ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋರೂಂ ಗೊಂಬೆಯಾಟ!

Last Updated 16 ಜನವರಿ 2013, 19:59 IST
ಅಕ್ಷರ ಗಾತ್ರ

ಕಡೆದಿಟ್ಟಂತಹ ಮೈಮಾಟ. ಒಮ್ಮೆ ಕಣ್ಣು ಹಾಯಿಸಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ರೂಪ. ಒಬ್ಬಳು ಈಜುಡುಗೆಯಲ್ಲಿ ಮಿಂಚಿದರೆ, ಮತ್ತೊಬ್ಬಳು ಮೈಸೂರು ಸಿಲ್ಕ್ ಸೀರೆ ಉಟ್ಟು ತುಸುವೇ ನಗೆ ಚೆಲ್ಲುತ್ತಿದ್ದಳು. ಪಕ್ಕದಲ್ಲೇ, ಸಲ್ವಾರ್ ಧರಿಸಿ ಸೊಂಟದ ಮೇಲೆ ಕೈಯಿಟ್ಟು ಇಳಿಬಿಟ್ಟ ಕೂದಲಿನಲ್ಲಿ ಮುದ್ದು ಹುಡುಗಿ!

ಅದು ಕೇವಲ ಹುಡುಗಿಯರ ಸಾಮ್ರಾಜ್ಯವಾಗಿರಲಿಲ್ಲ. ಸ್ವಲ್ಪ ಮುಂದೆ ಬಂದು ನೋಡಿದರೆ ಸ್ಲೀವ್‌ಲೆಸ್ ಟಿ-ಶರ್ಟ್, ಚಿಕ್ಕ ಚಡ್ಡಿ ತೊಟ್ಟು ಬಾಡಿ ಬಿಲ್ಡರ್‌ನಂತೆ ನಿಂತಿದ್ದ. ಇನ್ನೊಬ್ಬ ಮರುಳು ಮಾಡುವ ನಗೆಯಲ್ಲಿ ಸೂಟು, ಬೂಟು ಧರಿಸಿ ಸ್ಲಿಮ್ ಅಂಡ್ ಟ್ರಿಮ್ ಆಗಿ ಕಾಣುತ್ತಿದ್ದ.

ಇವರೆಲ್ಲ ಆ ಶೋರೂಂನಲ್ಲಿ ಯಾಕೆ ಕಲೆತಿದ್ದರು ಅಂದಿರಾ? ಅಯ್ಯೋ ಇವರು ಮನುಷ್ಯರಲ್ಲ ಮಾರಾಯ್ರೆ.. ಗೊಂಬೆಗಳು! ಒಂದೊಂದು ಭಂಗಿಯಲ್ಲಿ ನಿಂತು ಬಟ್ಟೆ, ಒಡವೆ ಅಂಗಡಿ/ಮಳಿಗೆಗಳಿಗೆ ಗ್ರಾಹಕರನ್ನು ಸೆಳೆಯುವ `ರಾಯಭಾರಿ'ಯಗಳು!

ಎಷ್ಟೋ ಬಾರಿ ಈ ಗೊಂಬೆಗಳಿಗೆ ಹಾಕಿದ ವಸ್ತ್ರ ನೋಡಿ ಖುಷಿಯಾಗಿ ಅದನ್ನು ಖರೀದಿಸಬೇಕೆಂಬ ಮನಸ್ಸಾಗುತ್ತದೆ. ಜತೆಗೆ ಆ ಗೊಂಬೆಯ ಮೈಮಾಟದೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವ ಭಾವವೂ ಮೂಡುತ್ತದೆ. ನೋಡಲು ಸರಳ, ಸುಂದರವಾಗಿರುವ ಈ ಗೊಂಬೆಗಳ ಉಪಯೋಗ ಹಲವು ಕ್ಷೇತ್ರಗಳಲ್ಲಿ ಇದೆ.

ಅಂದಹಾಗೆ, ನಾವು ಗೊಂಬೆ ಎಂದು ಕರೆಯುವ ಇವುಗಳ ಹೆಸರು `ಮ್ಯಾನಿಕ್ವೀನ್'. ಮ್ಯಾನಿಕ್ವೀನ್ ಎಂಬ ಪದ ಫ್ರೆಂಚ್‌ನ `ಮ್ಯಾನೆಕ್ವೀನ್'ನಿಂದ ಬಂದಿದ್ದಂತೆ. `ಮಾಡೆಲ್' ಎಂಬ ಅರ್ಥವನ್ನು ಈ ಹೆಸರು ನೀಡುತ್ತದೆ. (ಡಚ್ ಭಾಷೆಯಲ್ಲಿ `ಮ್ಯಾನೆಕಿನ್' ಅಂದರೆ ಕೃತಕ ಎಂದು ಅರ್ಥ).

ಮರದಿಂದ ಪಾಲಿಸ್ಟಿರೀನ್
ಮ್ಯಾನಿಕ್ವೀನ್ ಮೊದಲು ತಯಾರಾಗಿದ್ದು ಮರದಿಂದ. ಮರದಿಂದ ಕೆತ್ತನೆ ಮಾಡಿ, ಅವುಗಳಿಗೆ ಬಣ್ಣ ಬಳಿದು ಪ್ರತಿಕೃತಿಯನ್ನು ತಯಾರಿಸಲಾಗುತ್ತಿತ್ತು. ಆದರೆ ಈ ಮರದ ಆಕೃತಿಗಳು ಅತಿ ಭಾರವಾಗಿರುವುದರಿಂದ ಇವುಗಳ ಸಾಗಣೆ ವೆಚ್ಚ ದುಬಾರಿ. ಜತೆಗೆ ಬೇಗನೆ ಬಿರುಕು ಬಿಡುವುದೂ ಸಮಸ್ಯೆಯಾಗಿತ್ತು. ಹಾಗಾಗಿ, ಸಹಜವಾಗಿಯೇ ಹೊಸತನದ ಅನ್ವೇಷಣೆ ಶುರುವಾಯಿತು.

ಪಾಲಿಸ್ಟಿರೀನ್ ಗಟ್ಟಿಯಾದ ಪ್ಲಾಸ್ಟಿಕ್‌ನಂತೆ ಇದ್ದು, ಬಾಳ್ವಿಕೆಯೂ ಹೆಚ್ಚು. 15 ವರ್ಷಗಳ ಹಿಂದೆ ಪಾಲಿಸ್ಟಿರೀನ್‌ನಿಂದ ಬೊಂಬೆಗಳನ್ನು ಮಾಡಲು ಆರಂಭಿಸಿದರು. ಇದರ ತೂಕ ಕಡಿಮೆಯಾಗಿದ್ದು, ಸಾಗಣೆ ಸುಲಭವೆನಿಸಿತು. ಈ ಪಾಲಿಸ್ಟಿರೀನ್‌ನಲ್ಲಿ ಬೇಕಾದ ಬಣ್ಣ ಸೇರಿಸುವುದು ಸುಲಭವಾದ್ದರಿಂದ ಅನೇಕ ಕಂಪೆನಿಗಳು ಈ ಮ್ಯಾನಿಕ್ವೀನ್‌ಗಳನ್ನೇ ಹೆಚ್ಚು ಕೊಂಡುಕೊಳ್ಳಲು ಆರಂಭಿಸಿದರು.

ಸಿಲಿಕಾನ್ ಸಿಟಿಯಲ್ಲಿ...
ಮ್ಯಾನಿಕ್ವೀನ್ ಮಾರಾಟವನ್ನೇ ವೃತ್ತಿಯಾಗಿಸಿಕೊಂಡಿರುವ ಅನೇಕ ಮಳಿಗೆಗಳು ನಗರದಲ್ಲಿವೆ. `ಇಮೇಜ್ ಮೇಕರ್ಸ್‌' ಅಂತಹ ಮಳಿಗೆಗಳಲ್ಲಿ ಒಂದು. ಅದರ ಮಾಲೀಕರಾದ ರಾಜ್ ಆನಂದ್ ಈ ವೃತ್ತಿಯ ಕುರಿತು ತಮ್ಮ ಅನುಭವ ಬಿಚ್ಚಿಟ್ಟರು:

`1997ರಲ್ಲಿ ನಗರದಲ್ಲಿ ಈ ವೃತ್ತಿ ಶುರುಮಾಡಿದೆವು. ಅದಕ್ಕಿಂತ ಮೊದಲು ಮುಂಬೈನಲ್ಲಿತ್ತು. ಮ್ಯಾನಿಕ್ವೀನ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ತುರುಸಿನ ಸ್ಪರ್ಧೆಯೂ ಇದೆ. ಪಾಸ್ಟಿಕ್‌ನಿಂದಲೂ ಈಗ ಚಿಕ್ಕಚಿಕ್ಕ ಮ್ಯಾನಿಕ್ವೀನ್‌ಗಳನ್ನು ತಯಾರಿಸುತ್ತಾರೆ. ಇವುಗಳು ನೋಡಲು ಹ್ಯಾಂಗರ್ ರೀತಿ ಇರುತ್ತವೆ. ಆದರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.

ಒಂದು ಮ್ಯಾನಿಕ್ವೀನ್ ತಯಾರಿಸಲು ಎರಡು ಮೂರು ದಿನ ಬೇಕು. ಕೆಲಸಗಾರರಿಗೆ ಬೇಕಾದ ಆರು ತಿಂಗಳ ತರಬೇತಿಯನ್ನೂ ನೀಡುತ್ತೇವೆ. ಬೆಲೆ ರೂ 4,000ದಿಂದ ಶುರುವಾಗಿ 8,000ದ ವರೆಗೆ ಇದೆ. ಕೇವಲ ಮ್ಯಾನಿಕ್ವೀನ್‌ಗಳನ್ನು ತಯಾರಿಸುವುದು ಮಾತ್ರವಲ್ಲದೆ ನೋಡಲು ಆಕರ್ಷಣೀಯವಾಗಿರಲಿ ಎಂದು ಮೇಕಪ್ ಕೂಡ ಮಾಡುತ್ತೇವೆ. ಇದಕ್ಕೂ ನುರಿತ ಕಲಾವಿದರಿದ್ದಾರೆ. ನಗರದ ಅನೇಕ ಶೋರೂಂಗಳಿಗೆ ನಾವು ಮಾರಾಟ ಮಾಡುತ್ತೇವೆ'.

ಮ್ಯಾನಿಕ್ವೀನ್‌ಇತಿಹಾಸ
`ಮ್ಯಾನಿಕ್ವೀನ್'ಗಳು ಮನುಷ್ಯರ ರೂಪವನ್ನೇ ಹೋಲುವುದರಿಂದ 1950ರಲ್ಲಿ  ಮನುಷ್ಯನ ಮೇಲೆ ಶಸ್ತ್ರಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರೀಕ್ಷಿಸಲು ಅಣುಪರೀಕ್ಷೆಗಳಲ್ಲಿ ಬಳಸಿಕೊಳ್ಳುತ್ತಿದ್ದರು. ನಂತರ 15ನೇ ಶತಮಾನದಲ್ಲಿ ಫ್ಯಾಷನ್ ಹೌಸ್‌ಗಳಲ್ಲಿ ನಮ್ಮ ಮೂಲಕ ಗ್ರಾಹಕರಿಗೆ ವಿನ್ಯಾಸಗೊಳಿಸಿದ ಉಡುಪುಗಳನ್ನು ಪ್ರದರ್ಶಿಸಲು ಆರಂಭಿಸಿದರು.

ಆದರೆ ಪರಿಪೂರ್ಣವಾಗಿ ಬಳಸಿಕೊಂಡಿದ್ದು 18ನೇ ಶತಮಾನದಲ್ಲಿ. 1835ರಲ್ಲಿ ಪ್ಯಾರಿಸ್‌ನಲ್ಲಿ ವೈರ್‌ವರ್ಕ್ ಮ್ಯಾನಿಕ್ವೀನ್‌ಗಳನ್ನು ತಯಾರಿಸಲಾಯಿತು. ಫ್ರಾನ್ಸ್‌ನಲ್ಲಿ ಇವುಗಳಿಗೆ ಪ್ಯಾಪಿಯರ್ ಮ್ಯಾಕ್‌ನಿಂದ ಹೊಸ ರೂಪ ಕೊಟ್ಟಿದ್ದು 19ನೇ ಶತಮಾನದಲ್ಲಿ. ನಂತರ ಮೇಣದಲ್ಲಿ ಇವುಗಳನ್ನು ತಯಾರಿಸುವ ಅಭ್ಯಾಸ ಬೆಳೆಯಿತು. 1920ರಲ್ಲಿ ಈ ಮೇಣದ ಬೊಂಬೆಗಳೂ ಪರಿವರ್ತನೆಗೊಂಡವು. ಈಗ ಹೆಚ್ಚಾಗಿ ಮೌಲ್ಡೆಡ್ ಪ್ಲಾಸ್ಟಿಕ್‌ನಿಂದ ಮಾಡುತ್ತಾರೆ.

ಮ್ಯಾನಿಕ್ವೀನ್‌ಗಳು ಕೇವಲ ಫ್ಯಾಷನೆಬಲ್ ಬಟ್ಟೆ ಮಳಿಗೆಗೆ ಸೀಮಿತವಾಗಿಲ್ಲ. ವೈದ್ಯಕೀಯ ಕ್ಷೇತ್ರದಲ್ಲೂ ಬಳಕೆಯಾಗುತ್ತವೆ. ಪ್ರಥಮ ಚಿಕಿತ್ಸೆಯ ಹಂತಗಳನ್ನು ತಿಳಿಸಿಕೊಡುವ ಸಮಯದಲ್ಲಿ, ತುರ್ತು ಸೇವೆಯ ತರಬೇತಿಗೂ ಈ ಗೊಂಬೆಗಳು ಬೇಕು. ಅಗ್ನಿಶಾಮಕ ಸಿಬ್ಬಂದಿಗೆ ಜೀವರಕ್ಷಕ ತಂತ್ರಗಳ ಕಲಿಕೆಯಲ್ಲಿ, ಮಿಲಿಟರಿ ಉದ್ದೇಶಗಳಿಗೂ ಮ್ಯಾನಿಕ್ವೀನ್‌ಗಳು ಬಳಕೆಯಾಗುತ್ತಿದ್ದುದು ವಿಶೇಷ. ಇವಿಷ್ಟು ಮ್ಯಾನಿಕ್ವೀನ್‌ನ ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT