ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌರ್ಯ ಪ್ರಶಸ್ತಿ ಯಾರಿಗೆ, ಯಾಕೆ?

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಳು ಎಂದರೇನು?
ಇಂಡಿಯನ್ ಕೌನ್ಸಿಲ್ ಆಫ್ ಚೈಲ್ಡ್ ವೆಲ್‌ಫೇರ್ (ಐಸಿಸಿಡಬ್ಲ್ಯು) 1957ರಲ್ಲಿ ಈ ಪ್ರಶಸ್ತಿಗಳನ್ನು ಕೊಡಲಾರಂಭಿಸಿತು. 15 ವರ್ಷಕ್ಕಿಂತ ಮಕ್ಕಳು ವಿವಿಧ ರೀತಿಯ ಶೌರ್ಯ ಪ್ರದರ್ಶನ ಮಾಡಿದ್ದಲ್ಲಿ ಅದನ್ನು ಗುರುತಿಸಲೆಂದು ಈ ಪ್ರಶಸ್ತಿಗಳನ್ನು ಕೊಡಲು ಪ್ರಾರಂಭಿಸಿದ್ದು.
 
ವನ್ಯಮೃಗಗಳನ್ನು ಮಣಿಸುವುದು, ದರೋಡೆಕೋರರು- ಉಗ್ರಗಾಮಿಗಳು- ಅಪಹರಣಕಾರರನ್ನು ಹಿಡಿಯುವುದು, ದುರಂತಗಳು ನಡೆದಾಗ ಸಂಕಷ್ಟದಲ್ಲಿರುವವರನ್ನು ಪಾರುಮಾಡುವುದು ಇಂಥ ಸಾಹಸಗಳನ್ನು ಮಾಡಿದ ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಮೊದಲ ವರ್ಷ ಒಬ್ಬ ಹುಡುಗಿ ಹಾಗೂ ಒಬ್ಬ ಹುಡುಗ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ವರ್ಷದಿಂದ ವರ್ಷಕ್ಕೆ ಆಯ್ಕೆಯಾಗುವವರ ಸಂಖ್ಯೆ ಭಿನ್ನವಾಗಿರುತ್ತದೆ.

ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವುದು ಹೇಗೆ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸಂಸ್ಥೆ, ಇಲಾಖೆಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಜಿಲ್ಲಾ ಪಂಚಾಯತಿ, ಜಿಲ್ಲಾ ಪರಿಷತ್‌ಗಳು, ಶಾಲೆಗೆ ಸಂಬಂಧಿಸಿದ ಇಲಾಖೆಗಳು ಬಹುಪಾಲು ಅರ್ಜಿಗಳನ್ನು ಕಳುಹಿಸುತ್ತವೆ.

ಆಮೇಲೆ ಸ್ವೀಕೃತ ಅರ್ಜಿಗಳನ್ನೆಲ್ಲಾ ಸಮಿತಿಯೊಂದು ಪರಿಶೀಲಿಸುತ್ತದೆ. ಆ ಸಮಿತಿಯಲ್ಲಿ ಶಿಕ್ಷಣ, ಯುವಜನ ಮತ್ತು ಗೃಹ ವ್ಯವಹಾರಗಳ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳು ಇರುತ್ತಾರೆ. ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೂ ಸಮಿತಿಯಲ್ಲಿರುತ್ತಾರೆ.

ಪ್ರಶಸ್ತಿಗಳನ್ನು ಕೊಡುವುದು ಯಾವಾಗ?
ಪ್ರತಿವರ್ಷ ನವೆಂಬರ್ 14, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರನ್ನು ಕರೆಸಿ, ನವದೆಹಲಿಯಲ್ಲಿ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಜನವರಿ 26, ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡುತ್ತಾರೆ. ಅಲಂಕೃತ ಆನೆಗಳ ಮೇಲೆ ಮಕ್ಕಳು ಮೆರವಣಿಗೆಯಲ್ಲೂ ಪಾಲ್ಗೊಳ್ಳುವ ಅವಕಾಶ ಸಿಗುತ್ತದೆ.

ಶೌರ್ಯ ಪ್ರಶಸ್ತಿಗಳಲ್ಲೂ ವಿಶೇಷ ಪ್ರಶಸ್ತಿ ಎಂದೇನಾದರೂ ಇದೆಯೇ?
ಹೌದು. ಗೀತಾ ಚೋಪ್ರಾ ಹಾಗೂ ಸಂಜಯ್ ಚೋಪ್ರಾ ಪ್ರಶಸ್ತಿಗಳು 1978ರಲ್ಲಿ ಪ್ರಾರಂಭವಾದವು. ಬಿಲ್ಲಾ, ರಂಗಾ ಎಂಬ ಹಂತಕರು ಕೊಂದ ಮಕ್ಕಳ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಗಳಿವು. 1987ರಲ್ಲಿ ಐಸಿಸಿಡಬ್ಲ್ಯು ಭಾರತ್ ಶೌರ್ಯ ಪ್ರಶಸ್ತಿಯನ್ನು ಕೊಡಲಾರಂಭಿಸಿತು. ಮಹತ್ ಸಾಹಸ ಮಾಡಿದ ಮಕ್ಕಳಿಗೆ ಈ ಪ್ರಶಸ್ತಿ ಸಲ್ಲುತ್ತದೆ. 1988ರಲ್ಲಿ ಬಾಪು ಗಯಾದನಿ ಪ್ರಶಸ್ತಿ ಪ್ರಾರಂಭವಾಯಿತು. ಇವೆಲ್ಲವೂ ವಿಶೇಷ ಪ್ರಶಸ್ತಿಗಳು.

ಶೌರ್ಯ ಪ್ರಶಸ್ತಿಯಲ್ಲಿ ಏನೇನು ಸಲ್ಲುತ್ತದೆ?
ಒಂದು ಪದಕ, ಪ್ರಮಾಣ ಪತ್ರ ಹಾಗೂ ನಗದು. ಅರ್ಹ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವೃತ್ತಿಪರ ತರಗತಿಗಳ ಕಲಿಕೆಗೆ ಅಗತ್ಯವಿರುವ ಹಣಕಾಸಿನ ನೆರವನ್ನು ಸಹ ನೀಡಲಾಗುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಸೀಟುಗಳಲ್ಲಿ ಕೆಲವು ಸೀಟುಗಳನ್ನು ಶೌರ್ಯ ಪ್ರಶಸ್ತಿ ಪಡೆದ ಮಕ್ಕಳಿಗೆಂದೇ ಮೀಸಲಿಡಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT