ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ನಿರ್ಣಾಯಕ ಮತಕ್ಕೆ ಮುಖಂಡರ ಲಗ್ಗೆ

Last Updated 4 ಏಪ್ರಿಲ್ 2013, 8:04 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ವಿಧಾನ ಸಭೆ ಚುನಾವಣೆಯಲ್ಲಿ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಸುಗಟೂರು ಮತ್ತು ಹೋಳೂರು ಹೋಬಳಿಗಳು, ಯಾವುದೇ ಪಕ್ಷದ ಅಭ್ಯರ್ಥಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬ ಭಾವನೆ ರಾಜಕೀಯ ವಲಯದಲ್ಲಿ ಬೇರೂರುತ್ತಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವೇಮಗಲ್ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದ ಸುಗಟೂರು ಹಾಗೂ ಕೋಲಾರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದ ಹೋಳೂರು ಹೋಬಳಿಗಳನ್ನು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ತರಲಾಯಿತು. ಸಿ.ಬೈರೇಗೌಡರ ಪ್ರಭಾವ ಹೆಚ್ಚಾಗಿದ್ದ ಸುಗಟೂರು, ಶ್ರೀನಿವಾಸಗೌಡರ ಪ್ರಭಾವ ಹೆಚ್ಚಾಗಿದ್ದ ಹೋಳೂರು ಹೋಬಳಿ, ಕಳೆದ ಬಾರಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಗೆಲುವಿಗೆ ಕಾರಣವಾದದ್ದು ಗುಟ್ಟಾಗಿ ಉಳಿದಿಲ್ಲ.

ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಈ ಎರಡೂ ಹೋಬಳಿಗಳ ಮತದಾರರಿಗೆ ಜಿ.ಕೆ.ವೆಂಕಟಶಿವಾರೆಡ್ಡಿ ಅಥವಾ ಕೆ.ಆರ್.ರಮೇಶ್ ಕುಮಾರ್ ಹೊಸಬರಾಗಿದ್ದರು. ಈ ಇಬ್ಬರು ಅಭ್ಯರ್ಥಿಗಳ ಬಗ್ಗೆ ಹಳೆ ಕ್ಷೇತ್ರದ ಜನರಿಂದ ಹಾಗೂ ಸ್ಥಳೀಯ ಮುಖಂಡರಿಂದ ತಿಳಿದುಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ಇಬ್ಬರು ಮುಖಂಡರೂ ಕ್ಷೇತ್ರದ ಜನರಿಗೆ ಪರಿಚಿತರಾಗಿದ್ದಾರೆ. ಯಾರು ಹೇಗೆ ಎಂಬ ಅರಿವು ಅವರಿಗಿದೆ.

ಈಗ ಇಲ್ಲಿನ ಮತದಾರರನ್ನು ಓಲೈಸುವುದು ಹಿಂದಿನಷ್ಟು ಸುಲಭವಲ್ಲ. ಹಿಂದೆ ಗೆದ್ದಿದ್ದವರು ಕ್ಷೇತ್ರಕ್ಕೆ ತಮ್ಮ ಕೊಡುಗೆ ಏನೆಂಬುದನ್ನು ಮತದಾರರಿಗೆ ತಿಳಿಸಬೇಕಾಗಿದೆ. ಸೋತಿದ್ದವರೂ ಸಹ ಕಳೆದ ಐದು ವರ್ಷಗಳ ಅವಧಿಯಲ್ಲಿ ಅಲ್ಲಿನ ಜನರೊಂದಿಗೆ ಇಟ್ಟುಕೊಂಡಿದ್ದ ಸಂಬಂಧ ಮತ್ತು ಸ್ಥಳೀಯ ಸಮಸ್ಯೆ ಬಗೆಹರಿಸಲು ಕೈಗೊಂಡ ಕ್ರಮ ಅಥವಾ ಮಾಡಿದ ಹೋರಾಟಗಳ ವಿವರ ನೀಡಬೇಕಾಗಿದೆ. ಮತದಾರ ಈ ಎರಡನ್ನೂ ಅಳೆದು, ತೂಗಿ ಮತ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಆದ್ದರಿಂದಲೇ ಇಲ್ಲಿನ ಮುಖಂಡರು ಮೊದಲು ಹೋಳೂರು ಹಾಗೂ ಸುಗಟೂರು ಹೋಬಳಿಗಳಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. ಅಬ್ಬರದ ಪ್ರಚಾರ ಇನ್ನೂ ಆರಂಭ ಆಗಿಲ್ಲವಾದರೂ, ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಸ್ಥಳೀಯ ಮುಖಂಡರು ಇದಕ್ಕೆ ಸಾಥ್ ನೀಡುತ್ತಿದ್ದಾರೆ.

ರಮೇಶ್ ಕುಮಾರ್ ಅವರಾಗಲಿ, ವೆಂಕಟಶಿವಾರೆಡ್ಡಿ ಅವರಾಗಲಿ ಎಂದೂ ಕೂಡ ಮುನಿಸಿಕೊಂಡು ತಮ್ಮನ್ನು ಬಿಟ್ಟುಹೋದ ಮುಖಂಡರ ಬಗ್ಗೆ ಗಮನ ಕೊಟ್ಟವರಲ್ಲ.

ಬಹುತೇಕ ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ಮುಖಂಡರಿಂದ ದೂರವಾಗುವ ವ್ಯಕ್ತಿಗಳ ಬಗ್ಗೆ ಒಂದು ಮತನ್ನೂ ಆಡದ ದೊಡ್ಡತನ ಇವರದು. ತಮ್ಮನ್ನು ಬಿಟ್ಟು ಹೋದವರು ಎಲ್ಲೇ ಇದ್ದರೂ ಕ್ಷೇಮವಾಗಿರಲಿ ಎಂದು ಹರಸುವುದು ಇವರಿಬ್ಬರ ದೊಡ್ಡ ನಡೆ.

ಹಾಗೆ ಹೋದವರು ಮತ್ತೆ ಮರಳಿ ಬಂದಾಗ ಕ್ಷಮಿಸಿ ಅದೇ ಪ್ರೀತಿಯಿಂದ ನಡೆಸಿಕೊಳ್ಳುವ ಜಾಣ್ಮೆಯೂ ಇವರಲ್ಲಿದೆ. ಹೋದವರನ್ನು ಏಕೆ ಹೋದಿರಿ ಎನ್ನದ ಇವರು, ಬಂದಾಗ ಏಕೆ ಬಂದಿರಿ ಎಂದು ಕೇಳುವುದಿಲ್ಲ. ಇದೂ ಸಹ ಇವರಿಬ್ಬರ ವಿಶೇಷ ಎಂದರೆ ತಪ್ಪಾಗಲಾರದು. ಆದರೆ ಈ ಬಾರಿ ಮಾತ್ರ ಹಿಂದೆ ಮುನಿಸಿಕೊಂಡು ಹೋಗಿದ್ದವರನ್ನು ಓಲೈಸಿ ಮತ್ತೆ ತಮ್ಮ ಕಡೆ ಕರೆದುಕೊಳ್ಳುವ ಪ್ರಯತ್ನಗಳು ಕೆಲವು ಕಡೆ ನಡೆಯುತ್ತಿರುವುದು ಹೊಸ ಬೆಳವಣಿಗೆ.

ಹೊಸ ಚಿಗುರು, ಹಳೆ ಬೇರು ಎಂಬ ಮಾತು ಈ ಕ್ಷೇತ್ರಕ್ಕೆ ಚೆನ್ನಾಗಿ ಹೋಲುತ್ತದೆ. ಕಾರಣ ಇಲ್ಲಿನ ಇಬ್ಬರು ಹಳೆ ಪ್ರಬಲ ನಾಯಕರ ಬೆನ್ನಹಿಂದೆ ನಿಂತಿರುವುದು ಯುವಕರ ಪಡೆ. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷದಲ್ಲಿ ಎರಡನೆ ಸಾಲಿನ ನಾಯಕರೆಂದು ಗುರುತಿಸಿಕೊಂಡವರಿಲ್ಲ. ರಮೇಶ್ ಕುಮಾರ್ ಹಾಗೂ ವೆಂಕಟಶಿವಾರೆಡ್ಡಿ ನಕ್ಷತ್ರಗಳಾದರೆ, ಉಳಿದ ನಾಯಕರು ಅವರ ಸುತ್ತ ತಿರುಗುವ ಗ್ರಹಗಳಷ್ಟೆ.

ಇವರಿಬ್ಬರಿಗಿಂತ ಹಿಂದಿನ ತಲೆಮಾರು, ಇವರ ತಲೆಮಾರು ಮತ್ತು ಕಿರಿಯ ತಲೆಮಾರು ಹೀಗೆ ಮೂರೂ ತಲೆಮಾರಿನವರು ಇವರಿಬ್ಬರ ಹಿಂಬಾಲಕರಾಗಿ ಉಳಿದಿದ್ದಾರೆ.

ಉಳಿದಿರುವ ಹಿರಿಯ ತಲೆಮಾರಿನ ಬೆಂಬಲಿಗರು ಸದ್ಯಕ್ಕೆ ಮಾರ್ಗದರ್ಶಕರಾಗಿ ಉಳಿದುಕೊಂಡಿದ್ದಾರೆ. ಎರಡನೇ ತಲೆಮಾರಿನ ಯುವಕರು ಚುನಾವಣೆ ಪ್ರಚಾರದ ಸಾರಥ್ಯ ವಹಿಸಿಕೊಂಡಿದಾರೆ.

ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಕಂಡುಬರದಿದ್ದರೂ, ನಿಧಾನವಾಗಿ ಚುನಾವಣೆ ಕಾವು ಆವರಿಸಿಕೊಳ್ಳುತ್ತಿದೆ. ನಾಮಪತ್ರ ಹಾಕುವುದರೊಂದಿಗೆ ಕ್ಷೇತ್ರ ಬಿಸಿಯೇರಲಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಚುರುಕಾಗಿದ್ದಾರೆ. ಯುವ ಮತದಾರರಿಗೆ ಮಣೆ ಹಾಕಲಾಗುತ್ತಿದೆ. ಸಾಂಪ್ರದಾಯಿಕ ಮತದಾರರನ್ನು ಸೆಳೆಯುವುದು ಸುಲಭದ ಮಾತಲ್ಲ. ಯುವ ಮತದಾರರು ಹಿರಿಯ ಮುಖಂಡರ ಮಾತಿಗೆ ಮನ್ನಣೆ ಕೊಡುವ ಬಗ್ಗೆ ಹೇಳಲಾಗದು. ಹಾಗಾಗಿ ಯುವ ಮುಖಂಡರು ಯುವ ಮತದಾರರಿಗೆ ಗಾಳ ಹಾಕುತ್ತಿದ್ದಾರೆ.

ಕ್ಷೇತ್ರದಲ್ಲಿನ ಈ ಇಬ್ಬರು ಮುಖಂಡರ ಪ್ರಖರ ಬೆಳಕಲ್ಲಿ ಇತರ ಅಭ್ಯರ್ಥಿಗಳು ಹೊಳೆಯುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣಾ ಪ್ರಚಾರ ತಕ್ಕಮಟ್ಟಿಗೆ ಆರಂಭವಾಗಿದೆ. ಆದರೆ ಬಿಜೆಪಿ ಸೇರಿದಂತೆ ಉಳಿದ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT