ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಿಕ ವರ್ಗದ ಹಿತ ಕಾಪಾಡಿದ ಕೆಳದಿ ಅರಸರು

ಕೆಳದಿ ಉತ್ಸವಕ್ಕೆ ಅದ್ದೂರಿ ಚಾಲನೆ, ಸಾಹಿತ್ಯ ಗೋಷ್ಠಿ ಸಂಭ್ರಮ
Last Updated 16 ಡಿಸೆಂಬರ್ 2013, 5:42 IST
ಅಕ್ಷರ ಗಾತ್ರ

ಸಾಗರ: ಕೃಷಿಕರು ಸೇರಿದಂತೆ ತಮ್ಮ ರಾಜ್ಯದಲ್ಲಿದ್ದ ಶ್ರಮಿಕ ವರ್ಗದವರ ಹಿತವನ್ನು ಕಾಪಾಡುವಲ್ಲಿ ಕೆಳದಿ ಅರಸರು ಹೆಚ್ಚಿನ ಗಮನ ಹರಿಸಿದ್ದರು ಎನ್ನುವುದಕ್ಕೆ ಇತಿಹಾಸದಲ್ಲಿ ಅನೇಕ ಪುರಾವೆಗಳು ದೊರಕಿವೆ ಎಂದು ಚಿತ್ರದುರ್ಗದ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.

ಇಲ್ಲಿಗೆ ಸಮೀಪದ ಕೆಳದಿ ಗ್ರಾಮದಲ್ಲಿ ಭಾನುವಾರ ನಡೆದ ಕೆಳದಿ ಉತ್ಸವದಲ್ಲಿ ಆಯೋಜಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ‘ಕೆಳದಿ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ’ ಕುರಿತು ಅವರು ಮಾತನಾಡಿದರು.

ಪ್ರಜೆಗಳಿಗೆ ನೀಡಿದ್ದ ವಿಶೇಷ ರಕ್ಷಣಾ ವ್ಯವಸ್ಥೆ ಕಾರಣದಿಂದಲೆ ಕೆಳದಿ ಅರಸರ ಕಾಲದಲ್ಲಿ ಜನರು ತೆರಿಗೆಯನ್ನು ಹೇರಳವಾಗಿ ಸಂದಾಯ ಮಾಡುತ್ತಿದ್ದರು. ಪ್ರಜೆಗಳಿಗೆ ಉಪಟಳ ನೀಡುವ ವ್ಯಕ್ತಿಗಳನ್ನು ಸದೆಬಡಿಯುವ ವ್ಯಕ್ತಿಗಳಿಗೆ ರಾಜರು ವಿಶೇಷ ಪ್ರೋತ್ಸಾಹಧನ ಹಾಗೂ ಸೌಲಭ್ಯ ನೀಡುತ್ತಿದ್ದರು ಎಂದರು.

ಏಕಪ್ರಕಾರದ ಕಂದಾಯ ಪದ್ದತಿಯನ್ನು ತೆಗೆದು ಹಾಕಿ ಮಳೆ ಬೀಳುವ ಪ್ರಮಾಣವನ್ನು ಆಧರಿಸಿ ಕಂದಾಯವನ್ನು ನಿರ್ಧರಿಸುವ ಹೊಸ ಪದ್ಧತಿಯನ್ನು ಕೆಳದಿ ಅರಸ ಶಿವಪ್ಪನಾಯಕ ಜಾರಿಗೆ ತಂದಿದ್ದು ಆ ಕಾಲದ ಆಡಳಿತದಲ್ಲಿ ಆದ ಮಹತ್ವದ ಬದಲಾವಣೆ ಎಂದು ಹೇಳಿದರು.

‘ಕೆಳದಿ ಕಾಲದ ಸಾಹಿತ್ಯ’ ಎಂಬ ವಿಷಯದ ಕುರಿತು ತುಮಕೂರಿನ ಇತಿಹಾಸ ವಿದ್ವಾಂಸ ಡಾ.ಬಿ.ನಂಜುಂಡಸ್ವಾಮಿ ಮಾತನಾಡಿ ಕೆಳದಿ ಅರಸರ ಕಾಲದಲ್ಲಿ ಸಾಹಿತ್ಯ ಪ್ರಕಟಣೆಗೆ ಹೆಚ್ಚಿನ ಪ್ರೋತ್ಸಾಹ ದೊರಕಿತ್ತು. ಸ್ವತ: ದೊರೆಗಳು ಸಾಹಿತ್ಯ ಕೃತಿಗಳ ವಿಮರ್ಶೆ ಮಾಡುವ ಸಾಮರ್ಥ್ಯ ಹೊಂದಿದ್ದರು. ಆ ಕಾಲದ ಕೃತಿಗಳ ಮರು ಮುದ್ರಣಕ್ಕೆ ಸರ್ಕಾರ ಮುಂದಾಗಬೇಕಿದೆ ಎಂದರು.

ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ದುಡಿಯುವ ಜನರನ್ನು, ಶ್ರಮ ಜೀವಿಗಳನ್ನು ಇತಿಹಾಸಕಾರರು ನಿರ್ಲಕ್ಷಿಸುವ ಮನೋಭಾವ ದೂರಾಗಬೇಕು. ಜನಪದೀಯ ಆಚರಣೆ, ಸ್ಥಳ ನಾಮ, ವ್ಯಕ್ತಿ ನಾಮಗಳ ಹಿನ್ನಲೆಯಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರೆ ಈ ಬಗ್ಗೆ ಹೊಸ ಹೊಳವು ದೊರಕುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ಹೇಳಿದರು.

ಪ್ರತಿಕ್ರಿಯೆ ನೀಡಿದ ರಂಗಕರ್ಮಿ ದೇವೇಂದ್ರ ಬೆಳೆಯೂರು ಕೆಳದಿ ಅರಸರ ಕಾಲದ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆ ಕುರಿತ ಇತಿಹಾಸವನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಜತೆಗೆ ಸೂಕ್ಷ್ಮ ಒಳನೋಟಗಳನ್ನು ಗ್ರಹಿಸುವುದು ಮುಖ್ಯ. ವಚನ ಧರ್ಮದ ಪ್ರಭಾವದ ಜೊತೆಗೆ ಸ್ಥಳೀಯ ಸಂಪ್ರದಾಯಗಳ ಮುಖಾಮುಖಿ ಹೇಗಾಯಿತು, ದೊರೆಗಳು ಸ್ಥಾಪಿಸಿದ ದೇವರುಗಳಿಗಿಂತ ಇಂದು ಜನರು ತಾವೇ ಸ್ಥಾಪಿಸಿಕೊಂಡಿರುವ ದೇವರ ಆರಾಧನೆಯಲ್ಲಿ ಯಾಕೆ ತೊಡಗಿದ್ದಾರೆ, ವೀರಶೈವ ಸಂಪ್ರದಾಯದ ಕೆಳದಿ ಮಠದಲ್ಲಿ ಚೌಡೇಶ್ವರಿಯ ಪೂಜೆ ಏಕೆ ನಡೆಯುತ್ತದೆ ಇವೇ ಮೊದಲಾದ ಸಂಗತಿಗಳ ಅಧ್ಯಯನ ಆಗಬೇಕು ಎಂದರು.

ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಸಂಶೋಧಕ ಡಾ.ಕೆಳದಿ ವೆಂಕಟೇಶ್‌ ಜೋಯಿಸ್‌ ಹಾಜರಿದ್ದರು.  ಡಾ.ಜಿ.ವಿ.ಕಲ್ಹಾಪುರ್‌ ಸ್ವಾಗತಿಸಿದರು. ಸಂದೀಪ್ ಗೋಷ್ಠಿಯನ್ನು ನಿರ್ವಹಿಸಿದರು.

ಕೆಳದಿ ಉತ್ಸವದಲ್ಲಿ ಕ್ಯಾಮೆರಾ ಹಿಡಿದ ಕಿಮ್ಮನೆ, ಆಂಜನೇಯ

ಸಾಗರ: ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಭಾನುವಾರ ನಡೆದ ಕೆಳದಿ ಉತ್ಸವದ ಸಂದರ್ಭದಲ್ಲಿ ಸಾಗರ ಪೋಟೋಗ್ರಾಫಿಕ್‌ ಸೊಸೈಟಿ ಹಾಗೂ ಗ್ರಾಮೀಣ ಕಲಾ ವೇದಿಕೆ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ ಮಾಡಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಸ್ವತ: ಕೈಯಲ್ಲಿ ಕ್ಯಾಮರ ಹಿಡಿದು ಪೋಟೊ ಕ್ಲಿಕ್ಕಿಸುವ ಉತ್ಸಾಹ ತೋರಿದರು.

ಕಿಮ್ಮನೆ ಹಾಗೂ ಆಂಜನೇಯ ಇಬ್ಬರೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಪೋಟೊ ಕ್ಲಿಕ್ಕಿಸುವ ಮೂಲಕ ಮುಂದೆ ನಡೆಯುವ ವಿಧಾನಸಭೆಯ ಅಧಿವೇಶನಗಳಲ್ಲಿ ನಮಗೆ ಮಾತನಾಡಲು ಹೆಚ್ಚು ಅವಕಾಶ ಕೊಡಿ ಹಾಗೂ ತಪ್ಪು ಮಾಡಿದರೆ ಮೇಷ್ಟ್ರ ರೀತಿಯಲ್ಲಿ ಗದರಿಸಬೇಡಿ ಎಂದು ಹೇಳುವ ರೀತಿಯಲ್ಲಿ ಸ್ಪೀಕರ್‌ ಅವರ ಪೋಟೊ ತೆಗೆದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೆರೆದಿದ್ದ ಪೌಷ್ಟಿಕ ಆಹಾರಗಳ ಮಳಿಗೆಗೆ ಭೇಟಿ ನೀಡಿದಾಗ ಅಲ್ಲಿದ್ದ ಬಗೆ ಬಗೆಯ ತಿಂಡಿಗಳನ್ನು ನೋಡಿ ಬೆರಗಾದ ಸಚಿವ ಎಚ್‌.ಆಂಜನೇಯ ‘ಶುಗರ್‌ ಇದೆ, ಆದರೂ ಪರವಾಗಿಲ್ಲ’ ಎನ್ನುತ್ತ ಉಂಡೆಯೊಂದನ್ನು ಕೇಳಿ ಪಡೆದು ಸವಿದರು. ಆ ಮಳಿಗೆಯಲ್ಲಿದ್ದ ರಾಗಿ ರೊಟ್ಟಿಯನ್ನು ನೋಡಿದ ಸಚಿವರು ಮಲೆನಾಡಿನ ರಾಗಿ ರೊಟ್ಟಿಯ ಶೈಲಿಯ ಬೇರೆ ರೀತಿ ಇದೆಯಲ್ಲಾ ಎಂದು ಪ್ರತಿಕ್ರಿಯಿಸಿದರು.

ಅರಣ್ಯ ಇಲಾಖೆ ತೆರೆದಿದ್ದ ಮಳಿಗೆಯಲ್ಲಿ ಸ್ಥಳೀಯ ಎಣ್ಣೆ ಕಾಳುಗಳ ಬೀಜಗಳಿಂದ ಬಯೋ ಡಿಸೇಲ್‌ ಹೇಗೆ ತಯಾರಿಸಬಹುದು ಎಂಬುದನ್ನು ಸಚಿವರಿಗೆ ಶಿವಮೊಗ್ಗದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ದಿನಕರ್‌ ಜಾಧವ್‌ ವಿವರಿಸಿದರು. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ತೆರೆದಿದ್ದ ಮಳಿಗೆಯಲ್ಲಿ ವಿವಿಧ ರೀತಿಯ ಫಲ ಪುಷ್ಪಗಳನ್ನು, ವಿವಿಧ ತಳಿಯ ಭತ್ತಗಳನ್ನು ಸಚಿವರು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಪ್ರಾಚ್ಯ ವಸ್ತು ಇಲಾಖೆ ಏರ್ಪಡಿಸಿದ್ದ ಇತಿಹಾಸದ ಕುರಿತ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಕಿಮ್ಮನೆ ನೆರವೇರಿಸಿದರು. ಸಾಗರ ಅಂಚೆ ಚೀಟಿ ಮತ್ತು ನಾಣ್ಯ ಸಂಘ ಆಯೋಜಿಸಿದ್ದ ಅಪೂರ್ವ ಸಂಗ್ರಹಗಳ ಅಂಚೆ ಚೀಟಿ ಮತ್ತು ನಾಣ್ಯಗಳು ಹೇಗೆ ಇತಿಹಾಸದ ಮೆಲುಕು ಹಾಕಲು ಸಹಕಾರಿ ಎನ್ನುವುದನ್ನು ಸಚಿವರು, ವಿಧಾನಸಭಾಧ್ಯಕ್ಷರು ವೀಕ್ಷಿಸಿದರು.

ಮದರ್‌ ಥೆರಸಾ ಕೈಗಾರಿಕಾ ತರಬೇತಿ ಸಂಸ್ಥೆ, ಓತಗೋಡಿನ ಚೌಡೇಶ್ವರಿ ಸ್ತ್ರೀಶಕ್ತಿ ಸಂಘ, ಕಾನುಗೋಡಿನ ತ್ರಿವೇಣಿ ಸ್ತ್ರೀಶಕ್ತಿ ಸಂಘ ತೆರೆದಿದ್ದ ಮಳಿಗೆಗಳಲ್ಲಿ ಆ ಸಂಘಗಳ ಉತ್ಪನ್ನ ಮತ್ತು ನೀಡುವ ತರಬೇತಿಗಳ ಬಗ್ಗೆ ಅತಿಥಿಗಳು ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT