ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಕೈ ಹಿಡಿದೆತ್ತಿ: ಸ್ವಾಮೀಜಿ ಸಲಹೆ

ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳ ಸಂಘದ 58ನೇ ಮಹಾಧಿವೇಶನ
Last Updated 24 ಡಿಸೆಂಬರ್ 2012, 5:54 IST
ಅಕ್ಷರ ಗಾತ್ರ

ತುಮಕೂರು: ಇಂದಿಗೂ ಹೊಟ್ಟೆಗೆ ಅನ್ನವಿಲ್ಲದೆ, ಮೈತುಂಬ ಬಟ್ಟೆಯಿಲ್ಲದೆ, ವಾಸಕ್ಕೆ ಸೂರಿಲ್ಲದೆ ಬದುಕುವವರು ಈ ಸಮಾಜದಲ್ಲಿದ್ದಾರೆ. ಸಾಮಾಜಿಕ, ಆರ್ಥಿಕವಾಗಿ ಶೋಷಿತರಾದವರನ್ನು ಕೈ ಹಿಡಿದು ಮೇಲೆತ್ತಲು ಅಧಿಕಾರಿಗಳು, ಸರ್ಕಾರಿ ನೌಕರರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಿಷ್ಠೆಯಿಂದ ತಮ್ಮ ಕಾಯಕ ಮಾಡಬೇಕು ಎಂದು ಡಾ.ಶಿವಕುಮಾರ ಸ್ವಾಮೀಜಿ ಭಾನುವಾರ ಇಲ್ಲಿ ಸಲಹೆ ನೀಡಿದರು.

ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವಸದಸ್ಯರ 58ನೇ ಮಹಾಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸಿದ್ದಗಂಗಾ ಶಿವಕುಮಾರಶ್ರಿ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಕೆ.ಜಿ.ನಾಗರಾಜಪ್ಪ, ಪ್ರತಿ ನಿತ್ಯ ಸಾವಿರಾರು ಜನಕ್ಕೆ ಊಟಕ್ಕೆ ಇಕ್ಕುತ್ತಿರುವ ಮಠದ ಒಲೆ, ಬೆಟ್ಟದ ಮೇಲಿರುವ ಗಂಗೆ, ಉದ್ದಾನ ಸ್ವಾಮೀಜಿಗಳ ಪವಾಡ ಹಾಗೂ ಯಂತ್ರ ಕಟ್ಟುವ ಮಂಚ ಸಿದ್ದಗಂಗಾ ಮಠದ ಶಕ್ತಿಗಳು ಎಂದು ಅಭಿಪ್ರಾಯಪಟ್ಟರು.

ಸಿದ್ದಗಂಗಾ ಮಠ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದುದಲ್ಲ. ಕಾಯಕವೇ ಇಲ್ಲಿನ ಮಂತ್ರ. ಆದ್ದರಿಂದಲೇ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ, ಕುಟುಂಬದಿಂದ ದೂರವಾದ ಸಾವಿರಾರು ಮಕ್ಕಳು ಇಲ್ಲಿ ವಿದ್ಯೆ ಕಲಿತು ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಇದೆಲ್ಲ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಲ್ಲ. ಶಿವಕುಮಾರ ಸ್ವಾಮೀಜಿಗಳು ಒಂದು ಶಕ್ತಿ. ಸಮಾಜದ ಬಗೆಗೆ ಅವರಿಗಿರುವ ಅದಮ್ಯ ಕಾಳಜಿ ಇದನ್ನು ಸಾಧ್ಯವಾಗಿಸಿದೆ. ನಾಡಿನ ಉಳಿದೆಲ್ಲ ಮಠಗಳಿಗಿಂತ ಸಿದ್ದಗಂಗಾ ಮಠ ಪ್ರತ್ಯೇಕವಾಗಿ ನಿಲ್ಲುತ್ತದೆ. ಗುರು ಹಾಗೂ ವಿರಕ್ತ ಸಂಘರ್ಷ ಇಲ್ಲಿ ಉದ್ಭವಿಸಿಲ್ಲ ಎಂದರು.

ಸತ್ಯ, ಶುದ್ಧ ಹಾಗೂ ಕಾಯಕಕ್ಕೆ ಮೂರ್ತ ರೂಪದಂತೆ ಸಿದ್ದಗಂಗೆ ಮಠವು ನಮ್ಮೆದುರಿಗಿದೆ. ಶಿವಕುಮಾರ ಸ್ವಾಮೀಜಿಗಳು ಸೇವೆಯನ್ನು ತಮ್ಮ ಕಾಯಕ ಎಂಬಂತೆ ಭಾವಿಸಿ ಈಗಲೂ ಶ್ರಮಿಸುತ್ತಿದ್ದಾರೆ. ಎಲ್ಲ ಜಾತಿ, ಧರ್ಮವನ್ನು ಮೀರಿದ್ದು ಸಿದ್ದಗಂಗಾ ಮಠ ಎಂದು `ಸಿದ್ದಗಂಗಾ ಶಿವಕುಮಾರ ಶ್ರಿ' ಪ್ರಶಸ್ತಿ ಸ್ವೀಕರಿಸಿದ ಮಕ್ಕಳ ಹೃದಯ ತಜ್ಞೆ ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.

ಎಲ್.ವಿರೂಪಾಕ್ಷಯ್ಯ, ಎಂ.ಮಲ್ಲವೀರಯ್ಯ, ಬಿ.ಕೆ.ಲಿಂಗಯ್ಯ, ಎಚ್.ಟಿ.ಲಿಂಗಪ್ಪ ಅವರಿಗೆ ಸಂಘಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುಗಾವತಾರಿ, ಎಲೆಮರೆ ಕಾಯಿ ಸೇರಿದಂತೆ ನಾಲ್ಕು ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಲ್.ರೇವಣ್ಣಸಿದ್ದಯ್ಯ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT