ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣ ಶನಿವಾರ ಕೃಪೆ ತೋರಿದ ವರುಣ

Last Updated 22 ಜುಲೈ 2012, 5:00 IST
ಅಕ್ಷರ ಗಾತ್ರ

ಯಾದಗಿರಿ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ವರುಣನ ಕೃಪೆಯೂ ಆರಂಭವಾಗಿದ್ದು, ಶನಿವಾರ ಸುರಿದ ಧಾರಾಕಾರ ಮಳೆಯಿಂದಾಗಿ ರೈತರು ನೆಮ್ಮದಿಯ ನಿಟ್ಟುಸಿರುವ ಬಿಟ್ಟರೆ, ಗುಡಿಸಲು ವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಆಗುತ್ತಿತ್ತು. ಶನಿವಾರ ಮಧ್ಯಾಹ್ನದಿಂದಲೇ ಯಾದಗಿರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಒಳ್ಳೆಯ ಮಳೆ ಸುರಿದಿದೆ. ಮಧ್ಯಾಹ್ನ ಆರಂಭವಾದ ರಭಸದ ಮಳೆ ಸಂಜೆವರೆಗೂ ಮುಂದುವರಿದಿತ್ತು. ಶಹಾಪುರ, ಸುರಪುರ, ಹುಣಸಗಿ, ಕೆಂಭಾವಿಯಲ್ಲೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಆಗಾಗ ತುಂತುರು ಮಳೆ ಸುರಿದಿದೆ.

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿಯ ಮಹಾತ್ಮಾ ಗಾಂಧಿ ತರಕಾರಿ ಮಾರುಕಟ್ಟೆಯಲ್ಲೂ ಶನಿವಾರ ಮಳೆ ನೀರು ತುಂಬಿದ್ದು, ಸಾರ್ವಜನಿಕರು, ವ್ಯಾಪಾರಿಗಳು ಪರದಾಡುವಂತಾಯಿತು.

ಹೊಸಳ್ಳಿ ರಸ್ತೆಯಲ್ಲಿ ಬುಡ್ಗ ಜಂಗಮ ಜನಾಂಗದವರ ಗುಡಿಸಲುಗಳಿಗೆ ನೀರು ನುಗ್ಗಿದ್ದು, ಸಾಮಗ್ರಿಗಳೆಲ್ಲವೂ ನೀರು ಪಾಲಾದವು. ಮಕ್ಕಳು, ಹಿರಿಯರು ಸೇರಿದಂತೆ ಗುಡಿಸಲಿನ ನಿವಾಸಿಗಳು ನೀರಿನಿಂದಾಗಿ ತೊಂದರೆ ಅನುಭವಿಸಬೇಕಾಯಿತು.

ಎರಡು ದಿನಗಳ ಹಿಂದಷ್ಟೇ ಹೆರಿಗೆಯಾಗಿರುವ ಬಾಣಂತಿಯೊಬ್ಬರು ಇರುವ ಗುಡಿಸಲಿಗೂ ನೀರು ನುಗ್ಗಿದ್ದು, ಮಗು ಹಾಗೂ ತಾಯಿಯನ್ನು ಮಳೆ ನೀರಿನಿಂದ ರಕ್ಷಣೆ ಮಾಡಲು ಅಲ್ಲಿನ ಜನರು ಸಾಕಷ್ಟು ಪ್ರಯಾಸ ಪಡಬೇಕಾಯಿತು.  ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ವೀಕ್ಷಿಸಿದರು.

ಪಕ್ಕದಲ್ಲಿಯೇ ಹರಿಯುವ ಹಳ್ಳದಲ್ಲಿ ನೀರಿನ ಪ್ರಮಾಣದ ಹೆಚ್ಚಾದ ಹಿನ್ನೆಲೆಯಲ್ಲಿ ಗುಡಿಸಲುಗಳಿಗೆ ನೀರು ನುಗ್ಗುತ್ತಿದೆ. ಈ ಜಾಗದಲ್ಲಿ ಮಣ್ಣು ಹಾಕಿ ಕೊಡಿ. ಸದ್ಯಕ್ಕೆ ತಮಗೆ ತಾತ್ಕಾಲಿಕವಾಗಿ ಬೇರೆಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಅಲ್ಲಿನ ನಿವಾಸಿಗಳು ಮನವಿ ಮಾಡಿದರು.

ಪ್ರತಿಯೊಂದು ಗುಡಿಸಲಿಗೂ ಭೇಟಿ ನೀಡಿದ ಲಲಿತಾ ಅನಪೂರ, ಚಿಕ್ಕ ಮಕ್ಕಳು, ವೃದ್ಧರೂ ಅನುಭವಿಸುತ್ತಿರುವ ತೊಂದರೆಯನ್ನು ಗಮನಿಸಿದರು. ಕೂಡಲೇ ಈ ಹಳ್ಳದ ದಡಕ್ಕೆ ಮರಮ್ ಹಾಕುವಂತೆ ಸೂಚಿಸಿದ ಅವರು, ತಾತ್ಕಾಲಿಕವಾಗಿ ಈ ಎಲ್ಲ ಜನರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ವ್ಯವಸ್ಥೆ ಮಾಡಲು ತಿಳಿಸಿದರು.

ಇಲ್ಲಿನ ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡುವ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದು, ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗುವುದು. ಇಲ್ಲಿರುವ ಗುಡಿಸಲುಗಳಿಗೆ ನೀರು ನುಗ್ಗದಂತೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಲಲಿತಾ ಅನಪೂರ ತಿಳಿಸಿದರು.

ಈ ಸಂದರ್ಭದಲ್ಲಿ ರಾಜು ಸೈದಾಪುರ,ಸಂತೋಷ, ಅರುಣ, ಮಾರುತಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಪರಿಶೀಲನೆ ಮಾಡಿದರು.

ರೈತರಲ್ಲಿ ಸಂತಸ: ಈಗಾಗಲೇ ಹೆಸರು ಬೀಜ ಬಿತ್ತನೆ ಮಾಡಿ, ಮಳೆಗಾಗಿ ಕಾದು ಕುಳಿತಿದ್ದ ರೈತರು ಶ್ರಾವಣದ ಶನಿವಾರ ನಿಟ್ಟುಸಿರು ಬಿಡುವಂತಾಯಿತು. ಧಾರಾಕಾರ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತಿದ್ದು, ಬೀಜಗಳು ಮೊಳಕೆ ಒಡೆಯಲು ಅನುಕೂಲವಾಗಿದೆ ಎಂದು ರೈತರು ತಿಳಿಸಿದ್ದಾರೆ.

“ಈಗ ಮಳಿ ಬಂದದ್ದ ಭಾಳ ಛೋಲೋ ಆಗೇತ್ರಿ. ಇನ್ನೊಂದ ನಾಕ ದಿನಾ ಮಳಿ ಬೀಳಲಿಲ್ಲಾ ಅಂದ್ರ, ಭೂಮ್ಯಾಗಿನ ಬೀಜ ಅಲ್ಲೇ ಒಣಗಿ ಹೊಕ್ಕಿದ್ದು. ಇವತ್ತ ಮಳಿ ಛೋಲೋನ ಆಗೇತಿ. ಇನ್ನೇನ ಹೆಸರಿಗೆ ತ್ರಾಸ ಇಲ್ಲ ನೋಡ್ರಿ. ಶ್ರಾವಣ ರೈತರಿಗೆ ಒಳ್ಳೇದ ಮಾಡೇತಿ ನೋಡ್ರಿ” ಎಂದು ನಾಯ್ಕಲ್‌ನ ರೈತ ಸೂಗಪ್ಪ ಸಂತಸ ವ್ಯಕ್ತಪಡಿಸುತ್ತಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಕೃಷಿ ಇಲಾಖೆ ಸಂಗ್ರಹಿಸಿ ಇಟ್ಟುಕೊಂಡಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ ಆಗುತ್ತಿಲ್ಲ. ಕೃಷಿ ಚಟುವಟಿಕೆಗಳು ಆರಂಭವಾಗದೇ ಇರುವ ಹಿನ್ನೆಲೆಯಲ್ಲಿ ಬಹುತೇಕ ರೈತರು, ರೈತ ಸಂಪರ್ಕ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿಲ್ಲ.

ಶನಿವಾರ ಸುರಿದಿರುವ ಮಳೆಯಿಂದ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೇವಾಂಶ ಬಂದಿದ್ದು, ಇನ್ನು ಬಿತ್ತನೆ ಕಾರ್ಯ ಚುರುಕುಗೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಶ್ರಾವಣ ಮಾಸದ ಮೊದಲ ಶನಿವಾರ ಸುರಿದಿರುವ ಭಾರಿ ಮಳೆ ರೈತರ ಆಸೆಯನ್ನು ಜೀವಂತವಾಗಿ ಇರಿಸಿದ್ದು, ಬತ್ತಿ ಹೋಗಿದ್ದ ಉತ್ಸಾಹ ಮರುಕಳಿಸುವಂತೆ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT