ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ ಬಂದ್: ಸಂಪೂರ್ಣ ಸ್ತಬ್ಧ

Last Updated 7 ಅಕ್ಟೋಬರ್ 2012, 6:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕಾವೇರಿ ನದಿಯಿಂದ ತಮಿಳು ನಾಡಿಗೆ ನೀರು ಬಿಡುಗಡೆಯನ್ನು ವಿರೋಧಿಸಿ ಕನ್ನಡ ಸಂಘಟನೆಗಳ ಒಕ್ಕೂಟ ನೀಡಿದ್ದ ಕರ್ನಾಟಕ ಬಂದ್ ಕರೆಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.

ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಚಿತ್ರ ಮಂದಿರಗಳು ಪ್ರದರ್ಶನ ರದ್ದುಪಡಿಸಿದ್ದವು. ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಕಡೆ ಸುಳಿಯಲಿಲ್ಲ. ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ, ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಸ್ ಸೇವೆ ಇತ್ತಾದರೂ, ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಶನಿವಾರ ಸಂತೆ ದಿನವಾದರೂ, ಬಂದ್ ಪ್ರಯುಕ್ತ ಸಂತೆ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಬಂದ್ ಮೂಡ್‌ನಲ್ಲಿದ್ದ ಗ್ರಾಹಕರು ಸಂತೆ ವ್ಯಾಪಾರಕ್ಕೆ ಇಳಿಯಲಿಲ್ಲ.

ಬಂದ್‌ಗೆ ಸಾಕಷ್ಟು ಬೆಂಬಲ ದೊರೆತರೂ, ಅದು ಸ್ವಯಂ ಪ್ರೇರಿತ ಬಂದ್ ಆಗಿತ್ತು. ಅಂಗಡಿ ಮುಚ್ಚುವಂತೆ ಯಾವ ಸಂಘಟನೆಯೂ ಒತ್ತಾಯಿಸಲಿಲ್ಲ. ಇಷ್ಟೆಲ್ಲದರ ನಡುವೆಯೂ ಒಡಕು ಧ್ವನಿಗಳು ಕೇಳಿಬರುತ್ತಿದ್ದವು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಕಾವೇರಿ ನದಿ ನೀರು ಬಳಕೆದಾರರು ಧ್ವನಿ ಎತ್ತಿಲ್ಲ. ಶಾಶ್ವತ ನೀರಾವರಿ ಯೊಜನೆಗೆ ಬೆಂಬಲ ವ್ಯಕ್ತಪಡಿಸಿಲ್ಲ. ಹಾಗಿರುವಾಗ ಕಾವೇರಿ ನದಿ ಪಾತ್ರದ ರೈತರ ಪರವಾಗಿ ನಾವೇಕೆ ಬಂದ್ ಮಾಡಬೇಕು ಎಂಬ ಮೂದಲಿಕೆ ಮಾತುಗಳು ಸಾಮಾನ್ಯವಾಗಿದ್ದವು.

ಆದರೂ ರಾಜ್ಯದ ರೈತರ ಹಿತ ಮುಖ್ಯ. ಅವರು ಕಷ್ಟದಲ್ಲಿದ್ದಾರೆ. ಅವರ ಹೋರಾಟಕ್ಕೆ ನಾವು ಬೆಂಬಲ ವ್ಯಕ್ತಪಡಿಸಬೇಕು. ಬೇಕಾದರೆ ನಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಅವರಲ್ಲಿ ಮನವಿ ಮಾಡೋಣ ಎನ್ನುವ ಸಾಂತ್ವನದ ಮಾತುಗಳಿಗೂ ಕೊರತೆ ಇರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT