ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತ ಸಂಸ್ಕೃತಿಯ ಆಕರ್ಷಕ ಪ್ರದರ್ಶನ

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಂಸ್ಕೃತಿ ಎಂದರೆ ಅದು ಒಂದು ಪ್ರದೇಶದ ಆಚಾರ -ವಿಚಾರ, ನಡೆನುಡಿ, ಹಾಡು, ನೃತ್ಯ, ಉಡುಗೆ ಇವುಗಳೆಲ್ಲದರ ಸಮ್ಮಿಶ್ರಣ. ಅದು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ.

ತಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಎಲ್ಲೆಡೆ ಪ್ರತಿಬಿಂಬಿಸುವ ಇಚ್ಛೆ ಯಾರಿಗಿಲ್ಲ? ಈ ಹಿನ್ನೆಲೆಯಲ್ಲಿ ತಾಂಜಾನಿಯಾದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ‘ತಾಂಜಾನಿಯಾ ಸಾಂಸ್ಕೃತಿಕ ಪ್ರದರ್ಶನ’ ಇತ್ತೀಚೆಗೆ ಬೆಂಗಳೂರಿನ ಆಚಾರ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನಲ್ಲಿ ಇತ್ತೀಚೆಗೆ ನಡೆಯಿತು.

ಇತರ ದೇಶಗಳಂತೆಯೇ ಶ್ರೀಮಂತವಾದ ತಾಂಜಾನಿಯಾದ ಸಂಸ್ಕೃತಿಯ ಸಂಪೂರ್ಣ ಚಿತ್ರಣವನ್ನು ಬೆಂಗಳೂರಿನ ಜನರಿಗೆ ಪರಿಚಯಿಸುವ ಸಲುವಾಗಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಚಾರ್ಯ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಭಾರೀ ಹುಮ್ಮಸ್ಸಿನಿಂದ ಇದರಲ್ಲಿ ಭಾಗವಹಿಸಿದರಲ್ಲದೆ ಅಲ್ಲಿನ ಸಾಂಪ್ರದಾಯಿಕ ಸಂಗೀತ, ನೃತ್ಯ ಮತ್ತು ಆಹಾರದ  ಸವಿಯನ್ನು ಸವಿದರು.

ಪೂರ್ವ ಆಫ್ರಿಕಾದ ರಾಷ್ಟ್ರವಾಗಿರುವ ತಾಂಜಾನಿಯಾದ ಸುಮಾರು 70 ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಕಾಲೇಜು ಮತ್ತು ಸಹ ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದುವ ಸಲುವಾಗಿ ಆರು ವರ್ಷಗಳ ಹಿಂದೆ ‘ಆಚಾರ್ಯದ ತಾಂಜಾನಿಯಾ ವಿದ್ಯಾರ್ಥಿಗಳ ಸಂಘಟನೆ’ (ಟಿಎಎಸ್‌ಎಎ) ಎಂಬ ಸಂಘಟನೆಯನ್ನು ವಿದ್ಯಾರ್ಥಿಗಳು ಹುಟ್ಟುಹಾಕಿದ್ದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಗೆಡಹುವಲ್ಲಿ ಈ ಸಂಘಟನೆ ಅವಿರತ ಶ್ರಮ ನಡೆಸುತ್ತಿದೆ.

ಈ ಪ್ರದರ್ಶನದಲ್ಲಿ ತಾಂಜಾನಿಯಾದ ಚರಿತ್ರೆ, ಪರಂಪರೆ, ಆರ್ಥಿಕ ಪರಿಸ್ಥಿತಿ... ಹೀಗೆ ಎಲ್ಲದರ ಮಾಹಿತಿ ಲಭ್ಯವಾಗಿತ್ತು. ‘ನಮ್ಮ ರಾಷ್ಟ್ರಧ್ವಜದಿಂದಲೇ ಪ್ರದರ್ಶನವನ್ನು ಆರಂಭಿಸಲಾಗಿದ್ದು, ಅದರಲ್ಲಿರುವ ನಾಲ್ಕು ಬಣ್ಣದ ಮಹತ್ವವನ್ನು ವಿವರಿಸಿದ್ದೆವು. ಚಿತ್ರಗಳೇ ಎಲ್ಲವನ್ನೂ ವಿವರಿಸುವುದರಿಂದ ದೇಶದ ಬಗೆಗಿನ ಹಲವು ಚಿತ್ರಗಳನ್ನು ಸಂಗ್ರಹಿಸಿ ಅದನ್ನು ಕ್ರಮವಾಗಿ ಜೋಡಿಸಿದೆವು. ಚಿತ್ರದ ಕೆಳಗೆ ಇನ್ನುಳಿದ ಮಾಹಿತಿಯನ್ನು ನೀಡಿದೆವು’ ಎಂದು ಸಂಘಟನೆಯ ಅಧ್ಯಕ್ಷರು ಹಾಗೂ ಬಿಬಿಎಂ ಮೂರನೇ ವರ್ಷ ವಿದ್ಯಾರ್ಥಿ ಹಮೀಸಿ ಎಸ್. ಫುಪಿ ತಿಳಿಸಿದರು.

ಬಿಬಿಎಂ ಮೊದಲ ವರ್ಷದ ವಿದ್ಯಾರ್ಥಿ ಗಾವ್ ತನ್ನ ಸ್ನೇಹಿತರ ಜತೆಗೂಡಿ ಸಾಂಪ್ರದಾಯಿಕ ನೃತ್ಯವಾದ ‘ಮಗೋಮಾ ಅಸಿಲಿ’ ಪ್ರದರ್ಶಿಸಿದರು. ಬಿಕಾಂ ಎರಡನೇ ವರ್ಷದ ಅಬಾಫಿ ಗುಲಾಮು ಮತ್ತು ಪಿಯುಸಿಯ ಜೆನ್ನಿಫರ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

‘ನಾವಿಲ್ಲಿ ಪ್ರದರ್ಶಿಸಿದ ನೃತ್ಯದ ಬಗ್ಗೆ ನಮಗೆ ಅಷ್ಟೇನೂ ಮಾಹಿತಿ ಇರಲಿಲ್ಲ, ಕಾರ್ಯಕ್ರಮಕ್ಕೆ ಹಲವು ದಿನಗಳ ಮೊದಲೇ ನಾವೆಲ್ಲ ಒಟ್ಟು ಸೇರಿ ಕುಳಿತು ಅವುಗಳನ್ನು ಕಲಿತ ಬಳಿಕವೇ ಪ್ರದರ್ಶನ ನೀಡಿದೆವು. ಭಾರತದಲ್ಲಿನ ತಾಂಜಾನಿಯಾ ರಾಯಭಾರ ಕಚೇರಿ ನಮಗೆ ಸಾಕಷ್ಟು ನೆರವು ನೀಡಿತ್ತು. ಕೆಲವು ಅಪೂರ್ವ ನಿಯತಕಾಲಿಕೆಗಳಾದ ‘ತಾಂಜಾನಿಯಾ ಫೋಕಸ್’. ‘ತಾಂಜಾನಿಯಾ: ಅಥೆಂಟಿಕ್ ಆಫ್ರಿಕಾ’ ಮುಂತಾದವುಗಳನ್ನು ಅಲ್ಲಿಂದ ಸಂಗ್ರಹಿಸಿ ನಾವು ಎಲ್ಲರಿಗೂ ಹಂಚಿದ್ದಲ್ಲದೆ ಪ್ರದರ್ಶನದಲ್ಲೂ ಇಟ್ಟೆವು’ ಹಮೀಸಿ ಹೇಳಿದರು.

‘ಈ ಪ್ರದರ್ಶನದಿಂದಾಗಿ ತಾಂಜಾನಿಯಾದ ಬಗ್ಗೆ ಹಲವು ಮಾಹಿತಿಗಳು ದೊರೆತವು. ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಅಲ್ಲಿನ ಅಭಯಾರಣ್ಯಗಳನ್ನು ನೋಡಿದ ಬಳಿಕವಂತೂ  ಅಲ್ಲಿಗೆ ಭೇಟಿ ನೀಡುವ ಮನಸ್ಸಾಗಿದೆ. ಅಲ್ಲಿನ ದಟ್ಟ ಅರಣ್ಯಗಳ ಮೂಲಕ ನಡೆದುಕೊಂಡು ಹೋಗುವುದೇ ಥ್ರಿಲ್ ಕೊಡುವ ವಿಷಯ.

ತಮ್ಮ ಶ್ರೀಮಂತ ಸಂಸ್ಕೃತಿಯನ್ನು ಈ ವಿದ್ಯಾರ್ಥಿಗಳು ಪ್ರದರ್ಶಿಸಿದ ರೀತಿ ಭಾರೀ ಖುಷಿ ನೀಡಿತು. ಇದು ತಮ್ಮ ರಾಷ್ಟ್ರದ ಬಗೆಗೆ ಅವರಿಗಿರುವ ಹೆಮ್ಮೆಯನ್ನು ಪ್ರದರ್ಶಿಸುತ್ತದೆ ಎಂದು ವಿದ್ಯಾರ್ಥಿನಿ ವಂದಿತಾ ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ ತಾಂಜಾನಿಯಾದ ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸಿದ್ದಕ್ಕೆ ಅಲ್ಲಿನ ವಿದ್ಯಾರ್ಥಿಗಳಲ್ಲಿ ಧನ್ಯತಾ ಭಾವ ಮೂಡಿದ್ದರೆ ಅದನ್ನು ಸವಿದ ಉಳಿದ ವಿದ್ಯಾರ್ಥಿಗಳ ಮುಖದಲ್ಲಿ ಏನೋ ಹೊಸದನ್ನು ಅರಿತ ಸಂತೃಪ್ತಿ ಕಂಡುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT