ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಸ್ಥಳಾಂತರ: ಹೆಚ್ಚಿದ ಒತ್ತಡ

Last Updated 3 ಜೂನ್ 2013, 20:33 IST
ಅಕ್ಷರ ಗಾತ್ರ

ಯಲಹಂಕ: ಇಲ್ಲಿನ ಬಿಬಿ ರಸ್ತೆಯಲ್ಲಿರುವ ಮಾದರಿ ಅಂಚೆ ಕಚೇರಿ ಆವರಣ ಗೋಡೆಗೆ ಹೊಂದಿಕೊಂಡಂತೆ ಬಿಬಿಎಂಪಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುತ್ತಿರುವುದಕ್ಕೆ ಅಂಚೆ ಕಚೇರಿ ಸಿಬ್ಬಂದಿ ಹಾಗೂ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

`ಅಂಚೆ ಕಚೇರಿ ಆವರಣ ಗೋಡೆ ಪಕ್ಕದಲ್ಲೇ ಬಸ್ ನಿಲ್ದಾಣವಿದ್ದು, ನೂರಾರು ಬಸ್‌ಗಳು ಈ ಸ್ಥಳದ್ಲ್ಲಲೇ ನಿಲುಗಡೆ ಆಗುವುದರಿಂದ ಪ್ರಯಾಣಿಕರು ಅಲ್ಲಿಯೇ ಕಾಯುತ್ತಾ ನಿಲ್ಲುತ್ತಾರೆ. ಅಲ್ಲದೆ ಈ ಸ್ಥಳದಲ್ಲಿ ಆಸ್ಪತ್ರೆ, ಬ್ಯಾಂಕ್, ಅಂಗಡಿಗಳಿದ್ದು, ಸದಾ ಜನರಿಂದ ಕೂಡಿರುತ್ತದೆ. ಇಲ್ಲಿ ಶೌಚಾಲಯ ನಿರ್ಮಿಸಿದರೆ ಅಂಚೆ ಕಚೇರಿ ಸಿಬ್ಬಂದಿ ಕಾರ್ಯ ನಿರ್ವಹಣೆಗೆ ಸಹ ತೊಂದರೆ ಆಗಲಿದೆ. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು' ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

`ಬೆಂಗಳೂರು ನಗರದ `ಪ್ರಾಜೆಕ್ಟ್ ಆ್ಯರೋ' ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರು ಅಂಚೆ ಕಚೇರಿಗಳ ಪೈಕಿ ಇದೂ ಒಂದು ಪ್ರಮುಖ ಶಾಖೆಯಾಗಿದೆ. ಇಲ್ಲಿ ಶೌಚಾಲಯ ನಿರ್ಮಾಣ ಮಾಡಿದರೆ ಕಚೇರಿಯ ಘನತೆಗೆ ದಕ್ಕೆ ಉಂಟಾಗುವುದರ ಜೊತೆಗೆ ಸುತ್ತಮುತ್ತಲಿನ ಪರಿಸರದಲ್ಲಿ ಮಲಿನ ಗಾಳಿ ಹರಡಿ ಸಾರ್ವಜನಿಕರು ಕಿರಿಕಿರಿ ಅನುಭವಿಸಬೇಕಾಗುತ್ತದೆ' ಎಂದು ಪೋಸ್ಟ್ ಮಾಸ್ಟರ್ ಯೋಗಾನಂದ್ ಹೇಳುತ್ತಾರೆ.

`ನಿಯಮದ ಪ್ರಕಾರ ಬಸ್ ನಿಲ್ದಾಣದಿಂದ 100 ಮೀಟರ್ ದೂರದಲ್ಲಿ ಶೌಚಾಲಯ ನಿರ್ಮಿಸಬೇಕು. ಆದರೆ ಇಲ್ಲಿ ನಿಯಮ ಉಲ್ಲಂಘಿಸಿ, ನಮ್ಮ ಗಮನಕ್ಕೂ ತಾರದೆ ಏಕಾಏಕಿ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ, `ಶೌಚಾಲಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕು' ಎಂದು ಅವರು ಆಗ್ರಹಿಸುತ್ತಾರೆ.

ಸುಮಾರು 30 ವರ್ಷಗಳ ಇತಿಹಾಸವಿರುವ ಈ ಅಂಚೆ ಕಚೇರಿಯಲ್ಲಿ ರಾಜಾನುಕುಂಟೆ, ಯಲಹಂಕ ಉಪನಗರ, ಜಕ್ಕೂರು, ಅಗ್ರಹಾರ ಸೇರಿದಂತೆ ಸುಮಾರು 30 ಹಳ್ಳಿಗಳ ಜನರು, ಆಧಾರ್, ಇಎಂಒ, ಐಎಂಒ ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ಪಡೆಯುತ್ತಿದ್ದಾರೆ. ಇಲ್ಲಿ ಶೌಚಾಲಯ ನಿರ್ಮಿಸುವುದು ಸರಿಯಲ್ಲ' ಎಂದು ಜಕ್ಕೂರು ಶಾಖೆಯ ಪೋಸ್ಟ್ ಮಾಸ್ಟರ್ ಉದಯ್‌ಕುಮಾರ್ ಉಪಾಧ್ಯ ಹೇಳುತ್ತಾರೆ.

ಈ ಬಗ್ಗೆ ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ಬಿಬಿಎಂಪಿ ಮುಖ್ಯ ಇಂಜಿನಿಯರ್ ಅವರಿಗೆ ಮನವಿಪತ್ರ ಸಲ್ಲಿಸಿ, ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರುತ್ತಾರೆ.

`ತೊಂದರೆ ಆಗುವುದಿಲ್ಲ'
ಈ ಹಿಂದೆ ಯಲಹಂಕದ ಬಿಬಿ ರಸ್ತೆಯಲ್ಲಿರುವ ಅಂಚೆ ಕಚೇರಿಯ ಆವರಣ ಗೋಡೆಗೆ ವಾಹನ ಚಾಲಕರು ಹಾಗೂ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತಿದ್ದರು. ಸ್ಥಳೀಯರು ಇಲ್ಲೊಂದು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಬೇರೆಲ್ಲೂ ಸರ್ಕಾರಿ ಜಾಗ ಇಲ್ಲದ ಕಾರಣ, ಬಸ್ ನಿಲ್ದಾಣದ ಸಮೀಪದಲ್ಲಿದ್ದ ಸರ್ಕಾರಿ ಜಾಗದಲ್ಲಿ ಬಿಬಿಎಂಪಿ ವತಿಯಿಂದ ರೂ 7 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ.

ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ನಿರ್ವಹಣೆಗೆ ಒಬ್ಬ ಸಿಬ್ಬಂದಿಯನ್ನು ನೇಮಿಸಿ, ಸುತ್ತಲಿನ ಪರಿಸರಕ್ಕೆ ಯಾವುದೇ ರೀತಿ ಕೆಟ್ಟ ವಾಸನೆ ಹರಡದಂತೆ ಕ್ರಮ ಕೈಗೊಳ್ಳಲಾಗುವುದು.
-ಸತೀಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಬಿಬಿಎಂಪಿ ಯಲಹಂಕ ಉಪ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT