ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಕನ್ನಡ ಭಾಷೆ-ಸಂಸ್ಕೃತಿ ಗೌರವಿಸಲು ಸಲಹೆ

Last Updated 6 ಏಪ್ರಿಲ್ 2013, 9:11 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಬೇಕು. ಕನ್ನಡ ವೃತ್ತ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಟಿವಿ ನೋಡುವುದನ್ನು ಕಡಿಮೆ ಮಾಡಿ, ಸಾಹಿತ್ಯ ಕೃತಿಗಳ ಅಧ್ಯಯನ ಮಾಡಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ರವಿಕುಮಾರ್ ಸಲಹೆ ನೀಡಿದರು.

ಪಟ್ಟಣದ ಆದರ್ಶ ವಿದ್ಯಾಲಯದ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಹೊದಲಿ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ಜನಪದ ಹಾಗೂ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಈಚೆಗೆ ನಡೆದ ತಾಲ್ಲೂಕು ಮಟ್ಟದ ಕನ್ನಡ ಗೀತೆ ಗಾಯನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ಸ್ಥಳೀಯ ಕವಿ, ಕಲಾವಿದರು ಹಾಗೂ ಗಾಯಕರಿಗೆ ಅವಕಾಶ ಕಲ್ಪಿಸಲಾಗುವುದು. ಮನೆ ಮಾತು ಯಾವುದೇ ಆದರೂ, ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಬೇಕು. ಮಾತಿನ ಮೂಲಕ ಕನ್ನಡ ಬೆಳೆಯಬೇಕು. ಅದಕ್ಕೆ ಪೂರಕವಾಗಿ ನಮ್ಮ ನಡೆ ಇರಬೇಕು ಎಂದು ಹೇಳಿದರು.

ತಾಲ್ಲೂಕಿನ ಹೊದಲಿ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ಜಾನಪದ ಹಾಗೂ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಘದ ಕಾರ್ಯದರ್ಶಿ ಹಾಗೂ ಜನಪದ ಗಾಯಕ ಎನ್.ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜನಪದ ಸಾಹಿತ್ಯವಿದೆ. ಜನಪದ ಗಾಯಕರಿದ್ದಾರೆ. ಅವರಿಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಹಾಗಾಗಿ ಅವರಲ್ಲಿನ ಕೌಶಲ್ಯ ಅವರ ಎದೆಯಲ್ಲಿ ಉಳಿದೆ. ಅದನ್ನು ಹೊರತರುವ ಹೊಣೆಗಾರಿಕೆ ಸಮಾಜದ ಮೇಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜನಪದ ಮತ್ತು ಇತರ ಪ್ರಕಾರಗಳ ಗಾಯಕರು ಕನ್ನಡ ಗೀತೆಗಳನ್ನು ಹಾಡಿ ಪ್ರೇಕ್ಷಕರು ತಲೆದೂಗುವಂತೆ ಮಾಡಿದರು. ಕನ್ನಡ ಭಾಷೆಯಲ್ಲಿ ಪ್ರಬುದ್ಧತೆ ತೋರಿದ ವಿದ್ಯಾರ್ಥಿಗಳಾದ ಕೆ.ಆರ್.ಚೇತನ್, ಆರ್.ಶ್ರೀನಿಧಿ, ಬಿ.ವಾಣಿ ಅವರಿಗೆ  ಬಹುಮಾನ ವಿತರಿಸಲಾಯಿತು.

ಮುಖ್ಯ ಶಿಕ್ಷಕಿ ಟಿ.ಫರ್ಜಾನಾ ತಬಸುಂ, ಗಾಯಕ ಎನ್.ಎಸ್.ನವೀನ್ ಕುಮಾರ್, ಶಿಕ್ಷಕರಾದ ವಿ.ನರಸಿಂಹಪ್ಪ, ಮಲ್ಲಿಕಾರ್ಜುನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆ.ಚೌಡಪ್ಪ ಕಾರ್ಯಕ್ರಮ ನಿರೂಪಿಸಿದರು. ಎನ್.ಎಚ್. ಸ್ವಾಗತಿಸಿದರು. ಎನ್.ವಿ.ರವಿಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT