ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠದತ್ತ ಒಡೆಯರ್‌ ನಡೆದ ಹಾದಿ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ರಾಜಮನೆತನದಲ್ಲಿ ಹುಟ್ಟಿ, ರಾಜ­ಕೀಯ, ಕ್ರಿಕೆಟ್‌, ಸಂಗೀತ ಹಾಗೂ ಇತರೆ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿ, ಬಹುಮುಖ ವ್ಯಕ್ತಿತ್ವ ಉಳ್ಳವರಾಗಿದ್ದರು.

1953 ಫೆ. 20ರಂದು ಜಯಚಾಮರಾಜ ಒಡೆಯರ್‌–ತ್ರಿಪುರ ಸುಂದರಿ ಅಮ್ಮಣ್ಣಿ ಅವರ ಪುತ್ರ­ನಾಗಿ ಜನಿಸಿದ ಒಡೆಯರ್‌, ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಅವರು ಕಾನೂನು ವಿಷಯ­ದಲ್ಲಿಯೂ ಪದವಿ ಪಡೆದಿದ್ದರು.  ಎರಡು ವರ್ಷ ಮೈಸೂರು ವಿವಿಯಲ್ಲಿ ರಾಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿ­ಸಿದರು. 1974ರಲ್ಲಿ ಮೈಸೂರು ಮಹಾ­ರಾಜ­ರಾಗಿ ಅವರಿಗೆ ಪಟ್ಟಾಭಿ­ಷೇಕ ಮಾಡಲಾಗಿತ್ತು. 1976 ಫೆ.2ರಂದು ಪ್ರಮೋದಾದೇವಿ ಅವರನ್ನು ವರಿಸಿದರು.

ನಾಲ್ಕು ಬಾರಿ ಸಂಸದ: ಶ್ರೀಕಂಠ­ದತ್ತರು  31ನೇ ವಯಸ್ಸಿನಲ್ಲಿ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಮಾಜಿ ಮುಖ್ಯಮಂತ್ರಿ ಗುಂಡುರಾವ್‌ ಅವರು ಒಡೆಯರನ್ನು ಕಾಂಗ್ರೆಸ್‌ಗೆ ಕರೆತಂದರು. ಅರಮನೆಗೆ ತೆರಳಿ ರಾಜಕೀಯ ಜೀವನಕ್ಕೆ ನೀಡಿದ ಆಹ್ವಾನ ಎರಡು ದಶಕಗಳ ಕಾಲ ಒಡೆಯರ್‌ ಅವರನ್ನು ಸಕ್ರಿಯ ರಾಜಕಾರಣದಲ್ಲಿ ಉಳಿಯುವಂತೆ ಮಾಡಿತು. ಇವರು 4 ಬಾರಿ ಗೆಲುವು, 2 ಬಾರಿ ಸೋಲು ಅನುಭವಿಸಿದ್ದರು.


1984,  1989ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದ ಒಡೆಯರ್‌ ಅವರನ್ನು ಮೈಸೂರು ಮತದಾರರು 1991ರಲ್ಲಿ ತಿರಸ್ಕರಿಸಿದರು. ಇದು ಅವರನ್ನು ಮತ್ತೆ ಕಾಂಗ್ರೆಸ್‌ಗೆ ಮರಳುವಂತೆ ಮಾಡಿತು. ಆನಂತರ ನಡೆದ 1996 ಮತ್ತು 1999ರಲ್ಲಿ ವಿಜೇತರಾದರು. ಬಿಜೆಪಿ ಸೇರಿ ಚುನಾವಣೆಗೆ ನಿಂತಿದ್ದ ಅವರು ಪರಾಜಿತರಾಗಿದ್ದರು.

ಕಲೆ–ಸಾಹಿತ್ಯದಲ್ಲಿ ಆಸಕ್ತಿ: ಕಲೆ – ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶ್ರೀಕಂಠದತ್ತ ನರಸಿಂಹ ಒಡೆಯರ್‌ ಅವರು ಪಾಶ್ಚಿಮಾತ್ಯ ಸಂಗೀತದಲ್ಲಿ ಪದವಿ ಸಹ ಪಡೆದಿದ್ದರು. ಲಂಡನ್ನಿನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಿಂದ ಮೆರಿಟ್‌ ಪಡೆದಿದ್ದರು. ಮೈಸೂರಿನ ಜಯಚಾಮರಾಜೇಂದ್ರ ಕಲಾ ಗ್ಯಾಲರಿ, ಲಕ್ಷ್ಮಮ್ಮ ಅಮ್ಮಣ್ಣಿ ಶಿಕ್ಷಣ ಟ್ರಸ್ಟ್‌, ಜಯಚಾಮರಾಜೇಂದ್ರ ಶಿಕ್ಷಣ ಟ್ರಸ್ಟ್‌ ಮುಖ್ಯಸ್ಥರು ಸಹ ಆಗಿದ್ದರು. ಫ್ಯಾಷನ್‌ ಡಿಸೈನರ್‌ ಆಗಿ ಮೈಸೂರು ರೇಷ್ಮೆ ಸೀರೆಗಳ ಬ್ರಾಂಡ್‌ನಲ್ಲಿ ತಮ್ಮದೇ ಆದ ವಿನ್ಯಾಸವನ್ನು ಪರಿಚಯಿಸಿದ್ದರು.

ವಿಶಿಷ್ಟವಾದ ಕಲಾಕೃತಿಗಳು, ವಾಚುಗಳು, ಐಷಾರಾಮಿ ಕಾರುಗಳನ್ನು ಕೊಳ್ಳುವ ಹವ್ಯಾಸ ಅವರಲ್ಲಿ ಇತ್ತು. ಕ್ರಿಕೆಟ್‌ ಅವರಿಗೆ ಅತ್ಯಂತ ನೆಚ್ಚಿನ ಕ್ರೀಡೆ. ಇದನ್ನು ತುಂಬಾ ಪ್ರೀತಿಸುತ್ತಿದ್ದರು. ಇದಲ್ಲದೆ ಮೈಸೂರು ರೇಸ್‌ ಕ್ಲಬ್‌, ಬೆಂಗಳೂರು ಗಾಲ್ಫ್‌ ಕ್ಲಬ್‌, ಬೆಂಗಳೂರು ಟರ್ಫ್‌ ಕ್ಲಬ್‌, ದೆಹಲಿ ರೇಸ್‌ ಕ್ಲಬ್‌ನೊಂದಿಗೆ ಒಡನಾಟ ಇಟ್ಟುಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

ಮೈಸೂರು ಅರಮನೆ, ಬೆಂಗಳೂರು ಅರಮನೆ, ಲೋಕರಂಜನ್‌ ಮಹಲ್‌, ಚಾಮುಂಡಿ ಬೆಟ್ಟದಲ್ಲಿರುವ ರಾಜೇಂದ್ರ ವಿಲಾಸ ಅರಮನೆ, ಊಟಿಯಲ್ಲಿರುವ ಫರ್ನ್‌ ಹಿಲ್‌ ಅರಮನೆ (ಈಗ ಹೋಟೆಲ್‌), ಗನ್‌ಹೌಸ್‌, ಸುರಭಿ ಡೇರಿ ಮುಂತಾದವು ಒಡೆಯರ್‌ ಅವರ ಒಡೆತನಕ್ಕೆ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT