ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರಿಗೆ ಮೀಸಲಾತಿ ನೀಡಿದ ‘ಮಹಾರಾಜ’

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಮತ
Last Updated 12 ಡಿಸೆಂಬರ್ 2013, 9:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಶೋಷಣೆ ಹಾಗೂ ತುಳಿತಕ್ಕೆ ಒಳಗಾದ ೫೪ ಸಮುದಾಯಗಳಿಗೆ ಮೈಸೂರು ಮಹಾರಾಜರು ದೇಶದಲ್ಲೇ ಮೊದಲ ಬಾರಿಗೆ ಮೀಸಲಾತಿ ಒದಗಿಸಿ ಆದರ್ಶ ಪ್ರಾಯರಾಗಿದ್ದಾರೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ನಗರದ ರಾಮಮಂದಿರದಲ್ಲಿ ಬುಧವಾರ ಭೋವಿ ಗುರುಪೀಠದ ವತಿಯಿಂದ ಹಮ್ಮಿಕೊಂಡಿದ್ದ ಮೈಸೂರು ಒಡೆಯರ ವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಶ್ರದ್ಧಾಂಜಲಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರಾಗಿದ್ದ ಸಂದರ್ಭದಲ್ಲಿ ತಳ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ತುಳಿತಕ್ಕೆ ಒಳಗಾದ ಪ್ರಯುಕ್ತ ಅವರನ್ನು ಮೇಲೆ ತರಬೇಕು ಎನ್ನುವ ಸದುದ್ದೇಶದಿಂದ ಮೀಸಲಾತಿ ನೀಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ, ವಿಶ್ವೇಶ್ವರಯ್ಯ ಅವರು ಮೀಸಲಾತಿ ನೀಡುವುದಾದರೆ ದಿವಾನಗಿರಿಗೆ ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಹೇಳಿದಾಗ ಅವರ ರಾಜೀನಾಮೆ ಪಡೆದ ಮಹಾರಾಜರು ಮೀಸಲಾತಿ ನೀತಿ ಜಾರಿಗೊಳಿಸಿದ್ದು, ಇತಿಹಾಸದಲ್ಲೇ ಮಹತ್ವದ ತೀರ್ಮಾನವಾಗಿದೆ. ಈ ಮೂಲಕ ಅವರ ಆಳ್ವಿಕೆಗೆ ಒಳಪಟ್ಟು ತುಳಿತಕ್ಕೆ ಒಳಗಾದ ೫೪ ಜಾತಿಗಳಿಗೆ ಮೀಸಲಾತಿ ನೀಡಿದ್ದು, ಮೈಸೂರು ಮಹಾರಾಜರು ಎಂದು ಹೇಳಿದರು.

‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅನೇಕ ರಾಜರು ಕೇಂದ್ರ ಸರ್ಕಾರಕ್ಕೆ ತಮ್ಮ ಸಂಸ್ಥಾನಗಳನ್ನು ಬಿಟ್ಟುಕೊಡಲು ಮೀನಾಮೇಷ ಎಣಿಸುತ್ತಿದ್ದಾಗ ಜಯಚಾಮರಾಜ ಒಡೆಯರು ಸಂಸ್ಥಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಾವಾಗಿಯೇ ಬಿಟ್ಟುಕೊಟ್ಟರು. ಅಡ್ಡಪಲ್ಲಕ್ಕಿ ಉತ್ಸವಕ್ಕೆ ಪರ ವಿರೋಧ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀಕಂಠದತ್ತ ಒಡೆಯರ್ ಬನ್ನಿ ಪೂಜೆಗೆ ಅಡ್ಡಪಲ್ಲಕ್ಕಿ ಬಿಟ್ಟು ಕಾರಿನಲ್ಲಿ ಪೂಜೆಗೆ ಹೋಗಿ ಬಂದಿದ್ದು, ಅವರ ಕುಟುಂಬ ಜನಪರವಾದ ನಿಲುವು ಹೊಂದಿರುವುದನ್ನು ತೋರಿಸುತ್ತದೆ’ ಎಂದು ತಿಳಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ,  ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸುವ ಮೂಲಕ ಆ ಭಾಗದ ಮತ್ತು ತಮಿಳುನಾಡಿನ ಜನರಿಗೆ ಉತ್ತಮ ಕಾಣಿಕೆ ನೀಡಿದರು. ಜಲಾಶಯ ನಿರ್ಮಿಸುವಾಗ ಹಣದ ಕೊರತೆ ಉಂಟಾಗಿದ್ದರಿಂದ ತಮ್ಮ ಕುಟುಂಬದಲ್ಲಿದ್ದ ಆಭರಣಗಳನ್ನು ಅಡವಿಟ್ಟು ಅಣೆಕಟ್ಟೆ ನಿರ್ಮಾಣ ಮಾಡಿದ ಕೀರ್ತಿ ಮೈಸೂರು ಮಹಾರಾಜರದ್ದು ಎಂದರು.

ಕೆಲವರು ವಿದ್ಯೆ ತಮ್ಮದೇ ಅಂದುಕೊಂಡಿದ್ದ ಸಂದರ್ಭದಲ್ಲಿ ಶಿಕ್ಷಣ ಎಲ್ಲರ ಹಕ್ಕು ಎನ್ನುವುದನ್ನು ತೋರಿಸಿಕೊಟ್ಟು ಎಲ್ಲರಿಗೂ ಶಿಕ್ಷಣ ನೀಡಲು ಮುಂದಾದರು. ರಾಜ್ಯದಲ್ಲಿ ಉತ್ತಮ ಅಭಿವೃದ್ಧಿಪರ ಆಡಳಿತ ನಡೆಸಿದ ಕುಟುಂಬದ ಕೊನೆಯ ಕೊಂಡಿ ಕಳಚಿಕೊಂಡಿದೆ. ಆದರೆ, ಅವರು ಮಾಡಿದಂತಹ ಜನಪರ, ಕೆಲಸ ಕಾರ್ಯಗಳು ಆ ಸಂಸ್ಥಾನದ ದೊಡ್ಡ ಕೊಡುಗೆ ಎಂದು ಶ್ಲಾಘಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಭೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ತಿಮ್ಮಣ್ಣ, ಮಾಜಿ ಅಧ್ಯಕ್ಷ ಗುರಪ್ಪ, ರುದ್ರಪ್ಪ, ಸೀತಾರಾಮಪ್ಪ, ಕಾರ್ಯದರ್ಶಿ ಭೀಮರಾಜ್, ಎಚ್.ಲಕ್ಷ್ಮಣ್, ಈರಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ್, ನಗರಸಭೆ ಮಾಜಿ ಸದಸ್ಯ ಮಂಜುನಾಥ್ ಹಾಜರಿದ್ದರು.

ಒಡೆಯರ್‌ಗೆ ಶ್ರದ್ಧಾಂಜಲಿ
ಹೊಸದುರ್ಗ:
ಯದುವಂಶದ ಕೊನೆಯ ಕುಡಿ  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಹೃದಯಾಘಾತದಿಂದ ನಿಧನರಾದ ಪ್ರಯುಕ್ತ ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬುಧವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಹಿರಿಯ ಪ್ರಾಧ್ಯಾಪಕ ಈರಣ್ಣ ಮಾತನಾಡಿ, ಆಂಗ್ಲರ ದಬ್ಬಾಳಿಕೆಯ ನೀತಿಯಿಂದ ದೇಶವನ್ನು ವಿಮುಕ್ತಗೊಳಿಸುವಲ್ಲಿ ಮೈಸೂರು ಒಡೆಯರ ಸೇವೆ ಹೆಚ್ಚಿನದಾಗಿದೆ. ಇಂತಹ ರಾಜವಂಶದ ಕೊನೆಯ ಕುಡಿ ಅಗಲಿರುವುದರಿಂದ ನಾಡಿಗೆ ಅಪಾರ ನಷ್ಟವಾಗಿದೆ ಎಂದರು.

ಒಡೆಯರ್‌ ನಿಧನ ಪ್ರಯುಕ್ತ ದಾವಣಗೆರೆ ವಿವಿ ಪದವಿ ಪರೀಕ್ಷೆಗಳನ್ನು ಮುಂದೂಡಿರುವ ವಿಷಯ ತಿಳಿಯದ ಗ್ರಾಮಾಂತರ ಪ್ರದೇಶದ ಅನೇಕ ವಿದ್ಯಾರ್ಥಿಗಳು  ಪರದಾಡಿದರು.

ಅರಸರ ಕೊಡುಗೆ ಅಪಾರ
ಮೊಳಕಾಲ್ಮುರು:
ಮೈಸೂರು ಅರಸರು ತಮ್ಮ  ಅಧಿಕಾರ ಅವಧಿಯಲ್ಲಿ ಗಡಿಭಾಗದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಮಾಜಿ ಅಧ್ಯಕ್ಷ ಕೆ.ಜಿ.ವೆಂಕಟೇಶ್‌ ಹೇಳಿದರು. ಇಲ್ಲಿನ ಕನ್ನಡ ಭವನದಲ್ಲಿ ಬುಧವಾರ ನಡೆದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರು ಅರಸರ ಆಳ್ವಿಕೆಯಲ್ಲಿ ಮೊಳಕಾಲ್ಮುರು ಗಡಿ ತಾಲ್ಲೂಕು ಆಗಿತ್ತು. ತಾಲ್ಲೂಕಿನ ಯರ್ರೇನಹಳ್ಳಿಯ ಕೆರೆ, ಚಿಕ್ಕೇರಹಳ್ಳಿ ಕೆರೆ, ತುಪ್ಪದಕ್ಕನ ಕೆರೆ, ದೇವಸಮುದ್ರ ಕೆರೆಗಳು ಅವರ ಅವಧಿಯಲ್ಲಿ ನಿರ್ಮಾಣವಾಗಿದೆ. ಪಟ್ಣಣ ಸಮೀಪದ ಬೆಟ್ಟದ ಮೇಲೆ ಕೆರೆ ನಿರ್ಮಾಣ ಮಾಡಿ ವ್ಯವಸ್ಥಿತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದರು ಮತ್ತು ಪಟ್ಟಣವನ್ನು ಅವರ ಅವಧಿಯಲ್ಲಿ ಪಾನಮುಕ್ತ ಗ್ರಾಮವಾಗಿ ಘೋಷಣೆ ಮಾಡಿದ್ದರು ಎಂದು ಹೇಳಿದರು.

ಕಸಾಪ ಅಧ್ಯಕ್ಷ ಟಿ.ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮೀರಸಾಬಿಹಳ್ಳಿ ಶಿವಣ್ಣ, ಕಸಾಪ ಮಾಜಿ ಅಧ್ಯಕ್ಷ ಕೆ.ಜಿ. ಪಾರ್ಥಸಾರಥಿ, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಉಮಾಶಂಕರ್‌, ಎಂ.ಡಿ. ಲತೀಫ್‌ಸಾಬ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT