ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಹುಣಸೆ ಸುಗ್ಗಿ ಆರಂಭ

Last Updated 15 ಫೆಬ್ರುವರಿ 2012, 10:20 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹುಣಸೆ ಕಾಯಿ ಕೊಯ್ಯುವ ಕಾರ್ಯ ಆರಂಭಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಒಂಟಿಯಾಗಿ ಮತ್ತು ಒಟ್ಟಾಗಿ ಬೆಳೆಸಲಾಗಿರುವ ಹುಣಸೆ ಮರಗಳಲ್ಲಿ ಕಾಯಿ ಹಣ್ಣಾಗಿದ್ದು, ಉದುರಿಸಿ ಆದು ಮೂಟೆಗಳಿಗೆ ತುಂಬಿ ಕೊಂಡೊಯ್ದು ಬಯಲಲ್ಲಿ ಹಾಕಿ ಒಣಗಿಸಲಾಗುತ್ತಿದೆ.

ತಾಲ್ಲೂಕಿನಾದ್ಯಂತ ಏಕ ಕಾಲದಲ್ಲಿ ಹುಣಸೆ ಕಾಯಿ ಕೊಯ್ಯುವ ಕೆಲಸ ನಡೆಯುತ್ತಿರುವುದರಿಂದ ಕೃಷಿ ಕಾರ್ಮಿಕರ ಕೊರತೆ ಉಂಟಾಗಿದೆ.

ಹಿಂದೆ ಹುಣಸೆ ಕಾಯಿ ಕೊಯಿಲು ಮಾಡುವುದರಲ್ಲಿ ಪಳಗಿದ ವ್ಯಕ್ತಿಗಳು ಇದ್ದರು. ಆದರೆ ಈಗ ಮರ ಹತ್ತುವುದೆಂದರೆ ಮಾರು ದೂರ ನಿಲ್ಲುವರೇ ಹೆಚ್ಚು. ಆದ್ದರಿಂದ ಮರ ಹತ್ತಿ ಕಾಯಿ ಕೊಯ್ಯಲು ಮುಂದೆ ಬರುವ ಕಾರ್ಮಿಕರಿಗೆ ದಿನವೊಂದಕ್ಕೆ ರೂ.260 ರಿಂದ 300 ಕೂಲಿ ಕೊಡಬೇಕಾಗಿ ಬಂದಿದೆ. ಇನ್ನು ಕೊಯ್ದು ಕಾಯಿಯನ್ನು ಆದು ಮೂಟೆಗಳಿಗೆ ತುಂಬುವ ಮಹಿಳೆಯರ ಕೂಲಿ ರೂ.100ನ್ನು ದಾಟಿದೆ.

ಹುಣಸೆ ಕಾಯಿ ಕೊಯಿಲಿಗೆ ಸ್ಥಳೀಯರು ಹಿಂದೇಟು ಹಾಕುತ್ತಿರುವುದರಿಂದ ಕೆಲವು ರೈತರು ಮತ್ತು ವ್ಯಾಪಾರಸ್ಥರು ಪಕ್ಕದ ಆಂಧ್ರಪ್ರದೇಶದಿಂದ ನುರಿತ ಕೃಷಿ ಕಾರ್ಮಿಕರನ್ನು ಕರೆಸಿ ಹುಣಸೆ ಕಾಯಿ ಕೊಯ್ಯಿಸುತ್ತಿದ್ದಾರೆ. ಅವರ ಊಟ ವಸತಿ ಸೇರಿದರೆ ಕೂಲಿ ದುಬಾರಿಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಹುಣಸೆ ಕಾಯಿ ಉದುರಿಸಿದ ಮಾತ್ರಕ್ಕೆ ಕೆಲಸ ಮುಗಿಯುವುದಿಲ್ಲ. ಅದನ್ನು ಬಯಲಿನಲ್ಲಿ ಹಾಕಿ ಒಣಗಿಸಿ ಹೊಟ್ಟು ಬಿಡಿಸಬೇಕು. ನಾರು ತೆಗೆಯಬೇಕು. ಹಣ್ಣು ಮಾಡಬೇಕು. ಮಂಡಿಗೆ ಹಾಕಿ ತುಳಿದು ಸಂಗ್ರಹಿಸಬೇಕು. ಇಷ್ಟೆಲ್ಲ ಮಾಡಬೇಕಾದರೆ ಹೆಚ್ಚಿನ ಸಂಖ್ಯೆಯ ಕೃಷಿ ಕಾರ್ಮಿಕರ ಅಗತ್ಯವಿದೆ. ಆದರೆ ಕೊರತೆ ಕಾಡುತ್ತಿದೆ.

ಈ ಕಾರಣದಿಂದಲೇ ಈ ಹಿಂದೆ ಹೆಚ್ಚಿನ ಸಂಖ್ಯೆಯ ರೈತರು ಹುಣಸೆ ಮರಗಳಿಗೆ ಕೊಡಲಿ ಹಾಕಿದರು. ಹುಣಸೆ ಹಣ್ಣಿಗೆ ಉಂಟಾಗಿದ್ದ ಬೆಲೆ ಕುಸಿತವೂ ಇದಕ್ಕೆ ಕಾರಣವಾಗಿತ್ತು. ಆದರೆ ಈಗ ಒಳ್ಳೆ ಬೆಲೆ ಇದೆ. ಕೊಯಿಲಿಗೆ ಆಳು ಸಿಗುತ್ತಿಲ್ಲ.

ತಾಲ್ಲೂಕಿನಲ್ಲಿ ಹುಣಸೆ ಕಾಯಿ ಕೊಯಿಲಿಗೂ ಜನಪದಕ್ಕೂ ತೀರದ ನಂಟಿತ್ತು. ಮರ ಹತ್ತಿ ಹುಣಸೆ ಕಾಯಿ ಕೊಯ್ಯುವವರು ಯಾಲ ಪದ ಹಾಡುತ್ತಿದ್ದರು. ಏರಿದ ಧ್ವನಿಯಲ್ಲಿ ರಾಗಬದ್ಧವಾಗಿ ಹಾಡುತ್ತಿದ್ದ ಆ ಹಾಡುಗಳು ಬಹು ದೂರದವರೆಗೆ ಕೇಳಿಸುತ್ತಿದ್ದವು. ಆದರೆ ಈಗ ಅದು ಇತಿಹಾಸವಾಗಿದೆ. ಯಾಲಪದ ಹಾಡುವವರೇ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT