ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮದ್ವಾಲ್ಮೀಕಿ ರಾಮಾಯಣದ ಮಡಿಪೆಟ್ಟಿಗೆಯೊಳಗೆ...!

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ಎಷ್ಟೋ ಕಾಲದ ನಂತರ ಶ್ರೀ ಮದ್ವಾಲ್ಮೀಕಿ ರಾಮಾಯಣವನ್ನು ಮತ್ತೆ ಇಡಿಯಾಗಿ ಓದಿದಾಗ ಆಶ್ಚರ್ಯದ ಸಂಗತಿಯೊಂದು ಕಾಣಿಸಿಕೊಂಡಿತು. ಆಶ್ಚರ್ಯದ ಜೊತೆಯಲ್ಲಿ ವಾಲ್ಮೀಕಿಯ ಶ್ರೀರಾಮ `ಪಾನಕ, ಪನಿವಾರ, ಕೋಸಂಬರಿ; ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ~ಗಳ ಶ್ರೀರಾಮನಾಗಿ ಪರಿವರ್ತಿತವಾಗಿದ್ದು, ಮೂಲ ಚಿತ್ರಪಲ್ಲಟವಾದದ್ದು, ಯಾವಾಗ, ಯಾರ ಕಾಲದಲ್ಲಿ, ಯಾವ ಬಲಿಷ್ಠ ಜೈನ, ವೈದಿಕ ಬ್ರಾಹ್ಮಣ ಸಂಪ್ರದಾಯದ ಹೊರೆಯ ಭಾರದಲ್ಲಿ ಎನ್ನುವ ಪ್ರಶ್ನೆ ಕಾಡತೊಡಗಿತು.

ಏಕೆಂದರೆ ವಾಲ್ಮೀಕಿಯ ಶ್ರೀರಾಮ ಆಹಾರ ವಿಹಾರಗಳಲ್ಲಿ ಬ್ರಾಹ್ಮಣ ಆಹಾರ ವಿಹಾರಗಳಿಂದ ಅತ್ಯಂತ ಭಿನ್ನನಾದವನು, ಭಿನ್ನ ಪ್ರಕೃತಿಯವನು. `ವೇದೋಪನಿಷದಗಳ ಭೂತಗನ್ನಡಿಯೊಳಗೆ ಪಡಿಮೂಡಿದಾಕೃತಿಗೆ~ ತಾನೆ ಮುಗ್ಧನಾದವನಲ್ಲ. ಇವೊತ್ತು ನಮಗೆ ಸಾಂಸ್ಕೃತಿಕವಾಗಿ ಯಾವ ಆಹಾರ ಬಳಕೆಯ ಬಗ್ಗೆ ಸಂಕೋಚ, ದಾಕ್ಷಿಣ್ಯಗಳಿವೆಯೋ ಅವಕ್ಕೆ ಹೊರತಾದವನು. ಅಷ್ಟೇ ಅಲ್ಲ ಇವು ಸ್ವಾಭಾವಿಕ ಎಂದೇ ತಿಳಿದವನು ಭಾಷ್ಯಕ್ಕಿಂತ ಮೂಲ ಪಠ್ಯ ಹೇಗೆ ಸ್ವೀಕಾರಾರ್ಹವೋ ಹಾಗೆ ವಿವರಣೆಗಳಿಗಿಂತ ಉದಾಹರಣೆಗಳೇ ಹೆಚ್ಚು ವಿಶ್ವಾಸಾರ್ಹ. ಹಾಗಾಗಿ ಇಲ್ಲಿ ಮೂಲ ಪಾಠದ ವಿವರವನ್ನೇ ಮೊದಲು ಕೊಡುತ್ತೇನೆ.

ಅಯೋಧ್ಯಾಕಾಂಡದಲ್ಲಿ, ಗುಹನ ಭೇಟಿ ನಂತರ, ಅರಣ್ಯಾಭಿಮುಖವಾಗಿ ಗಂಗಾನದಿಯನ್ನು ದಾಟಿ ಹೋಗಬೇಕಾದ ಸೀತೆ ಈ ಪ್ರಾರ್ಥನೆ ಸಲ್ಲಿಸುತ್ತಾಳೆ.

ಸುರಾಘಟಸ್ರೇಣ ಮಾಂಸಭೂತೌದನೇನ ಚ/
ಯಕ್ಷ್ಯೇ ತ್ವಾಂ ಪ್ರಯತಾ ದೇವಿ ಪುರೀಂ ಪುನರುಪಾಗತಾ//
(ಅಯೋಧ್ಯಾಕಾಂಡ, ಸರ್ಗ 52, ಶ್ಲೋಕ 89, ಪುಟ 406)

“ದೇವಿ, ನಾನು ಅಯೋಧ್ಯೆಗೆ ಬಂದ ಮೇಲೆ ವ್ರತನಿಷ್ಠಳಾಗಿ ಒಂದು ಸಾವಿರ ಮದ್ಯ ಕಲಸಗಳನ್ನರ್ಪಿಸಿ ಮಾಂಸದಿಂದ ನಿನಗೆ ಮಹಾಬಲಿಯನ್ನು ಸಮರ್ಪಿಸುವೆನು”
ಮದ್ಯ, ಮಾಂಸಗಳ ನೈವೇದ್ಯ, ಅದೂ ಸೀತೆಯಿಂದ ಎನ್ನುವುದು ಇವೊತ್ತಿಗೆ ಅಸ್ವಾಭಾವಿಕ ಎನ್ನಿಸುತ್ತದೆ. ಇಂಥ ನೈವೇದ್ಯ ಪದ್ಧತಿ ಮೇಲುಜಾತಿಗಳು ಎನ್ನಿಸಿಕೊಂಡಿರುವವರಲ್ಲಿ ಇಂದು ಇಲ್ಲ.

ಗಂಗೆಯನ್ನು ದಾಟಿ ರಾಮಲಕ್ಷಣ ಸೀತೆಯರು ವತ್ಸ ದೇಶಕ್ಕೆ ಬಂದಾಗ ಅವರಿಗೆ ಹಸಿವಾಗಿ ಆಹಾರ ಬೇಕು ಅನ್ನಿಸಿತು. ಆಗ:

ತೌ ತತ್ರ ಹತ್ವಾ ಚತುರೋ ಮಹಾಮೃಗಾನ್
ವರಹಾಮೃಶ್ಯಂ ಪೃಷತಂ ಮಹಾರುರುಮ್/
ಆದಾಯ ಮೇಧ್ಯಂ ತ್ವರಿತಂ ಭುಭಕ್ಷಿತೌ
ವಾಸಾಯ ಕಾಲೇ ಯಯತುರ್ವನಸ್ಪತಿ ಮ್//
(ಅದೇ ಭಾಗ, ಸರ್ಗ 52 ಶ್ಲೋಕ 102, ಪುಟ 408)

“ಆಗ ರಾಮಲಕ್ಷ್ಮಣರು ಒಂದು ವರಾಹವನ್ನೂ ರಷ್ಯ ಪೃಷತ ಮಹಾರುರು ಎಂಬ ಜಿಂಕೆಯ ಜಾತಿಗಳಲ್ಲಿ ಒಂದೊಂದನ್ನೂ ಸಂಹರಿಸಿದರು. ಆ ನಾಲ್ಕು ಮೃಗಗಳ ಪರಿಶುದ್ಧವಾದ ಮಾಂಸವನ್ನು ಸ್ವೀಕರಿಸಿ. ಸಾಯಂಕಾಲ ನಿವಾಸಾರ್ಥವಾಗಿ ಬಂದು ಮರದಡಿಯನ್ನು ಸೇರಿದರು”.

ಸ್ಪಷ್ಟವಾಗಿ ಕಾಣುವಂತೆ ಇಲ್ಲಿ ಆಹಾರ ಸ್ವೀಕಾರ್ಯದ ಬಗ್ಗೆ, ಸಸ್ಯಾಹಾರ ಮಾಂಸಾಹಾರಗಳ, ವೈದಿಕ-ಅವೈದಿಕಗಳ ಬಗ್ಗೆ ಯಾವ ತಾರತಮ್ಯವೂ ಇಲ್ಲ.

ಯಮುನಾ ನದಿಯನ್ನು ದಾಟುವಾಗಲೂ ಸೀತೆ, ಗಂಗೆಗೆ ಅರ್ಪಿಸುವ ಬಾಗಿನದಂತೆ ಇಲ್ಲೂ, ಕ್ಷೇಮವಾಗಿ ಹಿಂತಿರುಗಿದ ನಂತರ “ಗೋಸಹಸ್ರೇಣ, ಸುರಾಘಟ ಶತೇನ”ದಿಂದ ಅರ್ಚಿಸುತ್ತೇನೆ ಎನ್ನುತ್ತಾಳೆ (ಅದೇ ಸರ್ಗ 55, ಶ್ಲೋಕ 20) ಗೋದಾನ, ಮದ್ಯದಾನಗಳ ನಡುವೆ ಮಡಿ ಮೈಲಿಗೆಯ ವಿಚಾರ ಇಲ್ಲಿ ಸುಳಿಯುವುದಿಲ್ಲ.

ಯಮುನೆಯನ್ನು ದಾಟಿ, ಒಂದು ಹರಿದಾರಿ ನಡೆದ ನಂತರ ರಾಮ ಲಕ್ಷ್ಮಣ ಸೀತೆಯರು `ಬಹೂನ್ ಮೇಧ್ಯಾನ್ ಮೃಗಾನ್ ಹತ್ವಾ ಚೇರುತುರ್ಯಮುನಾವತೇ~ (ಅದೇ ಶ್ಲೋಕ 34, ಸರ್ಗ 55, ಪುಟ 429) ಅಂದರೆ `ಆಹಾರ ಯೋಗ್ಯವಾದ ಕೆಲವು ಮೃಗಗಳನ್ನು ಸಂಹರಿಸಿ ಭಕ್ಷಿಸಿದರು~ ಎಂದರ್ಥ.
 
ಮುಂದೆ, ಚಿತ್ರಕೂಟದಲ್ಲಿ ಒಂದು ಪರ್ಣಶಾಲೆಯನ್ನು ಕಟ್ಟಿ ಅಲ್ಲಿ ವಾಸಮಾಡುವ ಮೊದಲು ಶ್ರೀರಾಮ ಲಕ್ಷ್ಮಣನನ್ನು ಕುರಿತು ಹೀಗೆ ಹೇಳುತ್ತಾನೆ. `ವತ್ಸ, ಜಿಂಕೆಯ ಮಾಂಸವನ್ನು ತಂದು ಈ ಪರ್ಣಶಾಲೆಗೆ ಬಲಿ ಕರ್ಮವನ್ನು ನೆರವೇರಿಸೋಣ~ ಎಂದಾಗ ಲಕ್ಷ್ಮಣ ಒಂದು ಕೃಷ್ಣಮೃಗವನ್ನು ಕೊಂದು, ಜ್ವಲಿಸುವ ಅಗ್ನಿಯಲ್ಲಿ ಹಾಕಿ ಬೇಯಿಸಿದನು. ರಕ್ತವು ಶೋಷಿಸಿ ಮಾಂಸವು ಚೆನ್ನಾಗಿ ಬೆಂದ ಮೇಲೆ, ಶ್ರೀರಾಮನನ್ನು ಕರೆದು

“ತಂ ತು ಪಕ್ವಂ ಸಮಾಜ್ಞಾಯ ನಿಷ್ಟಸ್ತಂ ಛಿನ್ನಶೋಣಿತಮ್/
`ಅಯಂ ಕೃಷ್ಣಃ ಸಮಾಪ್ತಾಂಗ: ಶೃತಃ ಕೃಷ್ಣಮೃಗೋ ಯಥಾ
ದೇವತಾಂ ದೇವಸಂಕಾಶ ಯಜಸ್ವ ಕುಶಲೋಹ್ಯಸಿ//

ಅಂದರೆ “ಅಣ್ಣಾ, ಸರ್ವಾಂಗಗಳಿಂದಲೂ ಯುಕ್ತವಾದ ಈ ಜಿಂಕೆಯನ್ನು ಯಥಾವಿಧಿಯಾಗಿ ಪಕ್ವ ಮಾಡಿದ್ದೇನೆ. ದೇವತೋದ್ದೇಶವಾಗಿ ಇದನ್ನು ಅರ್ಪಿಸು” ಎನ್ನುತ್ತಾನೆ. ಮಾಂಸ ದೇವತಾಕರ್ಮಕ್ಕೂ ಸಲ್ಲುವಂಥಾದ್ದು ಎನ್ನುವುದು ಸ್ಪಷ್ಟ.
(ಅಯೋಧ್ಯಾಕಾಂಡ, ಸರ್ಗ 56, ಶ್ಲೋಕ 26-28, ಪುಟ 434-436)

ಚಿತ್ರಕೂಟದ ಮಂದಾಕಿನಿ ನದಿಯ ತೀರದಲ್ಲಿ ಕೂತು, ಪ್ರಕೃತಿಯ ಸೌಂದರ್ಯವನ್ನು ಸೀತೆಗೆ ವರ್ಣಿಸಿ ಹೇಳುತ್ತ, ಶ್ರೀರಾಮ ಆಕೆಯ ಎದುರಿಗೆ ಮಾಂಸವನ್ನಿಟ್ಟು, “ಪ್ರಿಯ, ಇದು ಪರಿಶುದ್ಧವಾಗಿದೆ, ಇದು ರುಚಿಯಾಗಿದೆ, ಇದಿನ್ನು ಚೆನ್ನಾಗಿ ಬೆಂದಿದೆ; ತಿನ್ನು” ಎಂದು ಉಪಚರಿಸುತ್ತಾನೆ. (ಅದೇ, ಸರ್ಗ 96, ಶ್ಲೋಕ 1-2, ಪುಟ 244) ಸಾಮಾನ್ಯ ಸಾಮೂಹಿಕ ವೈದಿಕ ಮನಸ್ಸಿಗೆ ಸೀತಾ, ರಾಮರು ಮಾಂಸ ತಿನ್ನುತ್ತಾರೆ ಎನ್ನುವುದು ಅಸ್ವಾಭಾವಿಕ, ಇದು ಪ್ರಕ್ಷಿಪ್ತ ಎನ್ನುವಂತಾಗಿದೆ.

ಮಾಂಸ ವೈವಿಧ್ಯವೂ ಶ್ರೀಮದ್ರಾಮಯಣದಲ್ಲಿ ಯಥೇಚ್ಛವಾಗಿದೆ. ಭರದ್ವಾಜ ಮುನಿಗಳು ಶ್ರೀರಾಮನ ಸಹಚರರಿಗೆ ತಮ್ಮ ತಪಶ್ಶಕ್ತಿಯಿಂದ ಏರ್ಪಡಿಸಿದ ಔತಣದಲ್ಲಿ

ಅಜೈಶ್ಚಾಪಿ ಚ ವಾರಾಹ್ಯೆರ್ನೀಷ್ಠಾನವರಸಂಚಯೈಃ/
ಫಲನಿರ್ವ್ಯೆಹಸಂಸಿದ್ಧೈ ಸೂಪೈರ್ಗಂಧರ ಸಾನ್ವಿತೈಃ/

ಒಂದು ಕಡೆ ಮೇಕೆಯ ಮಾಂಸ/ ಇನ್ನೊಂದು ಕಡೆ ಹಂದಿಯ ಮಾಂಸ.... ಚೆರಿಗೆಗಳಲ್ಲಿ ಪಕ್ವವಾದ ಜಿಂಕೆ, ನವಿಲು ಮತ್ತು ಕೋಳಿಗಳ ಮಾಂಸಗಳು ಅಣಿಯಾದವು” (ಅಯೋಧ್ಯಾಕಾಂಡ, ಉತ್ತರಾರ್ಧ, ಸರ್ಗ 91, ಶ್ಲೋಕ 67, 70, ಪುಟ 219, 220)

ಮಾಂಸ ಬರಿಯ ಔತಣಕ್ಕೆ ಅಷ್ಟೆ ಅಲ್ಲ. ಅದು ಶ್ರಾದ್ಧದಂಥ ವೈದಿಕ ಕಾರ್ಯದಲ್ಲೂ ಶ್ರೇಷ್ಠವಾದದ್ದು. ರಾವಣನಿಂದ ಹತನಾದ ಜಟಾಯುವಿಗೆ ಶ್ರೀರಾಮ ತನ್ನ ಬಂಧುವಿಗೆ ದಹನ ಸಂಸ್ಕಾರ ಮಾಡುವಂತೆ ಸಂಸ್ಕಾರ ಕಾರ್ಯನೆರವೇರಿಸಲು

ಸ್ಥೂಲಾನ್ ಹತ್ಯಾ ಮಹಾರೋಹೀನನುತಸ್ತಾರ ತ್ವಂ ದ್ವಿಜಮ್
ರೋಹಿಮಾಂಸಾನಿ ಚೋತ್ಕೃತ್ಯ ಪೇಶೀಕೃತ್ಯ ಮಹಾಯಶಾಃ
(ಅರಣ್ಯಕಾಂಡ, ಸರ್ಗ 68, ಶ್ಲೋಕ 33, ಪುಟ 430)

“ದೊಡ್ಡ ದೊಡ್ಡ ಜಿಂಕೆಗಳನ್ನು ಕೊಂದು ತಂದು ಜಟಾಯುವಿಗೆ ಪಿಂಡವನ್ನರ್ಪಿಸುವುದಕ್ಕಾಗಿ ದರ್ಭೆಗಳನ್ನು ಹರಡಿ.... ಜಿಂಕೆಗಳ ಮಾಂಸ ಪಿಂಡಗಳನ್ನು ನಿರ್ಮಿಸಿದನು”.

ರಾಮ ಲಕ್ಷ್ಮಣರು ಪಂಪಾಸರೋವರದ ದಾರಿ ಹಿಡಿದು ನಡೆಯುವಾಗ ಕಂಬಂಧ ಹೇಳುತ್ತಾನೆ: “ರಾಘವ, ಹೆರೆದುಪ್ಪದಂತಿರುವ ದೊಡ್ಡ ದೊಡ್ಡ ಆ ಹಕ್ಕಿಗಳನ್ನು ನೀವು ಭಕ್ಷಿಸಬಹುದು. ಲಕ್ಷ್ಮಣನು ರೋಹಿತ, ವಕ್ರತುಂಡ, ನಡೆಮೀನ ಮೊದಲಾದ ಉತ್ತಮ ಜಾತಿಯ ಮೀನುಗಳನ್ನು ಬಾಣಗಳಿಂದ ಹೊಡೆದು ತರುವನು. ಅವುಗಳ ಚರ್ಮ, ರೆಕ್ಕೆ, ಮುಳ್ಳುಗಳನ್ನು ತೆಗೆದು ಕಬ್ಬಿಣ ಶೂಲದಲ್ಲಿ ಬೇಯಿಸಿ ಭಕ್ತಿಯಿಂದ ನಿನಗೆ ಕೊಡುವೆನು. ಆ ಮೀನುಗಳನ್ನು ನೀನು ಯಥೇಚ್ಚವಾಗಿ ತಿನ್ನಬಹುದು”. (ಅರಣ್ಯಕಾಂಡ, ಸರ್ಗ 73, ಶ್ಲೋಕ 14-16 ಪುಟ 459).

ತಾತ್ಪರ್ಯವೇನೆಂದರೆ ಬಗೆ ಬಗೆಯ ಮಾಂಸ ಆಹಾರಕ್ಕೆ, ದೇವಕಾರ್ಯಕ್ಕೆ, ಶ್ರಾದ್ಧಕಾರ್ಯಕ್ಕೆ ಎಲ್ಲ ಕಡೆಯೂ ಸಲ್ಲುತ್ತಿತ್ತು. ಅದರ ಬಳಕೆಯ ಬಗ್ಗೆ ಇದ್ದದ್ದು ಸಂಕೋಚರಾಹಿತ್ಯವಷ್ಟೇ ಅಲ್ಲ. ಪರಿಶುದ್ಧ ಸ್ವೀಕಾರಾರ್ಹತೆ ಎನ್ನಬಹುದು: ಸಾತ್ವಿಕತೆಯನ್ನೂ ಸಸ್ಯಾಹಾರವನ್ನು ಸಮೀಕರಿಸುವ ನಮ್ಮಂಥವರಿಗೆ ಇದು ಬಿಸಿ ತುಪ್ಪವಾಗಿ ತಲ್ಲಣಕಾರಿಯಾಗಿ ಕಾಣುತ್ತದೆ.

ಮಾಂಸ ಭಕ್ಷಣೆಯ ಜೊತೆಗೆ ಮದ್ಯವೂ ನಿಸ್ಸಂಕೋಚವಾಗಿ ಬಳಕೆಯಾಗುತ್ತಿತ್ತು. ಭರದ್ವಾಜ ಮುನಿಗಳ ಆತಿಥ್ಯ ವರ್ಣನೆಯನ್ನೇ ನೋಡಿ. ಅವರು ಆಜ್ಞಾಪಿಸಿದ ಕೂಡಲೇ “....ನದೀ ದೇವತೆಗಳು ಖರ್ಜೂರಾದಿ ಫಲಗಳಿಂದ ಹುಟ್ಟುವ ಮೈರೇಯವೆಂಬ ಮದ್ಯವನ್ನೂ ಕೆಲವು ದೇವತೆಗಳು ಗೌಡಿ ಪೈಷ್ಟಿ ಮಾಧ್ವಿ ಎಂಬ ಸುರೆಯನ್ನೂ ಒದಗಿಸಿದರು “ಭರತನ ಸೈನಿಕರು ಕಂಠ ಪೂರ್ತಿಯಾಗಿ ಭೋಜನ ಮಾಡಿ ಉಬ್ಬಿ ಮದ್ಯಪಾನವಾದ ನಂತರ ಮೈ ಮರೆತು ಭೋಗ ದ್ರವ್ಯಗಳನ್ನು ಸೇವಿಸಿ ನಲಿದಾಡಿದರು. ಕುದುರೆಯ ಕೆಲಸದವನಿಗೆ ಕುದುರೆಯಾವುದೆಂದು ಗೊತ್ತಾಗಲಿಲ್ಲ!
 
ಮಾವುತನಿಗೆ ಆನೆ ಯಾವುದೆಂದು ತಿಳಿಯಲಿಲ್ಲ. ಹೊಂಡಗಳು ಮದ್ಯದಿಂದ ತುಂಬಿದವು. ಮದ್ಯಪಾನದಿಂದ ಮತ್ತರಾದವನು ಹಾಗೆಯೇ ಮದಿಸಿದ್ದರು. ದಿವ್ಯಾಗರುಚಂದನಗಳನ್ನು ಬಳಿದು ಕೊಂಡವರು ಬಳಿದುಕೊಂಡೇ ಇದ್ದರು”.

(ಅಯೋಧ್ಯಾಕಾಂಡ, ಉತ್ತರಾರ್ಧ, ಸರ್ಗ 99, ಪುಟ 210-222)
ನಮ್ಮ ಇಂದಿನ ವಿಚಿತ್ರ ವಿಮರ್ಶೆಯ ಭಾಷೆಯಲ್ಲಿ ಇದು `ಅಥೆಂಟಿಕ್~ ಅನ್ನಲು ಅಡ್ಡಿಯೇ ಇಲ್ಲ.

ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ನಾವು ಮಾಡಿಟ್ಟಿರುವ ಮಡಿಪೆಟ್ಟಿಗೆಯೊಳಗಿನ ಕೆಲವು ಕೌತುಕಗಳು ಇವು. ಇಂಥವು ಇನ್ನೂ ಎಷ್ಟೋ ಇದ್ದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT