ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಕಟ್ಟಿಸಿ, ಮರ್ಯಾದೆ ಉಳಿಸಿ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಬಯಲು ಶೌಚಾಲಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಿದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ರಾಗಿಮಸಲವಾಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಹರಪನಹಳ್ಳಿಯ ರಾಗಿಮಸಲವಾಡ ಗ್ರಾಮದ ಹೆಣ್ಣುಮಕ್ಕಳಿಗೆ ಶೌಚಾಲಯ ಜಾಗದ್ದೇ ದೊಡ್ಡ ಸಮಸ್ಯೆ. ಗ್ರಾಮ ಪಂಚಾಯ್ತಿಗೆ ಸೇರಿದ ಜಮೀನನ್ನು ಬಹಿರ್ದೆಸೆಗಾಗಿ ಈ ಗ್ರಾಮದ ಮಹಿಳೆಯರು ದಶಕಗಳಿಂದ ಬಯಲು ಶೌಚಾಲಯದಂತೆ ಬಳಸುತ್ತಿದ್ದರು.

ಆದರೆ, ಈಚೆಗೆ ಆ ಸ್ಥಳವನ್ನು ಗ್ರಾಮದ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.ಗ್ರಾ.ಪಂ. ಜಮೀನಿನ ಪಕ್ಕದಲ್ಲೇ ಇದ್ದ ವಿಮಲಮ್ಮ  (ಹೆಸರು ಬದಲಾಯಿಸಲಾಗಿದೆ) ಎಂಬುವರ ಜಮೀನನ್ನೂ ಅಕ್ರಮವಾಗಿ ಒತ್ತುವರಿ ಮಾಡಲು ಯತ್ನಿಸಿದ್ದ ಆ ಮುಖಂಡನನ್ನು ಪ್ರಶ್ನಿಸಿದ್ದಕ್ಕೆ ವಿಮಲಮ್ಮ (38) ಅವರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಲಾಗಿದೆ. ಈ ಸಂಬಂಧ ಹಲುವಾಗಿಲು ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.

ಪ್ರಕರಣದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ನೊಂದಿರುವ ವಿಮಲಮ್ಮ  `ಪ್ರಜಾವಾಣಿ~ ಜತೆ ಹಂಚಿಕೊಂಡ ನೋವಿನ ಕಥೆ ಇಲ್ಲಿದೆ.`ನಾವು ಕತ್ತಲಾದ ಮ್ಯಾಲಾ ಆ ಜಮೀನಿನಲ್ಲಿ (ಕೋಟೆ ಜಾಗ) ಬಹಿರ್ದೆಸೆಗೆ ಹೋಗ್ತಾ ಇದ್ವಿ. ಇದೇ ಜಾಗದ ಪಕ್ಕ ನಮ್ಮ ಹೊಲ ಕೂಡಾ ಐತಿ. ಈಗಾಗಲೇ ಕೋಟೆ ಜಾಗ ಒತ್ತುವರಿ ಮಾಡಿಕೊಂಡಿದ್ದ ಗ್ರಾಮದ ಪ್ರಮುಖ ರಾಜಕೀಯ ಮುಖಂಡ ನಮ್ಮ ಜಮೀನನ್ನೂ ಒತ್ತುವರಿ ಮಾಡಿದ್ದ.
 
ಅದನ್ನು ಪ್ರಶ್ನಿಸಿ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ವಿ. ಪೊಲೀಸರು ಇಬ್ಬರನ್ನೂ ಕರೆಸಿ ರಾಜಿ ಮಾಡಿ ಕಳುಹಿಸಿದ್ರು. ಆದರೆ, ರಾಜಿ ಮಾಡಿದ ಅವತ್ತಿನ ರಾತ್ರಿಯೇ ಗುಂಪೊಂದು ನನ್ನ ಸೀರೆ, ಜಾಕೀಟು ಬಿಚ್ಚಿ ಸಾಯೋಹಂಗ ಹೊಡೀತು. ಗ್ರಾಮದ ಅಷ್ಟು ಜನರ ಮುಂದೆ ಆ ಗುಂಪು ನನ್ನನ್ನು ಬೆತ್ತಲೆಗೊಳಿಸಿದ್ದನ್ನು ನೆನಪಿಸಿಕೊಂಡರೆ ಈಗಲೂ ಅಳು ಬರುತ್ತೆ. ಮೊದ್ಲು ಈ ಊರಾಗ ಒಂದು ಸಮುದಾಯ ಶೌಚಾಲಯ ಕಟ್ಟಿಸಿಕೊಟ್ಟು, ಪುಣ್ಯ ಕಟ್ಟಿಕೊಳ್ರಿ~ ಎನ್ನುತ್ತಾ ಕಣ್ಣೀರಾದರು ವಿಮಲಮ್ಮ. 

`ಗಲಾಟೆಯಲ್ಲಿ  ಆ ಜನರ ಗುಂಪು ನನ್ನ ಮರ್ಮಾಂಗಕ್ಕೆ ಜಾಡಿಸಿ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಯಿತು. ನನ್ನ ಗಂಡ, ಸುತ್ತಮುತ್ತಲಿನ ಹೆಂಗಸ್ರು ಸೇರಿ ನನ್ನ ಬಿಡಿಸಿಕೊಂಡು ದಾವಣಗೆರೆ ಆಸ್ಪತ್ರೆಗೆ ಸೇರಿಸಿ ಬದುಕಿಸಿಕೊಂಡ್ರು. ಗ್ರಾ.ಪಂ. ಯವರು ಈಗಲಾದರೂ ನಮ್ಮ ಮೇಲೆ ಕರುಣೆ ತೋರ‌್ಸಿ, ಆ ಪ್ರಭಾವಿ ರಾಜಕೀಯ ಮುಖಂಡನಿಂದ  ಕೋಟೆ ಜಾಗ ತೆರವುಗೊಳಿಸಲಿ. ಆ ಮುಖಂಡ ತನಗಾಗಿ ಕಟ್ಟಿಸಿಕೊಂಡಿರುವ ವೈಯಕ್ತಿಕ ಶೌಚಾಲಯ ಕೆಡವಿ, ಗ್ರಾಮದ ಮಹಿಳೆಯರಿಗೆ ಸಮುದಾಯ ಶೌಚಾಲಯ ಕಟ್ಟಿಸಿಕೊಡಲಿ~ ಎಂದು ವಿಮಲಮ್ಮ ಮನವಿ ಮಾಡುತ್ತಾರೆ.

`ಕೋಟೆ ಜಾಗದ ಅಕ್ರಮ ಒತ್ತುವರಿ ಖಂಡಿಸಿ ಗ್ರಾಮದ ಮಹಿಳೆಯರು ಗ್ರಾ.ಪಂ. ಅಧ್ಯಕ್ಷ ಮತ್ತು ಪಿಡಿಒಗೆ ಮನವಿ ಕೊಟ್ಟಿದ್ದಾರೆ.  ಪಂಚಾಯ್ತಿ ಯಾವುದೇ ಕ್ರಮ ಕೈಗೊಂಡಿಲ್ಲ. ಒತ್ತುವರಿ ವಿಷಯದಲ್ಲಿ ಸ್ಥಳೀಯ ರಾಜಕೀಯ ಮುಖಂಡರೊಬ್ಬರ ಜತೆ  ಬಿಲ್ ಕಲೆಕ್ಟರ್ ಒಬ್ಬರು ಷಾಮೀಲಾಗಿದ್ದಾರೆ.

ಇವತ್ತು ವಿಮಲಮ್ಮ ಅವರ ಮೇಲೆ ಹಲ್ಲೆ ಆಗಿದೆ. ನಾಳೆ ಇನ್ನೊಬ್ಬ ಮಹಿಳೆ ಮೇಲೆ ಹಲ್ಲೆ ಆಗಬಹುದು. ಈಗಲಾದರೂ ಈ ಸಮಸ್ಯೆ ನಿವಾರಣೆ ಮಾಡಬೇಕು~ ಎಂದು ಒತ್ತಾಯಿಸುತ್ತಾರೆ ಗ್ರಾಮದ ರೈತ ಮುಖಂಡ ಶಂಭುಲಿಂಗಪ್ಪ ಮತ್ತು `ನೇಚರ್~ ಸಾಮಾಜಿಕ ಸಂಘಟನೆ ಮುಖ್ಯಸ್ಥ ಮಂಜುನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT