ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾಯಾತ್ರೆ: ಅಂಗಡಿಗಳ ಮೇಲೆ ಕಲ್ಲು ತೂರಾಟ

Last Updated 24 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಟ್ ಹಿಂದೂ ಸಮಾಜೋತ್ಸವದ ಅಂಗವಾಗಿ ಗುರುವಾರ ನಡೆದ ಶೋಭಾಯಾತ್ರೆ ವೇಳೆ  ಕಿಡಿಗೇಡಿಗಳು ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ನಗರದಲ್ಲಿ  ಕೆಲಕಾಲ ಉದ್ವಿಗ್ನ  ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಧ್ಯಾಹ್ನ 2 ಗಂಟೆ ನಂತರ ಗದ್ದಿಗೆ ಬಳಿಯಿಂದ ಶೋಭಾಯಾತ್ರೆ ಆರಂಭವಾಯಿತು. ಈ ಯಾತ್ರೆ  ಮಹದೇವಪೇಟೆ ಪ್ರವೇಶಿಸುತ್ತಿದ್ದಂತೆಯೇ ಬಾಗಿಲು ತೆರೆದಿದ್ದಂತಹ ಅಂಗಡಿಗಳ ಮೇಲೆ ಕಲ್ಲು ತೂರಾಟ ಪ್ರಾರಂಭವಾಯಿತು. ಆನಂತರ ಶೋಭಾಯಾತ್ರೆ ಚೌಕಿ ವೃತ್ತ ಪ್ರವೇಶಿಸಿದ ನಂತರವೂ ಎರಡು-ಮೂರು  ಅಂಗಡಿಗಳ ಮೇಲೆ ಕಲ್ಲು ತೂರಲಾಯಿತು. ಇದರಿಂದ ಅಂಗಡಿಗಳ ಗಾಜುಗಳು ಪುಡಿ ಪುಡಿಯಾದವು.

ಆನಂತರ ಒಂದು ಕೋಮಿನ ವ್ಯಾಪಾರಿಗಳ ಗುಂಪು ತಮಗಾಗಿರುವ ಅನ್ಯಾಯವನ್ನು ಪ್ರತಿಭಟಿಸಿ  ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲೇ ಧರಣಿ ಕೂತಿತು. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ  ಪೊಲೀಸರ ಸರ್ಪಗಾವಲು ಹಾಕಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಯಿತು. ತಕ್ಷಣ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತ ಗುಂಪಿನ ಮನವೊಲಿಸಲು ಪ್ರಯತ್ನಿಸಿದರು.

ಕಿಡಿಗೇಡಿಗಳನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಎಸ್ಪಿ ಮನವಿ ಮಾಡಿಕೊಂಡರು. ಎಸ್ಪಿ ಹಾಗೂ ಐಜಿಪಿ ಮನವಿ ಮೇರೆಗೆ ಧರಣಿಯನ್ನು ಹಿಂಪಡೆಯಲಾಯಿತು.

ಈ ಮಧ್ಯೆ, ನಗರದ ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಎರಡು ಪ್ರಕರಣಗಳಲ್ಲಿ ಕಿಡಿಗೇಡಿಗಳು ಅಂಗಡಿಗಳ ಮೇಲೆ ಕಲ್ಲು ತೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT