ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾಭಕ್ತಿಯ ಷಷ್ಠಿ ಆಚರಣೆ

Last Updated 9 ಡಿಸೆಂಬರ್ 2013, 9:06 IST
ಅಕ್ಷರ ಗಾತ್ರ

ನಾಪೋಕ್ಲು/ ಸಿದ್ದಾಪುರ: ಇತಿಹಾಸ ಪ್ರಸಿದ್ಧ ಬೈರಾಂಬಾಡದ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಷಷ್ಠಿ ಹಬ್ಬದ ಉತ್ಸವ ವಿಜೃಂಭಣೆಯಿಂದ ಭಾನುವಾರ ನಡೆಯಿತು.

ಬೆಳಿಗ್ಗೆ ನಾಲ್ಕು ಗಂಟೆಯಿಂದ ದೇವಾಲಯದ ಪ್ರಧಾನ ಅರ್ಚಕರಾದ ವೆಂಕಟಕೃಷ್ಣ ವೈಲಾಯ ಅವರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾದವು. ಸುಬ್ರಹ್ಮಣ್ಯಸ್ವಾಮಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ಎಳೆನೀರಾಭಿಷೇಕ ನಡೆದವು.

ಮೂರ್ನಾಡು, ಬಲಮುರಿ, ವಿರಾಜಪೇಟೆ, ಸಿದ್ದಾಪುರ, ಅಮ್ಮತ್ತಿ, ಒಂಟಿಯಂಗಡಿ, ಮರಗೋಡು, ಹಾಕತ್ತೂರು ಸುತ್ತಮುತ್ತಲ ಪ್ರದೇಶಗಳಿಂದ ಬಂದಿದ್ದ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತೀರ್ಥಪ್ರಸಾದ ಸ್ವೀಕರಿಸಿದರು. ಸುಮಾರು 60ರಿಂದ 70 ಸಾವಿರ ಭಕ್ತರು ತಂಡೋಪತಂಡವಾಗಿ ಬಂದು ದೇವರ ದರ್ಶನ ಪಡೆದರು.

ಭಕ್ತರೊಂದಿಗೆ ಅಯ್ಯಪ್ಪಸ್ವಾಮಿ ವ್ರತಾಧಾರಿಗಳು ಅನೇಕ ಸಂಖ್ಯೆಯಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ಕುಳಿತುಕೊಳ್ಳಲು ಸೂಕ್ತ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ದೇವರಿಗೆ ಮಹಾಮಂಗಳಾರತಿ ಸೇವೆ ನಡೆದ ಬಳಿಕ ಮಧ್ಯಾಹ್ನ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂರ್ತಪಣೆ ನಡೆಯಿತು. ದೇವಾಲಯದ ಹೊರಭಾಗದಲ್ಲಿ ಹರಕೆ ಹೊತ್ತ ಭಕ್ತಾದಿಗಳು ಬೆಳಿಗ್ಗೆಯಿಂದ ಕೇಶ ಮುಂಡನ ನೆರವೇರಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಒಂದು ದಿನದ ಮುಂಚಿತವಾಗಿ ಬಂದು ಸೇರುವ ಭಿಕ್ಷುಕರು ಕಾಫಿ ತೋಟದ ನಡುವಿನ ದೇವಾಲಯದ ಹಾದಿಯಲ್ಲಿ ಕುಳಿತು ಭಿಕ್ಷಾಟನೆಯಲ್ಲಿ ತೊಡಗಿದರು. ಭಿಕ್ಷುಕರಿಗೆ ಭಕ್ತರು ಅಕ್ಕಿ ಹಾಗೂ ಹಣವನ್ನು ನೀಡಿ ಮುಂದೆ ಸಾಗುವ ದೃಶ್ಯ ಕಂಡು ಬಂತು.

ಸಿದ್ದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಹರಿವರ್ಧನ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ಸಂಧರ್ಭದಲ್ಲಿ ಮುಕ್ಕಾಟಿರ ಮುದ್ದಯ್ಯ, ಮುಕ್ಕಾಟಿರ ಕರುಂಬಯ್ಯ, ಮುಕ್ಕಾಟಿರ ರಘು ಮಾದಪ್ಪ, ಮುಕ್ಕಾಟಿರ ವೇಣು ನಂಜಪ್ಪ, ಮುಕ್ಕಾಟಿರ ಬೆಳ್ಳಿಯ್ಯಪ್ಪ, ಮುಕ್ಕಾಟಿರ ನಂದ ಪೆಮ್ಮಯ್ಯ, ಮಡೆಂಪಂಡ ಹರೀಶ್, ಮೇಕೇರಿರ ಸುಬ್ರಮಣಿ, ಮೇಕೇರಿರ ಪೊನ್ನಪ್ಪ ಇತರರು ಹಾಜರಿದ್ದರು.

ಅವ್ಯವಸ್ಥೆಯ ಜಾತ್ರಾ ಮಹೋತ್ಸವ
ಬೈರಂಬಾಡ ಷಷ್ಠಿ ಮಹೋತ್ಸವದ ದಿನದಂದು ದೇವಾಲಯ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿಯೂ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಅನುವು ಮಾಡಿರುವುದೂ ಹಾಗೂ ಜಾತ್ರಾ ವಿಶೇಷದ ಬಸ್‌ಗಳ ಸಂಚಾರ ವ್ಯವಸ್ಥೆ, ಅಡ್ಡಾದಿಡ್ಡಿ ವಾಹನ ನಿಲುಗಡೆ ವಾಹನ ದಟ್ಟಣೆಗೆ ಕಾರಣವಾಯಿತು. ಭಕ್ತರು ದೇವಾಲಯದಲ್ಲಿ ಸರತಿಯಲ್ಲಿ ಬಾರದಿರುವುದು ಹಾಗೂ ಎಲ್ಲೆಂದರಲ್ಲಿ ಊಟದ ತಟ್ಟೆಯನ್ನು ಎಸೆಯುವುದೂ ಭಕ್ತರ ಅಸಹನೆಗೆ ಕಾರಣವಾಯಿತು.

ಷಷ್ಠಿ ಉತ್ಸವ
ಗೋಣಿಕೊಪ್ಪಲು: ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು. ಬೆಳಗಿನಿಂದ ದೇವಸ್ಥಾನದ ಬಳಿ ಸಾಲಾಗಿ ನಿಂತು ಸುಬ್ರಮಣ್ಯ ದೇವರಿಗೆ ವಿವಿಧ ಬಗೆಯ ಹರಕೆ ಸಲ್ಲಿಸಿ ದೈವಭಕ್ತಿ ಮೆರೆದರು. ಭಕ್ತರು ದೇವಸ್ಥಾನದ ಒಳಗೆ ಪ್ರವೇಶಿಸಿ ಅಲ್ಲಿನ ಕೊಳದಲ್ಲಿ ಮಿಂದು ಕಾಣಿಕೆ ಸಲ್ಲಿಸಿದರು.ಪಟ್ಟಣದಲ್ಲಿ ಸಂತೆ ದಿನವಾದ್ದರಿಂದ ದೇವಸ್ಥಾನದ ಬಳಿ ಮಧ್ಯಾಹ್ನದವರೆಗೆ  ಭಕ್ತರ ಸಂಖ್ಯೆ ಹೆಚ್ಚಿದ್ದಿತು. 

ದೇವಸ್ಥಾನ ಸಮಿತಿ ಅಧ್ಯಕ್ಷ ಚೆಪ್ಪುಡಿರ ದೇವಯ್ಯ ಅವರ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು. ಸಮಿತಿ ಸದಸ್ಯರಾದ ಕುಪ್ಪಂಡ ಸನ್ನಿ ಸೋಮಯ್ಯ, ಕುಲ್ಲಚಂಡ ಗಣಪತಿ, ವ್ಯವಸ್ಥಾಪಕ ಜಗದೀಶ್‌ ಜೋಡುಬೀಟಿ ಮೊದಲಾದವರು ಭಕ್ತರ ಪೂಜೆ  ಪುನಸ್ಕಾರಕ್ಕೆ ಸುಗಮ ಅವಕಾಶ ಕಲ್ಪಿಸಿಕೊಟ್ಟರು. ದೇವಸ್ಥಾನದ ಹೊರಗೆ ಮಕ್ಕಳ ಆಟದ ವಸ್ತುಗಳು, ಆಭರಣ, ತಿಂಡಿ ತಿನಿಸುಗಳ ಮಾರಾಟ  ಜಾತ್ರೆಯಂತೆ ಭರದಿಂದ ಸಾಗಿತು.

ಸಂಭ್ರಮದ ‘ಉಪವಾಸಕಾಯಿ’ ಹಬ್ಬ
ಶನಿವಾರಸಂತೆ:  ಪಟ್ಟಣದ ಜನತೆ ಭಾನುವಾರ ಷಷ್ಠಿ ಹಬ್ಬವನ್ನು ನಾಗನಿಗೆ, ಹುತ್ತಕ್ಕೆ ತನಿ ಎರೆವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಈ ಭಾಗದಲ್ಲಿ ‘ಉಪವಾಸಕಾಯಿ’ ಹಬ್ಬವೆಂದೇ ಕರೆಯಲಾಗುವ ಷಷ್ಠಿ ಹಬ್ಬದಲ್ಲಿ ಮನೆಮನೆಗೆ ತರಕಾರಿಗಳನ್ನು ಹಂಚುವ ಸಂಪ್ರದಾಯವಿದೆ. ಹಬ್ಬದ ದಿನ ಬೆಳಿಗ್ಗೆ ಮಕ್ಕಳು, ಮಹಿಳೆಯರು ಮನೆಮನೆಗೆ ತೆರಳಿ ಪರಸ್ಪರ ಬಗೆಬಗೆಯ ಕತ್ತರಿಸಿದ ತರಕಾರಿಗಳನ್ನು ಹಂಚುತ್ತಾರೆ.

ಮಧ್ಯಾಹ್ನದವರೆಗೂ ಉಪವಾಸವಿದ್ದು, ಬಳಿಕ ದಾನವಾಗಿ ನೀಡಿದ ನಾನಾ ಬಗೆಯ ತರಕಾರಿಗಳನ್ನು ಬಳಸಿ ಬೆರಕೆ ಸಾಂಬಾರು ಹಾಗೂ ತರಕಾರಿ ಪಲಾವ್‌ ಮಾಡುತ್ತಾರೆ. ಸಿಹಿತಿಂಡಿತಿನಿಸುಗಳೊಂದಿಗೆ ಭೋಜನವನ್ನು ಸವಿದು ಸಂಭ್ರಮಿಸುತ್ತಾರೆ.
ಹಬ್ಬದ ಪ್ರಯುಕ್ತ ಪಟ್ಟಣದ ಶ್ರೀಗಣಪತಿ– ಪಾರ್ವತಿ– ಚಂದ್ರಮೌಳೇಶ್ವರ ಹಾಗೂ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.

ನಾಗದೇವತೆಗೆ ತನಿ
ಸೋಮವಾರಪೇಟೆ: ನಗರದಲ್ಲಿ ಇಂದು ಷಷ್ಠಿ ಹಬ್ಬವನ್ನು ನಾಗದೇವತೆಗೆ ಹಾಲೆರೆಯುವ ಮೂಲಕ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ನಗರದ ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ಚಿತ್ರಕುಮಾರ್ ಹಾಗೂ ಶ್ಯಾಂ ಪ್ರಸಾದ್ ಪೌರೋಹಿತ್ಯದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಬೆಳಿಗ್ಗೆಯಿಂದ ಉಪವಾಸ ಕೈಗೊಂಡ ನೂರಾರು ಭಕ್ತಾದಿಗಳು ನಾಗದೇವತೆಗೆ ಹಾಲೆರೆದು ಪೂಜಿಸಿದರು.
ಸಮೀಪದ ಕಟ್ಟೆಬಸವೇಶ್ವರ ದೇವಾಲಯ, ಆನೆಕೆರೆ ಬಳಿಯ ನಾಗಬನ, ಅಯ್ಯಪ್ಪ ದೇವಾಲಯದಲ್ಲಿರುವ ಸುಬ್ರಮಣ್ಯ ಸನ್ನಿಧಿ, ಚಂದನಮಕ್ಕಿಯ ನಾಗಬನದಲ್ಲಿ ವಿಶೇಷ ಪೂಜೆ ನಡೆಯಿತು.

ಅಯ್ಯಪ್ಪ ದೇಗುಲದಲ್ಲಿ ಷಷ್ಠಿ ಸಂಭ್ರಮ
ನಾಪೋಕ್ಲು: ಇಲ್ಲಿನ ಅಯ್ಯಪ್ಪ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಾನುವಾರ ನಡೆದವು.
ದೇವಾಲಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ, ನವಗ್ರಹ ಪೂಜೆ, ಕುಂಕುಮಾರ್ಚನೆ, ನಡೆ ಪ್ರಾರ್ಥನೆ, ಸೇವೆಗಳು ನಡೆದವು. ಬಳಿಕ ಮಹಾಮಂಗಳಾರತಿ ನಡೆದು ನೆರೆದಿದ್ದ ಭಕ್ತರು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ದೇವಾಲಯದ ಅರ್ಚಕ ವೆಂಕಟರಮಣ ಕುಣ್ಕುಳ್ಳಾಯ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ಬಾಚ್ಚೇಟಿರ ಲಾಲು ಮುದ್ದಯ್ಯ ದಂಪತಿಯಿಂದ ಭಕ್ತರಿಗೆ ಅನ್ನಸಂರ್ತಪಣೆ ನಡೆಯಿತು. ದೇವಾಲಯ
ಆಡಳಿತ ಮಂಡಳಿ ಅಧ್ಯಕ್ಷ ಪಾಲಂದಿರ ಪಿ. ಮಾಚಯ್ಯ, ಉಪಾಧ್ಯಕ್ಷ ದಂಬೆಕೋಡಿ ಕೆ. ಸುಬ್ರಮಣಿ, ಕಾರ್ಯದರ್ಶಿ ತಿರ್ಕಚೇರಿರ ಯು ತಮ್ಮಯ್ಯ, ನಿರ್ದೇಶಕರಾದ ಪುದಿಯೊಕ್ಕಡ ಬೆಲ್ಲು ಸೋಮಯ್ಯ, ನುಚ್ಚುಮಣಿಯಂಡ ಪಿ. ಕಾರ್ಯಪ್ಪ, ಎನ್.ಕೆ. ನಾರಾಯಣ, ಪಳಂಗಂಡ ಎಸ್. ಮುದ್ದಪ್ಪ, ಬಾರಿಯಂಡ ಎನ್. ಸುಬ್ರಮಣಿ, ಕುಂಜಿಲಂಡ ಪೂಣಚ್ಚ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT