ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಕಾಲ್‌ಸ್ಕಿಯ್ ಹಡಗಿನಲ್ಲಿದ್ದ ವಿಜ್ಞಾನಿಗಳ ರಕ್ಷಣೆ

ಅಂಟಾರ್ಕ್ಟಿಕಾ ಹಿಮಸಾಗರದಲ್ಲಿ ಸಿಲುಕಿದ್ದ ಹಡಗು: ಸತತ ಐದು ಗಂಟೆಗಳ ರಕ್ಷಣಾ ಕಾರ್ಯಾಚರಣೆ ಯಶಸ್ವಿ
Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ (ಎಪಿ): ಎಂಟು ದಿನಗಳಿಂದ ಅಂಟಾರ್ಕ್ಟಿಕಾದ ಹಿಮ ಸಾಗರದ ನಡುವೆ ಸಿಲುಕಿದ್ದ ‘ಎಂವಿ ಅಕಾಡೆಮಿಕ್ ಶೋಕಾಲ್‌­ಸ್ಕಿಯ್’ಹಡಗಿ­ನಲ್ಲಿ­ದ್ದ ವಿಜ್ಞಾನಿಗಳು ಮತ್ತು ಪ್ರಯಾಣಿಕ­ರನ್ನು ಗುರುವಾರ ರಕ್ಷಿಸಲಾಗಿದೆ.

ಶೋಧಯಾತ್ರೆಯ ಹಡಗಿನಲ್ಲಿ ಸಿಲುಕಿದ್ದ ವಿಜ್ಞಾನಿಗಳು ಮತ್ತು  ಅವರ ಸಹಾಯಕರು ಸೇರಿ ಒಟ್ಟು 52 ಪ್ರಯಾ­ಣಿಕ­ರನ್ನು ಹೆಲಿಕಾಪ್ಟರ್‌ ಮೂಲಕ  ಆಸ್ಟ್ರೇಲಿಯಾ­ದ ‘ಅರೊರಾ ಆಸ್ಟ್ರಾಲಿಸ್’ ಎಂಬ ವಿಶೇಷ ಹಡಗಿಗೆ   ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಸತತ ಐದು ಗಂಟೆಗಳ ಕಾರ್ಯಾ­ಚರಣೆ ಯಶಸ್ವಿಯಾಗಿದ್ದು ಎಲ್ಲರೂ ಸುರಕ್ಷಿತ­­ವಾಗಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ತಂಡದ ಮುಖ್ಯಸ್ಥ ಕ್ರಿಸ್‌ ಟರ್ನಿ ತಿಳಿಸಿದ್ದಾರೆ.

ಒಂದು ಬಾರಿ 12 ಜನರಂತೆ ಎಲ್ಲರ­ನ್ನೂ  ಸ್ಥಳಾಂತರಿಸಲಾಗಿದ್ದು, ಎಲ್ಲರೂ ‘ಅರೊರಾ ಆಸ್ಟ್ರಾಲಿಸ್’  ಹಡಗಿ­ನಲ್ಲಿ ಸುರಕ್ಷಿತವಾಗಿದ್ದಾರೆ. ಜನವರಿ 15ರ ವೇಳೆಗೆ ಈ ಎಲ್ಲರೂ ಆಸ್ಟ್ರೇಲಿಯಾ ತಲುಪಲಿದ್ದಾರೆ ಎಂದು ತಿಳಿಸಿದರು.

ಸದ್ಯ‘ಶೋಕಾಲ್‌ಸ್ಕಿಯ್‌’ನಲ್ಲಿ ಹಲ ದಿನಗಳಿಗೆ ಸಾಕಾಗುವಷ್ಟು  ಆಹಾರ ದಾಸ್ತಾನು ಇದ್ದು ಚಿಂತಿಸುವ ಅಗತ್ಯವಿಲ್ಲ. ಅದು ಮುಳುಗುವ ಯಾವುದೇ ಅಪಾಯ ಇಲ್ಲದ ಕಾರಣ  22 ಸಿಬ್ಬಂದಿ ಹಡಗಿನಲ್ಲಿಯೇ ಉಳಿ­ಯಲು ನಿರ್ಧರಿಸಿ­ದ್ದಾರೆ ಎಂದು ಟರ್ನಿ ತಿಳಿಸಿದರು.

ಆಸ್ಟ್ರೇಲಿಯಾದ ‘ಅರೊರಾ ಆಸ್ಟ್ರಾಲಿಸ್’ ಮತ್ತು ಚೀನಾದ  ‘ಸ್ನೋ ಡ್ರ್ಯಾಗನ್’ನ ಹಡಗಿನ ಹೆಲಿಕಾಪ್ಟರ್‌­ಗಳು ಈ ಕಾರ್ಯಾಚರಣೆ­ಯಲ್ಲಿ   ಭಾಗ­ವಹಿಸಿದ್ದವು.
ಭಾರಿ ಹಿಮಗಾಳಿ ಮತ್ತು ದೊಡ್ಡ ಮಂಜುಗಡ್ಡೆ ಹಾಸುಗಳಿಂದಾಗಿ ಈ ಮೊದಲು ಕೈಗೊಂಡಿದ್ದ ಎಲ್ಲ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದವು. ಪ್ರತಿ­ಕೂಲ ಹವಾಮಾನದ ನಡುವೆಯೂ ಈ ಬಾರಿಯ ಕಾರ್ಯಾಚರಣೆ ಯಶಸ್ವಿ­ಯಾಗಿದೆ ಎಂದು ಟರ್ನಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ನಾನಾ ದೇಶಗಳ ವಿಜ್ಞಾನಿಗಳ ಹೊತ್ತ ಶೋಕಾಲ್‌ಸ್ಕಿಯ್ ಹಡಗು ನವೆಂಬರ್‌ 28ರಂದು ನ್ಯೂಜಿಲೆಂಡ್‌­ನಿಂದ ಅಂಟಾ­ರ್ಕ್ಟಿಕಾ­ಕ್ಕೆ ಪ್ರಯಾಣ ಬೆಳೆಸಿತ್ತು. ಸಾಗರದ ನೀರು ಹೆಪ್ಪುಗಟ್ಟಿದ ಕಾರಣ ಸಂಚರಿಸಲಾಗದೆ ಹಡಗು ನಡುವೆ ಸಿಲುಕಿಕೊಂಡಿತ್ತು. 

ಶೋಕಾಲ್‌ಸ್ಕಿಯ್‌ ನೆರವಿಗೆ ಧಾವಿ­ಸಿದ್ದ  ಚೀನಾದ ‘ಸ್ನೋ ಡ್ರ್ಯಾಗನ್’ ಮತ್ತು ಆಸ್ಟ್ರೇಲಿ­ಯಾದ  ‘ಅರೊರಾ ಆಸ್ಟ್ರಾಲಿಸ್’  ಹಡಗುಗಳು ಕೂಡ ಹಿಮ­ಸಾಗರದಲ್ಲಿ ಸಿಲುಕಿಕೊಂಡಿದ್ದವು. 

ನೂರು ವರ್ಷಗಳ ಹಿಂದೆ
(1911–13) ಆಸ್ಟ್ರೇಲಿಯಾದ ಡಗ್ಲಾಸ್ ಮಾವ್ಸನ್ ಎಂಬ ಸಾಹಸಿ  ಕೈಗೊಂಡಿದ್ದ ಅಂಟಾರ್ಕ್ಟಿಕಾ ಶೋಧ­ಯಾತ್ರೆ­ಯ ನೆನಪಿ­ಗಾಗಿ ಆಸ್ಟ್ರೇಲಿಯಾ ರಷ್ಯಾದ ಹಡಗನ್ನು ಬಾಡಿಗೆಗೆ ಪಡೆದು ಈ ವಿಶೇಷ ವಿಜ್ಞಾನ­ಯಾತ್ರೆ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT