬೆ ಅವರ ಹೆಸರೂ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT