ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಹೂ ಬಿಟ್ಟ ಹುಳಿಮಾವಿನ ಮರ

Last Updated 10 ಫೆಬ್ರುವರಿ 2012, 8:35 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬಾನೆತ್ತರ ಬೆಳೆದಿರುವ ಹುಳಿಮಾವಿನ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ. ಮರಗಳು ದಟ್ಟವಾಗಿ ಮುಡಿಗೇರಿಸಿಕೊಂಡಿರುವ ಹೂವಿನ ಸುವಾಸನೆ ಗಾಳಿಯಲ್ಲಿ ತೇಲಿಬಂದು ಮನಸ್ಸಿಗೆ ಮುದ ನೀಡುತ್ತಿದೆ.

ಹೌದು, ತಾಲ್ಲೂಕಿನ ಕೆಲವು ಕಡೆಗಳಲ್ಲಿ ಶತಮಾನದಷ್ಟು ಹಳೆಯದಾದ ಹುಳಿಮಾವಿನ ಮರಗಳು ಇನ್ನೂ ಜೀವಂತವಾಗಿವೆ. ಮುಖ್ಯವಾಗಿ ರಸ್ತೆ ಬದಿ ಹಾಗೂ ಅಳಿದುಳಿದ ಗುಂಡುತೋಪುಗಳಲ್ಲಿ ಭಾರಿ ಗಾತ್ರದ ಈ ಮರಗಳು ಮನುಷ್ಯ ಸುಲಭವಾಗಿ ಹತ್ತಲು ಆಗದಷ್ಟು ಎತ್ತರಕ್ಕೆ ಬೆಳೆದು ನಿಂತಿವೆ. ಈಗ ರೆಂಬೆ-ಕೊಂಬೆಗಳಲ್ಲಿ ಹೂವುಗಳನ್ನು ಸಿಂಗರಿಸಿಕೊಂಡು ನೋಡುಗರ ಗಮನ ಸೆಳೆದಿವೆ.

ಹುಳಿಮಾವಿನ ಮರಗಳನ್ನು ಸ್ಥಳೀಯವಾಗಿ `ನಾಟಿ ಮಾವಿನ ಮರ~ ಎಂದು ಕರೆಯುವುದು ರೂಢಿ. ಹಿರಿಯರು ತಮಗೆ ಅಗತ್ಯ ಎನಿಸಿದಲ್ಲಿ ಮಾವಿನ ಬೀಜ ನಾಟಿ ಮಾಡಿ ಬೆಳೆಸಿದ್ದಾರೆ. ಹೆಚ್ಚಾಗಿ ರಸ್ತೆ ಬದಿಗಳಲ್ಲಿ ಬೆಳೆಸಲಾಗಿದ್ದ ಈ ಮರಗಳು ದಾರಿಹೋಕರಿಗೆ ನೆರಳನ್ನು ಕೊಡುತ್ತಿದ್ದವು ಮತ್ತು ಹುಳಿ-ಸಿಹಿಯಾದ ಮಾವನ್ನು ಕೊಡುತ್ತಿದ್ದವು. ಜನರ ಜೊತೆಗೆ ಪ್ರಾಣಿ -ಪಕ್ಷಿಗಳೂ ಈ ಹಣ್ಣನ್ನು ತಿನ್ನುತ್ತಿದ್ದವು.

ಸುಧಾರಿತ ತಳಿ ಮಾವಿನ ಸಸಿಗಳು ಬಂದ ಮೇಲೆ ನಾಟಿ ಮಾವನ್ನು ನಿರ್ಲಕ್ಷಿಸಲಾಯಿತು. ಉಪ್ಪಿನ ಕಾಯಿಗೆ ಹೇಳಿ ಮಾಡಿಸಿದಂತಹ ತಳಿ ನಾಟಿ ಮಾವು. ಆದರೆ ಇಂದಿನ ಪೀಳಿಗೆಗೆ ಅದರ ಮಹತ್ವದ ಅರಿವಿಲ್ಲ. ಹಾಗಾಗಿ ಈ ಮರಗಳಲ್ಲಿ ಬಂದ ಫಸಲು ಕೋತಿ, ಅಳಿಲು, ಬಾವಲಿಗಳ ಪಾಲಾಗುತ್ತಿದೆ.

ವಿಶೇಷ ಎಂದರೆ ಈ ಮರಗಳಿಗೆ ಯಾವುದೇ ಆರೈಕೆ ಇಲ್ಲದಿದ್ದರೂ ಆರೋಗ್ಯವಾಗಿವೆ. ಈ ಮರಗಳು ಪ್ರತಿ ವರ್ಷ ತಪ್ಪದೆ ಹೂಬಿಟ್ಟು ಫಸಲಿಗೆ ಬರುತ್ತವೆ. ಆದರೆ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಬೆಳೆಯಲಾಗಿರುವ ಸುಧಾರಿತ ತಳಿಯ ಮಾವಿನ ಮರಗಳು ವರ್ಷ ಬಿಟ್ಟು ವರ್ಷ ಫಸಲು ಕೊಡುವುದು ಸಾಮಾನ್ಯವಾಗುತ್ತಿದೆ.

ಹೂವಿನ ಸಂರಕ್ಷಣೆಗೆ ಏನೆಲ್ಲ ಕ್ರಮ ಕೈಗೊಂಡರೂ ಹೂ ರೋಗಪೀಡಿತವಾಗಿ ಹಾಳಾಗುವುದು ಈಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಆದರೆ ಹುಳಿಮಾವಿನ ಮರಕ್ಕೆ ರೋಗ ನಿರೋಧಕ ಶಕ್ತಿ ನೈಸರ್ಗಿಕವಾಗಿ ಬಂದಿದೆ.

ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲೂ ಕಂಡುಬರುತ್ತಿದ್ದ ಹುಳಿಮಾವಿನ ಮರಗಳು ಇಂದು ಅಪರೂಪವಾಗುತ್ತಿವೆ. ಸುಧಾರಿತ ತಳಿಯ ಮಾವಿನ ಮರಗಳನ್ನು ಬೆಳೆಸಿದ ನಂತರ ಹುಳಿಮಾವಿನ ಮರಗಳ ಬುಡಕ್ಕೆ ಕೊಡಲಿ ಹಾಕಲಾಯಿತು.

ರಸ್ತೆ ಬದಿಯಲ್ಲಿನ ಮರಗಳೂ ಸಾಮಿಲ್ ಸೇರಿದವು. ಹಲಗೆಯಾಗಿ, ತೊಲೆಯಾಗಿ ಒಟ್ಟಾರೆ ಜನರ ತಲೆಗೆ ಸೂರಾಗಿ ಉಳಿದವು. ಇನ್ನೂ ಜೀವಂತವಾಗಿರುವ ಮರಗಳು ಮಾತ್ರ ಪ್ರತಿ ವರ್ಷ ತಪ್ಪದೆ ಫಸಲನ್ನು ಕೊಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT