ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ ಮಾವಿನ ಹೋಳು: ಭಾರಿ ಬೇಡಿಕೆ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಮಾವಿನ ತವರಾದ ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣ ಘಟಕವೊಂದನ್ನು ಸ್ಥಾಪಿಸುವಂತೆ ಮಾವು ಬೆಳೆಗಾರರು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಅದಿನ್ನೂ ಸಾಧ್ಯವಾಗಿಲ್ಲ. ಆದರೆ ಹಸಿ ಮಾವು ಕತ್ತರಿಸಿ ಹೋಳು ಮಾಡಿ ಉಪ್ಪಿನ ಕಾಯಿ ತಯಾರಿಕಾ ಕಂಪೆನಿಗಳಿಗೆ ರವಾನಿಸುವ ಘಟಕವೊಂದು ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಖಾಸಗಿ ಸಂಸ್ಥೆಯೊಂದು ವಿವಿಧ ಜಾತಿ ಮಾವು ಕತ್ತರಿಸಿ ಉಪ್ಪು ಬೆರೆಸಿ ಪಾಲಿಥಿನ್ ಚೀಲಗಳಿಗೆ ತುಂಬಿ ಹೊರ ರಾಜ್ಯಕ್ಕೆ ಸಾಗಿಸುವ ಕೆಲಸದಲ್ಲಿ ನಿರತವಾಗಿದೆ. ಸುಮಾರು 40 ಕಾರ್ಮಿಕರು ಈ ಕಾಯಕದಲ್ಲಿ ತೊಡಗಿದ್ದಾರೆ. ಇವರು ದಿನ ಒಂದಕ್ಕೆ ಸುಮಾರು 10 ಟನ್ ಮಾವಿನ ಕಾಯಿಯನ್ನು ಕತ್ತರಿಸಿ ಹೋಳು ಮಾಡುತ್ತಾರೆ. ಈ ಹೋಳನ್ನು ಉಪ್ಪಿನ ಕಾಯಿ ಮತ್ತಿತರ ತಿನಿಸುಗಳ ತಯಾರಿಕೆಗಾಗಿ ಗುಜರಾತ್‌ಗೆ ರವಾನಿಸುತ್ತಾರೆ.

ಇಂಥ ಉದ್ಯಮ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಿಂದಿನಿಂದಲೂ ಇದೆ. ಆದರೆ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಪ್ರಾರಂಭಿಸಲಾಗಿದೆ. ಇಲ್ಲಿನ ಮಟ್ಟಿಗೆ ಹೇಳಬೇಕೆಂದರೆ ಇದೊಂದು ಶುಭ ಸೂಚನೆ. ಮುಂದಿನ ವರ್ಷ ಇನ್ನೂ ಕೆಲವರು ಇಂಥದ್ದೇ ಪ್ರಯತ್ನ ಮಾಡುವ ನಿರೀಕ್ಷೆ ಇದೆ. ಮಾವಿನಕಾಯಿಗೆ ಬೆಲೆ ಹಾಗೂ ಬೇಡಿಕೆ ಕುಸಿತದಿಂದ ಬೇಸತ್ತಿರುವ ಬೆಳೆಗಾರರಿಗೆ ಇದು ವರದಾನವಾಗಬಲ್ಲದು.

ಅಸ್ಸಾಂನ ಕೆಲಸಗಾರರು ಮಾವು ಕತ್ತರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸ್ಥಳೀಯರಿಗೆ ತರಬೇತಿ ನೀಡಿದಲ್ಲಿ ಸದಾ ಬರದ ದವಡೆಯಲ್ಲಿ ನರಳುವ ಕೆಲವರಿಗಾದರೂ ಅರೆಕಾಲಿಕ ಉದ್ಯೋಗ ದೊರೆತಂತಾಗುತ್ತದೆ. ಕೃಷಿ ಮಾರುಕಟ್ಟೆ ಸಮಿತಿ, ತೋಟಗಾರಿಕೆ ಇಲಾಖೆ ಅಥವಾ ಹಾಪ್‌ಕಾಮ್ಸ ಈ ಕೆಲಸ ಮಾಡಬಹುದು.

ಬೇಡಿಕೆ ಕುದುರಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಉದ್ಯಮ ಸ್ಥಾಪಿಸಿದರೆ ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸಬಹುದು. ಮತ್ತು ಬೇರೆ ಬೇರೆ ಕಾರಣಗಳಿಂದ ನಷ್ಟ ಅನುಭವಿಸುತ್ತಿರುವ ಮಾವು ಬೆಳೆಗಾರರಿಗೆ ತಮ್ಮ ಉತ್ಪನ್ನವನ್ನು ಸ್ಥಳೀಯವಾಗಿ ಮಾರಿಕೊಳ್ಳಲು ಒಂದು ಅವಕಾಶ ಕಲ್ಪಿಸಿದಂತಾಗುತ್ತದೆ ಎನ್ನುತ್ತಾರೆ ರೈತರು.

ಇನ್ನೊಂದು ವಿಶೇಷವೆಂದರೆ ಈ ವರ್ಷ ಮಾವಿನ ಉಪ್ಪು ಹೋಳು ತಯಾರಿಕೆ ಅಲ್ಲಲ್ಲಿ ಗೃಹ ಕೈಗಾರಿಕೆಯಂತೆ ನಡೆಯುತ್ತಿದೆ. ಮಾವಿನ ಮಂಡಿಗಳಲ್ಲಿ ಗ್ರೇಡಿಂಗ್ ಮಾಡುವಾಗ ಕೀಲು ಕಾಯಿ (ಕಡಿಮೆ ಗುಣಮಟ್ಟದ ಕಾಯಿ) ತೆಗೆಯಲಾಗುತ್ತದೆ. ಹಾಗೆ ತೆಗೆದ ಕಾಯಿಯನ್ನು ಒಂದು ಕಡೆ ರಾಶಿ ಹಾಕಿ ಕೇಳಿದವರಿಗೆ ಕಡಿಮೆ ಬೆಲೆಗೆ ಮಾರಲಾಗುತ್ತದೆ. ಅಂಥ ಕಾಯಿಯನ್ನು ಖರೀದಿಸಿ ಹೋಳು ಮಾಡಿ ಉಪ್ಪುಬೆರೆಸಿ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಮಾರಾಟ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಈ ಉದ್ದೇಶಕ್ಕೆ ತೋತಾಪುರಿ ಜಾತಿ ಮಾವನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ತೋತಾಪುರಿ ಮಾವಿಗೆ ಕಪ್ಪು ಮಚ್ಚೆ ರೋಗ ಕಾಣಿಸಿಕೊಂಡು ಬಹಳಷ್ಟು ಕಾಯಿ ತೋಟಗಳಲ್ಲಿ ಕೊಳೆಯುವಂತಾಯಿತು. ಕಾಯಿ ಕೀಳುವಾಗ ಅಂತಹ ಕಾಯಿಯನ್ನು ಪುಕ್ಕಟೆಯಾಗಿ ಆರಿಸಿಕೊಂಡು ಹೋಳು ಮಾಡಿ ಒಣಗಿಸಿ ಮಾರಲಾಗುತ್ತಿದೆ.

ಬೆಂಗಳೂರಿನ ವ್ಯಾಪಾರಿಗಳು ಈ ಒಣಗಿದ ಹೋಳು ಖರೀದಿಸಿ ಕೊಂಡೊಯ್ಯುತ್ತಾರೆ. ಇಲ್ಲಿ ಅದರ ಬೆಲೆ ಕೆ.ಜಿ.ಯೊಂದಕ್ಕೆ ರೂ 50ರಿಂದ 60 ಇದೆ. ಅದನ್ನು ಸಂಸ್ಕರಿಸಿ ವಿಶಿಷ್ಟವಾದ ತಿನಿಸು ತಯಾರಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಕಷ್ಟಪಟ್ಟು ಹೋಳು ಮಾಡಿ ಒಣಗಿಸಿ ಕೊಟ್ಟವರಿಗೆ ಸಿಗುವುದು ಅಷ್ಟಕ್ಕಷ್ಟೆ. ಮಧ್ಯವರ್ತಿಗಳಿಗೆ ಒಳ್ಳೆ ಲಾಭ ಸಿಗುತ್ತದೆ ಎಂಬುದು ಮಾವು ಹೋಳು ಮಾಡುವ ಪನಸಮಾಕನಹಳ್ಳಿ ಗ್ರಾಮದ ಕೃಷ್ಣಪ್ಪ ಅವರ ಅಭಿಪ್ರಾಯ.

ಈ ರೀತಿ ಮಾವು ಸಂಸ್ಕರಣೆ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡಿದ್ದರೂ ಮುಂದಿನ ವರ್ಷ ಇನ್ನಷ್ಟು ವಿಸ್ತಾರಗೊಳ್ಳುವ ಸೂಚನೆ ಕಂಡುಬರುತ್ತಿದೆ. ಇದಕ್ಕೆ ಸರ್ಕಾರ ಸಹಕಾರ ನೀಡಿದರೆ ಮಾವು ಬೆಳೆಗಾರರಿಗೆ ಸಹಕಾರಿಯಾಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT