ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಇಲ್ಲದವರಿಗೆ ಸರ್ಕಾರಿ ಸೌಲಭ್ಯ ಇಲ್ಲ !

Last Updated 26 ಸೆಪ್ಟೆಂಬರ್ 2013, 6:17 IST
ಅಕ್ಷರ ಗಾತ್ರ

ಹೊಳಲ್ಕೆರೆ: ಶೌಚಾಲಯ ಹೊಂದಿರದ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ನಿಲ್ಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.

ಸೋಮವಾರ ತಾಲ್ಲೂಕಿನ ಜಯಂತಿನಗರದಲ್ಲಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದ ನಂತರ ಅವರು ಮಾತನಾಡಿದರು.
ಸರ್ಕಾರ ಪ್ರತೀ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು ರೂ.15 ಸಾವಿರ ಸಹಾಯಧನ ನೀಡುತ್ತದೆ. ಶೌಚಾಲಯದ ಅಗತ್ಯತೆ ಬಗ್ಗೆ ಈಗಾಗಲೇ ದೊಡ್ಡ ಪ್ರಚಾರವೂ ನಡೆದಿದೆ. ಆದರೂ ನಮ್ಮ ಹಳ್ಳಿ ಜನ ಜಾಗೃತರಾಗಿಲ್ಲ. ಈಗಿನ ಆಧುನಿಕ ಯುಗದಲ್ಲೂ ಬಯಲು ಶೌಚಾಲಯವನ್ನೇ ರೂಢಿಸಿಕೊಂಡಿರುವ ಜನ ಅನಾಗರಿಕರಂತೆ ಬದುಕುತ್ತಿದ್ದಾರೆ. ಇದರಿಂದ ಮಹಿಳೆಯರು ಹೆಚ್ಚು ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನೆಲ್ಲಾ ಮನಗಂಡು ಶೌಚಾಲಯ ಹೊಂದಿರದ ಕುಟುಂಬಗಳಿಗೆ ಪಡಿತರ ಚೀಟಿ, ಆಶ್ರಯ ಮನೆ, ಗಂಗಾಕಲ್ಯಾಣ ಮತ್ತಿತರ ಸೌಲಭ್ಯಗಳನ್ನು ನಿಲ್ಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಆಗ ಸ್ವಯಂಪ್ರೇರಿತರಾಗಿ ಶೌಚಾಲಯ ನಿರ್ಮಿಸಿಕೊಳ್ಳುತ್ತಾರೆ ಎಂದರು.

ಪ್ರತೀ ಗ್ರಾಮಪಂಚಾಯ್ತಿಗೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೂ. 1 ಕೋಟಿ ಅನುದಾನ ನೀಡಲಾಗುವುದು. ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ಬೇಕಾದ ಮೂಲಸೌಕರ್ಯಗಳ ಬಗ್ಗೆ ಯೋಜನೆ ತಯಾರಿಸಿ ವರದಿ ಸಲ್ಲಿಸಬೇಕು. ಪರಿಶಿಷ್ಟರ ಕಾಲೊನಿಗಳು ಮತ್ತು ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿ, ಸೋಲಾರ್‌ ದೀಪ ಸೇರಿದಂತೆ ಒಂದೇ ಪ್ಯಾಕೇಜ್‌ನಲ್ಲಿ ಎಲ್ಲಾ ಮೂಲಸೌಕರ್ಯ ಒದಗಿಸ ಲಾಗುವುದು ಎಂದರು.

ಗುಂಡಿಮಡು ಗೊಲ್ಲರಹಟ್ಟಿಗೆ ಭೇಟಿ ನೀಡಿದ ಸಚಿವರು, ರೂ. 5 ಲಕ್ಷ ವೆಚ್ಚದ ಮಹಿಳಾ ಭವನ, ಕಾಂಕ್ರಿಟ್ ರಸ್ತೆ, ಶಾಲಾ ಕಾಂಪೌಂಡ್‌ ನಿರ್ಮಿಸಿ ಕೊಡಲಾಗುವುದು. ಈ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸೂಳೆಕೆರೆ ನೀರು ಹರಿಸುವ ಬಗ್ಗೆ ಪರಿಶೀಲಿಸಲಾಗುವುದು. ಆದ್ಯತೆ ಮೇರೆಗೆ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲಾಗುವುದು ಎಂದರು.

ಗುಂಡಿಮಡು, ಕುನುಗಲಿ, ಶಿವಪುರ ಗ್ರಾಮಗಳಿಗೂ ತೆರಳಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಕಿರಣ್‌, ಸದಸ್ಯೆ ಭಾರತೀ ಕಲ್ಲೇಶ್‌, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT