ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶ್ರೀಕೃಷ್ಣ ಪಾರಿಜಾತ'ದ ಸತ್ಯಭಾಮೆ

ವ್ಯಕ್ತಿ
Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಶ್ರೀಕೃಷ್ಣ ಪಾರಿಜಾತ'ದ ಮೂಲಕವೇ ಜೀವಮಾನವೆಲ್ಲಾ ಕಲಾಸೇವೆಯಲ್ಲಿ ತೇಯುತ್ತಿರುವ ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಕಾಶಿಬಾಯಿ ದಾದನಟ್ಟಿ ಅವರಿಗೆ ರಾಜ್ಯ ಸರ್ಕಾರ 2011ನೇ ಸಾಲಿನ `ಜಾನಪದ ಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

`ಶ್ರೀ ಕೃಷ್ಣ ಪಾರಿಜಾತ'ದ ಸತ್ಯಭಾಮೆ, ರುಕ್ಮಿಣಿ, ಕೊರವಂಜಿ ಪಾತ್ರಗಳಿಗೆ ತಮ್ಮ ಮನೋಜ್ಞ ಅಭಿನಯ, ಕಂಠಸಿರಿಯ ಮೂಲಕ ಜೀವ ತುಂಬಿರುವ ಕಾಶೀಬಾಯಿ, ಕಳೆದ 50 ವರ್ಷದಿಂದ ನಿರಂತರವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ `ಶ್ರೀ ಕೃಷ್ಣ ಪಾರಿಜಾತ'ದ ಸುಮಾರು 2200ಕ್ಕೂ ಅಧಿಕ ಪ್ರಯೋಗಗಳನ್ನು ಯಶಸ್ವಿಯಾಗಿ ಆಡುವ ಮೂಲಕ ಜನಪ್ರಿಯರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ ತಮ್ಮ ಎಂಟನೇ ವಯಸ್ಸಿನಲ್ಲೆ ಬಣ್ಣ ಹಚ್ಚಿಕೊಳ್ಳುವ ಮೂಲಕ ಕಾಶಿಬಾಯಿ `ಪಾರಿಜಾತ' ಕಾಶೀಬಾಯಿ ರಂಗಪ್ರವೇಶ ಮಾಡಿದ್ದು. ಲೋಕಾಪುರದ `ಕೃಷ್ಣಾಜಿ ದೇಶಪಾಂಡೆ ಪಾರಿಜಾತ ಕಂಪನಿ'ಯಲ್ಲಿ 10 ವರ್ಷ, ಮಹಾಲಿಂಗಪುರದ `ಕೌಜಲಗಿ ನಿಂಗಮ್ಮ ಪಾರಿಜಾತ ಕಂಪನಿ'ಯಲ್ಲಿ 8 ವರ್ಷ, ಮಹಾಲಿಂಗಪುರದ `ರತ್ನಪ್ಪ ಮಾಸ್ತರ ಕಂಪನಿ'ಯಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ 1975ರಲ್ಲಿ `ಶ್ರೀ ಮಂಜುನಾಥ ಶ್ರೀಕೃಷ್ಣ ಪಾರಿಜಾತ ಬಯಲಾಟ ಕಂಪನಿ'ಯನ್ನು ಆರಂಭಿಸಿ ಇಂದಿಗೂ ನುರಿತ 12 ಕಲಾವಿದರನ್ನು ಒಳಗೊಂಡ ತಂಡದೊಂದಿಗೆ ಪಾರಿಜಾತ ಪ್ರದರ್ಶನ ನೀಡುತ್ತಿದ್ದಾರೆ.

ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ರಾಜ್ಯಮಟ್ಟದ ಜನಪದ ಉತ್ಸವ, ಕೇಂದ್ರ ಸರ್ಕಾರದ ಶ್ರೀಕೃಷ್ಣ ಪಾರಿಜಾತ ಉತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ `ಪಾರಿಜಾತ ರಂಗೋತ್ಸವ'ದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.

2001ರಿಂದ 2004ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಉತ್ತರ ಕರ್ನಾಟಕ ಭಾಗದಲ್ಲಿ ರಂಗೋತ್ಸವ, ವಿಚಾರ ಸಂಕಿರರ್ಣ, ಜನಪದ ಉತ್ಸವವನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ.

ಕಾಶಿಬಾಯಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1996), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1999), ಕರ್ನಾಟಕ ಜಾನಪದ ಪರಿಷತ್ ನೀಡುವ ಜಾನಪದ ಲೋಕ ಪ್ರಶಸ್ತಿ (2002), ಬಾಬು ಜಗಜೀವನರಾಂ ಪ್ರಶಸ್ತಿ (2007), ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ (2009) ದೊರೆತಿವೆ.

ಪಾರಿಜಾತ ರತ್ನ, ಪಾರಿಜಾತ ಅಭಿಜಾತೆ, ಪಾರಿಜಾತ ಸಿರಿ, ಪಾರಿಜಾತ ಕೋಗಿಲೆ, ಪಾರಿಜಾತ ಅಭಿನಯ ಶಾರದೆ, ಪಾರಿಜಾತದ ಎರಡನೇ ಕೌಜಲಗಿ ನಿಂಗವ್ವ ಮತ್ತಿತರ ಗೌರವಾಭಿಮಾನದಿಂದ ಕರೆಯಿಸಿಕೊಳ್ಳುತ್ತಿರುವ ಕಾಶಿಬಾಯಿ ಅವರನ್ನು ಇದುವರೆಗೆ ಸುಮಾರು 300ಕ್ಕೂ ಅಧಿಕ ಪ್ರಮುಖ ಸಂಘ ಸಂಸ್ಥೆಗಳು ಗೌರವಿಸಿವೆ.

ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಅವನತಿಯ ಹಾದಿ ಹಿಡಿದಿರುವ ಪಾರಿಜಾತದ ಉಳಿವಿಗೆ ಕಾಶಿಬಾಯಿ ದಾದನಟ್ಟಿಯವರ ಕೊಡುಗೆ ಅಪಾರ. ಯಮನಪ್ಪ ಮತ್ತು ರಾಣವ್ವ ದಂಪತಿಯ ಹಿರಿಯ ಮಗಳಾದ ಕಾಶಿಬಾಯಿ ದಾದನಟ್ಟಿ ಅವರಿಗೆ ಸವಿತ ಮತ್ತು ದೀಪಕ ಎಂಬ ಇಬ್ಬರು ಮಕ್ಕಳಿದ್ದಾರೆ. ಸವಿತ ಮುಧೋಳದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಯುಸಿವರೆಗೆ ಓದಿರುವ ಮಗ ದೀಪಕ ಸದ್ಯ ಮನೆಯಲ್ಲೇ ಇದ್ದಾರೆ.

ಸಹೋದರರಾದ ಮುತ್ತಪ್ಪ, ಯಲ್ಲಪ್ಪ ಮತ್ತು ಸಹೋದರಿಯರಾದ ಶಾಂತವ್ವ ಅವರು ಕಾಶಿಬಾಯಿ ಅವರೊಂದಿಗೆ ಶ್ರೀಕೃಷ್ಣ ಪಾರಿಜಾತ ಆಡುತ್ತಾರೆ. ತಾಯಿ ರಾಣವ್ವ ಜಾನಪದ ಹಾಡುಗಾರ್ತಿಯಾಗಿದ್ದು, ಚೌಡಕಿ ಪದ, ಯಲ್ಲವ್ವನ ಪದಗಳನ್ನು ಹಾಡುತ್ತಾರೆ. 
21 ಸದಸ್ಯರೊಳಗೊಂಡ ಕೂಡುಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕಾಶಿಬಾಯಿ ಬಡ ಕಲಾವಿದೆ. `ಆನಂದಕ್ಕಾಗಿ ಪಾರಿಜಾತವನ್ನು ಆಡುತ್ತಿದ್ದೇನೆಯೇ ಹೊರತು ರೊಕ್ಕ ಗಳಿಸಲು ಅಲ್ಲ, ಪಾರಿಜಾತ ನನ್ನ ಉಸಿರು, ಪಾರಿಜಾತವೇ ನನ್ನ ದೇವರು, ಮೈಯಲ್ಲಿ ಕಸುವಿರುವವರೆಗೂ ಪಾರಿಜಾತವನ್ನು ಆಡುತ್ತೇನೆ' ಎನ್ನುತ್ತಾರೆ ಕಾಶಿಬಾಯಿ.

`ಸಂಕಷ್ಟದಲ್ಲಿರುವ ಪಾರಿಜಾತ ಕಂಪನಿಗಳಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು, ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಅವನತಿಯ ಹಾದಿ ಹಿಡಿದಿರುವ ಪಾರಿಜಾತ ಕಲೆಯ ಉಳಿವಿಗಾಗಿ ಯುವ ಜನತೆಗೆ ಸೂಕ್ತ ತರಬೇತಿ ನೀಡಬೇಕು' ಎಂಬುದು ಕಾಶಿಬಾಯಿ ಅವರ ಸಲಹೆ.

ಒಂದು ಹೂವಿನ ಕತೆ
`ಶ್ರೀಕೃಷ್ಣ ಪಾರಿಜಾತ' ಒಂದು ಹೂವಿನ ಸುತ್ತ ಹೆಣೆದ ಕತೆ. ಕೃಷ್ಣ, ರುಕ್ಮಿಣಿ, ಸತ್ಯಭಾಮೆ ಇವರ ಕೌಟುಂಬಿಕ ಕಲಹವೇ ಪ್ರಧಾನವಾಗಿರುವ ಪಾರಿಜಾತವನ್ನು ರಂಗಭೂಮಿಯಲ್ಲಿ ಆಡುತ್ತ ಬಂದವರು ಮುಖ್ಯವಾಗಿ ಉತ್ತರ ಕರ್ನಾಟಕದ ಜನಪದ ಕಲಾವಿದರು. ಪಾರಿಜಾತದ ಮೇಳವನ್ನು ಕಟ್ಟಿ ಹಾಡಿಕುಣಿದು ಜನರಿಗೂ ಮನರಂಜನೆಯನ್ನು ಉಣಬಡಿಸುತ್ತಿದ್ದಾರೆ.

`ರಂಗಭೂಮಿಯ ರಾಜ' ಎಂದೇ ಪ್ರಸಿದ್ಧವಾಗಿರುವ ಪಾರಿಜಾತ ಆಟವು ವಿಶೇಷ ರಂಗ ಪ್ರಕಾರವಾಗಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿದೆ. ಬಯಲಾಟಗಳಲ್ಲಿ ಸಾಮಾನ್ಯವಾಗಿ ಸಂಭಾಷಣೆಗೆ ಸಂಗೀತ ಮತ್ತು ಹಾಡು ಪೂರಕವಾಗಿದ್ದರೆ, ಪಾರಿಜಾತದಲ್ಲಿ ಹಾಡು ಮತ್ತು ಸಂಗೀತಕ್ಕೆ ಮಾತುಗಳು ಪೂರಕವಾಗಿದೆ. ಏರುಧ್ವನಿಯ ಸಂಭಾಷಣೆ ಪಾರಿಜಾತದ ವಿಶೇಷವಾಗಿದೆ.

ಮೂಲತಃ ಅಪರಾಳ ತಮ್ಮಣ್ಣ ಮತ್ತು ಸಿರಗುಪ್ಪಿ ಸದಾಶಿವಪ್ಪ ಎಂಬ ಇಬ್ಬರು ಕವಿಗಳು ಸೃಷ್ಟಿಸಿದ ಕಾವ್ಯರೂಪದ `ಶ್ರೀಕೃಷ್ಣ ಪಾರಿಜಾತ'ವನ್ನು ರಂಗಭೂಮಿಗೆ ಸಂಯೋಜಿಸಿದವರು ಗೋಕಾಕ ತಾಲ್ಲೂಕಿನ ಕುಲಗೋಡ ತಮ್ಮಣ್ಣ. ಈ ಸಂಯೋಜನೆಯಲ್ಲಿ ಕುಲಗೋಡ ತಮ್ಮಣ್ಣನಿಗೆ ನೆರವಾದವರು ಯಾದವಾಡದ ಮಲಕಪ್ಪ ಮತ್ತು ಹುಕ್ಕೇರಿಯ ಸಿದ್ರಾಮಪ್ಪ.

ಕುಲಗೋಡು ತಮ್ಮಣ್ಣನ ತರುವಾಯ ಪಾರಿಜಾತ ರಂಗಭೂಮಿಗೆ ಅಪಾರ ಜನಪ್ರಿಯತೆ ತಂದಕೊಟ್ಟ ಶ್ರೇಯಸ್ಸು ಕೌಜಲಗಿ ನಿಂಗವ್ವಗೆ ಸೇರುತ್ತದೆ. ಸುಮಾರು 40 ವರ್ಷಗಳ ಕಾಲ ತನ್ನದೇ ಆದ ಕಂಪನಿ ಕಟ್ಟಿಕೊಂಡು ಪಾರಿಜಾತವನ್ನು ಯಶಸ್ವಿಯಾಗಿ ಪ್ರದರ್ಶಿಸಿದವರು ನಿಂಗವ್ವ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ, ಜಮಖಂಡಿ, ಲೋಕಾಪುರ, ದಾದನಟ್ಟಿ, ಯಂಡಿಗೇರಿ, ಬೆನಕಟ್ಟಿ ಮತ್ತು ಬೆಳಗಾವಿ ಜಿಲ್ಲೆಯ ಗೋಕಾಕ, ಸಾಲೋಟಗಿ, ಬೈಲಹೊಂಗಲ, ವಿಜಾಪುರ ಜಿಲ್ಲೆಯ ಸಾರವಾಡ ಮುಂತಾದ ಊರುಗಳಲ್ಲಿ ಹತ್ತಾರು ಕಂಪನಿಗಳು ಜನ್ಮತಾಳಿ ಪಾರಿಜಾತ ರಂಗಭೂಮಿಯ ವಿವಿಧ ಮಗ್ಗಲುಗಳನ್ನು ಬೆಳೆಸಿವೆ. ಒಂದೊಂದು ಕಂಪನಿಯೂ ತನ್ನದೇ ಆದ ವೈಶಿಷ್ಟ್ಯವನ್ನು ಮೈಗೂಡಿಸಿಕೊಂಡು ಬಂದಿದೆ. ಕಂಪನಿಯಿಂದ ಕಂಪನಿಗೆ ಹಾಡಿನ ರೀತಿ, ಸಂಭಾಷಣೆ ಶೈಲಿಯಲ್ಲೂ ಬದಲಾವಣೆ ಕಾಣಬಹುದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT