ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಕೋತಿ ಕಚ್ಚಿ ಐವರಿಗೆ ಗಾಯ

Last Updated 12 ಡಿಸೆಂಬರ್ 2013, 8:48 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಪನಸ­ಮಾಕನಹಳ್ಳಿ ಗ್ರಾಮದಲ್ಲಿ ಕೋತಿಗಳ ಉಪಟಳ ಮುಂದುವರಿದಿದ್ದು, ಒಂದು ವಾರದಿಂದ ಈಚೆಗೆ 5 ಮಂದಿ ಕೋತಿ ಕಡಿತಕ್ಕೆ ಒಳಗಾಗಿದ್ದಾರೆ. ಆ ಪೈಕಿ ನಾಲ್ವರು ಮಹಿಳೆಯರು ಹಾಗೂ ಪುರುಷ ಸೇರಿದ್ದಾರೆ.

ಹಳ್ಳಿಯ ಮನೆಗಳ ಮೇಲೆ ಹಗಲಲ್ಲಿ ಸಂಚರಿಸುವ ಕೋತಿ ಹಿಂಡು ನಾಗರಿಕರ ಭಯಕ್ಕೆ ಕಾರಣವಾಗಿದೆ. ಈ ಹಿಂದೆ ಇಬ್ಬರು ಬಾಲಕಿಯರನ್ನು ಕೊತಿಗಳು ಕಚ್ಚಿ ತೀವ್ರವಾಗಿ ಗಾಯಗೊಳಿಸಿದ್ದವು. ಈಗ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಕೋತಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಇದ­ರಿಂದ ಗ್ರಾಮದಲ್ಲಿ ಕೈಯಲ್ಲಿ ಕೋಲಿಲ್ಲದೆ ಓಡಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಗಳ ಹೆಂಚುಗಳನ್ನು ಎತ್ತಿ ಒಳ ಪ್ರವೇಶಿಸುವ ಕೋತಿಗಳು, ಮನೆಯಲ್ಲಿ ಇರಬಹುದಾದ ತಿನ್ನುವ ಪದಾರ್ಥ­ಗಳನ್ನು ಅಪಹರಿಸುತ್ತಿವೆ. ತೋಟಗಳಲ್ಲಿ ಕೆಲಸ ಮಾಡುವ ಜನರಿಗೆ ಮನೆಗಳಿಂದ ಊಟ ಕೊಂಡೊಯ್ಯಲು ಸಾಧ್ಯವಾಗು­ತ್ತಿಲ್ಲ.

ತಲೆಯ ಮೇಲಿನ ಬುಟ್ಟಿಯನ್ನು ಕೆಳಗೆ ತಳ್ಳಿ ಮುದ್ದೆಗಳನ್ನು ಕೊಂಡೊ­ಯ್ಯುತ್ತವೆ. ಕೋತಿ ಕಾಟದಿಂದಾಗಿ ಗ್ರಾಮದಲ್ಲಿನ ಕೈ ತೋಟಗಳು ಹಾಳಾ­ಗಿವೆ. ಗ್ರಾಮದ ಸುತ್ತಮುತ್ತ ಹಣ್ಣು ತರಕಾರಿ ಬೆಳೆ ಕಾಯುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹುಣಸೆ ಮರಗಳು ಖಾಲಿಯಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇಷ್ಟು ಸಾಲದೆಂಬಂತೆ ದೊಡ್ಡ ಗಾತ್ರದ ಕೋತಿಗಳು ಗ್ರಾಮಸ್ಥರ ಮೇಲೆ ದಾಳಿ ಮಾಡಿ, ಗಾಯಗೊಳಿಸುತ್ತಿವೆ. ಇದರಿಂದ ಕೋತಿ ಕಂಡರೆ ಗ್ರಾಮಸ್ಥರು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಕೋತಿ ಕಾಟದ ಬಗ್ಗೆ ಈಚೆಗೆ ‘ಪ್ರಜಾ­ವಾಣಿ’ಯಲ್ಲಿ ವರದಿಯಾದ ಮೇಲೆ ಗ್ರಾಮ ಪಂಚಾಯತಿ ಅಧಿಕಾರಿ­ಯೊಬ್ಬರು ಕೋತಿ ಕಚ್ಚಿರುವ ವ್ಯಕ್ತಿಗಳನ್ನು ಭೇಟಿಯಾಗಿ ಹೋಗಿದ್ದಾರೆ. ಆಗ ಇಬ್ಬರನ್ನು ಮಾತ್ರ ಕಚ್ಚಿದ್ದವು. ಅಧಿಕಾರಿ ಬಂದು ಹೋದ ಮೇಲೆ ಇನ್ನೂ ಮೂವರು ಕೋತಿ ಕಡಿತಕ್ಕೆ ಒಳಗಾಗಿ­ದ್ದಾರೆ.

ಗ್ರಾಮ ಪಂಚಾಯತಿ ಅಧಿಕಾರಿಗಳು ಕೋತಿ ಕಾಟದ ಬಗ್ಗೆ ಶೀಘ್ರ ಗಮನ ಹರಿಸಿ, ಅವುಗಳನ್ನು ಹಿಡಿದು ದೂರದ ಕಾಡಿಗೆ ಬಿಡದಿದ್ದರೆ ತಾಲ್ಲೂಕು ಪಂಚಾಯತಿ ಎದುರು ಧರಣಿ ನಡೆಸುವುದಾಗಿ ಗ್ರಾಮಸ್ಥರು ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT