ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗನ ಮಡಿಲಲ್ಲಿ ರಾಸುಗಳ ಉತ್ಸವ!

Last Updated 7 ಏಪ್ರಿಲ್ 2011, 7:20 IST
ಅಕ್ಷರ ಗಾತ್ರ

ಮಾಗಡಿ:ತಿರುಮಲೆಯ ರಂಗನಾಥಸ್ವಾಮಿಯ ದೇವಾಲಯದ ಮೈದಾನದ ತುಂಬಾ ಸಾವಿರಾರು ರಾಸುಗಳು. ಒಂದಕ್ಕಿಂತ ಒಂದು ಚಂದದ ಹೋರಿಗಳು...!
ಇಷ್ಟೊಂದು ಹೋರಿಗಳು ಮೇಳೈಸಿವೆ ಎಂದರೆ ಅದು ರಂಗನಾಥನ ಜಾತ್ರೆಯ ಸೂಚನೆ ಎಂದೇ ಅರ್ಥ. ನಿಜ, ಯುಗಾದಿಯ ದಿನದಿಂದ ತಿರುಮಲೆ ರಂಗನಾಥ ಸ್ವಾಮಿ ಜಾತ್ರೆ ಆರಂಭವಾಗಿದೆ.

ರಾಜ್ಯದ ಬಹುದೊಡ್ಡ ದನಗಳ ಜಾತ್ರೆಯಲ್ಲಿ ಮಾಗಡಿ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಒಂದು.  ಯುಗಾದಿ ಹಬ್ಬದಂದು ಹೋಳಿಗೆ ಉಂಡ ನಂತರ ರೈತರು  ತಮ್ಮ ಪ್ರೀತಿಯ ರಾಸುಗಳೊಂದಿಗೆ ಮಾಗಡಿಯ ಜಾತ್ರೆಗೆ ಬರುತ್ತಾರೆ. ಹೋರಿ ಕೊಟ್ಟು, ಹೋರಿ ಕೊಳ್ಳುತ್ತಾರೆ. ಹಲ್ಲುಗಳನ್ನು ನೋಡುತ್ತಾ, ಟವಲ್‌ನೊಳಗೆ ಕೈ ಕೈ ಮಿಲಾಯಿಸುತ್ತಾ ಬೆಲೆ ನಿರ್ಧರಿಸುತ್ತಾರೆ. ಕಾಲ ಎಷ್ಟೇ ಬದಲಾಗಿದ್ದರೂ ಜಾತ್ರೆಯಲ್ಲಿ ಜಾನುವಾರುಗಳ ಮಾರಾಟದ  ವಿಧಾನದಲ್ಲಿ ಒಂದಿಷ್ಟೂ ವ್ಯತ್ಯಾಸವಾಗಿಲ್ಲ ಎನ್ನುವುದನ್ನು ಮಾಗಡಿ ಜಾತ್ರೆಗೆ ಬಂದೇ ನೋಡಬೇಕು ಎನ್ನುತ್ತಾರೆ ಇಲ್ಲಿನ ಹಿರಿಯರು.

ಮಾಗಡಿ ದನಗಳ ಜಾತ್ರೆಗೆ ರಾಯಚೂರು, ಬೆಳಗಾವಿ, ಗುಲ್ಬರ್ಗಾ, ಮಹಾರಾಷ್ಟ್ರದ ಸೊಲ್ಲಾಪುರ, ಪೂನಾ, ನಾಸಿಕ್, ಧಾರವಾಡ, ಮಡಕಶಿರಾ, ಮಂಡ್ಯ, ಈರೋಡ್, ಕೊಳ್ಳೇಗಾಲ, ಕೃಷ್ಣಗಿರಿ, ಕರ್ನೂಲ್, ಹಾಸನ, ತುಮಕೂರು, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಂದ ರೈತರು ಆಗಮಿಸುತ್ತಾರೆ. ರಾಸುಗಳನ್ನು ಕೊಳ್ಳಲು ಹಣದ ಗಂಟಿನೊಂದಿಗೆ 15 ರಿಂದ 25 ಜನ ಗುಂಪು ಗುಂಪಾಗಿ ಬರುತ್ತಾರೆ.

ಕೆಲವರು ಮಾರಾಟಕ್ಕಾಗಿ ಜಾನುವಾರು ಹೊಡೆದು ತಂದರೆ, ಇನ್ನು ಕೆಲವರು ‘ಸಾಟಿ - ಬುಗುರಿ’ ಅಂದರೆ ಜಾನುವಾರುಗಳನ್ನು ಬದಲಾಯಿಸಿಕೊಳ್ಳುತ್ತಾರೆ. ‘ಉತ್ತರ ಕರ್ನಾಟಕದ ರೈತರು ಕೊಳ್ಳುವವರು ಹಳೆಯ ಮೈಸೂರು ಜನ ಮಾರುವವರು’ ಎಂಬ ಗಾದೆ ಈ ಮಾಗಡಿಯಲ್ಲಿ ಜಾತ್ರೆಯಲ್ಲಿ ಜನ ಜನಿತವಾಗಿದೆ.

ಈ ಜಾತ್ರೆ ಒಂದು ವಾರದ ಕಾಲ ನಡೆಯುತ್ತದೆ. ಹೆಚ್ಚೂ ಕಡಿಮೆ, ಧಾರ್ಮಿಕರು, ವ್ಯಾಪಾರಸ್ಥರು, ರೈತರು.. ಎಲ್ಲಾ ಸೇರಿ 25 ಸಾವಿರ ಜನ ಜಮಾಯಿಸುತ್ತಾರೆ. ಜಾನುವಾರುಗಳ ವ್ಯಾಪಾರದ ಜೊತೆಗೆ ಅನೇಕ ಸ್ನೇಹ-ಸಂಬಂಧಗಳಿಗೆ ಈ ಜಾತ್ರೆ ಸಾಕ್ಷಿಯಾಗುತ್ತದೆ. ವ್ಯಾಪಾರದಲ್ಲಿ ಸಣ್ಣಪುಟ್ಟ ಜಗಳ-ಕೂಗಾಟಗಳು ಉದ್ಭವಿಸಿದರೂ ಕ್ಷಣಾರ್ಧದಲ್ಲಿ ಅದೆಲ್ಲ ತಣ್ಣಗಾಗಿ ಸೌಹಾರ್ದದಿಂದ ಮುಂದುವರಿಯುತ್ತದೆ.

‘ಈ ಜಾತ್ರೆಯಲ್ಲಿ ಮೋಸ ವಂಚನೆ ಕಡಿಮೆ ಸ್ವಾಮಿ. ದನಗಳನ್ನು ಖರೀದಿಸುವಾಗ ಮಾತೇ ಮಾಣಿಕ್ಯ. ಹತ್ತಾರು ಜನ ಕುಳಿತು ದಲ್ಲಾಳಿಗಳು ಇಬ್ಬರು ಕೈಹಿಡಿದ ಟವಲ್ಲಿನಿಂದ ಮುಚ್ಚಿಕೊಳ್ಳುತ್ತಾರೆ. ಬೆರಳಿನ ಒಂದು ಇಂಚು ಹಿಡಿದರೆ ನೂರು ಜಾಸ್ತಿ, ಒಂದು ಬೆರಳು ಹಿಡಿದರೆ ಒಂದು ಸಾವಿರ, ಒಂದು ಕೈ ಅಂದರೆ 5 ಸಾವಿರ ರೂಪಾಯಿ. 2 ಕೈಗಳನ್ನು 2 ಬಾರಿ ಒತ್ತಿ ಹಿಡಿದರೆ 20 ಸಾವಿರ... ಹೀಗೆ ಬಟ್ಟೆಯ ಮುಸುಕಿನಲ್ಲಿ ವ್ಯಾಪಾರ ಇತ್ಯರ್ಥವಾಗುತ್ತದೆ’ ಎನ್ನತ್ತಾರೆ ಗೊಲ್ಲಗೌಡ ಪೂಜಾರಿ ಚಿಕ್ಕಣ್ಣ.

ಸಾಕಿದ ಎತ್ತು, ಆಕಳು, ಕರುಗಳು ಮಾರಾಟವಾಗಿ, ಬೇರೆಯವರಿಗೆ ಹಗ್ಗ ಬಿಚ್ಚಿ ಹೊಡೆದು ಕಳುಹಿಸುವಾಗ, ಸಾಕಿದ ಮಾಲೀಕನ ಕಣ್ಣಂಚುಗಳು ಒದ್ದೆಯಾಗುವ ದೃಶ್ಯ ಸಾಮಾನ್ಯವಾಗಿರುತ್ತದೆ. ಅದೇ ರೀತಿ ತಾಖತ್ತಾದ ಜೋಡಿ ಎತ್ತುಗಳನ್ನು ಕೊಂಡವರ ಮುಖದಲ್ಲಿ ಮಂದಹಾಸ ಅರಳಿರುತ್ತದೆ. ಕೊಟ್ಟವರು, ಪಡೆದವರು, ಖರೀದಿಸಿದ ದೂರದ ಊರಿನ ರೈತರು ನಾಲ್ಕಾರು ಜನ ಸೇರಿ ಸಾಲುಗಟ್ಟಿ ನಿಂತಿರುವ ಲಾರಿಗಳಲ್ಲಿ ಒಂದನ್ನು ಬಾಡಿಗೆಗೆ ಹಿಡಿದು ಸ್ವಂತ ಊರಿಗೆ ಹೊರಡುತ್ತಾರೆ.

ಈ ವರ್ಷವೂ ಜಾತ್ರೆ ಜೋರಾಗಿಯೇ ಆರಂಭವಾಗಿದೆ. ಕೊಳ್ಳೇಗಾಲ, ಕೊಯಮತ್ತೂರು, ಅರಕಲಗೂಡು, ತುಮಕೂರು, ಮೈಸೂರು, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕದ ಭಾಗದಿಂದ ರೈತರು ಆಗಮಿಸಿದ್ದಾರೆ. ಆದರೆ ಜಾತ್ರೆಯ ತುಂಬಾ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೀಗೆ ಅವ್ಯವಸ್ಥೆ ಮುಂದುವರಿದರೆ ಮುಂದಿನ ಐದು ವರ್ಷಗಳಲ್ಲಿ ಮಾಗಡಿ ದನಗಳ ಪರಿಷೆ ಕಾಣೆಯಾಗಿ, ಜನಗಳ ಜಾತ್ರೆಯಷ್ಟೇ ಉಳಿಯುತ್ತದೆ ಎನ್ನುತ್ತಾರೆ  ಹದಿನೈದು ವರ್ಷಗಳಿಂದ ಜಾತ್ರೆಗೆ ಬರುತ್ತಿರುವ ರೈತ ಅಕ್ಕಲಕೋಟೆ ಪಾಟೀಲ ಬುಡೇನ್.

ಜಾತ್ರೆ ನಡೆಸಲು ಮೂಲ ಸೌಲಭ್ಯಗಳು ಅಗತ್ಯ. ದಶಕಗಳ ಹಿಂದೆ ಜಾತ್ರೆ ಆವರಣದಲ್ಲಿ ಗುಂಡು ತೋಪುಗಳಿದ್ದವು. ಸಾಕಷ್ಟು ನೆರಳಿತ್ತು. ಅರವಟ್ಟಿಗೆಗಳಿದ್ದವು. ಆಗ ಯಾರನ್ನೂ ಅವಲಂಬಿಸ ಬೇಕಾಗಿರಲಿಲ್ಲ. ಈಗ ನೀರು-ನೆರಳು, ಬೆಳಕು ಏನೂ ಇಲ್ಲ. ಮಾತ್ರವಲ್ಲ ರೈತರ ಹಣಕ್ಕೆ ಭದ್ರತೆ ಇಲ್ಲ’ ಎನ್ನುವ ಕರಿಯೋಬೇನಹಳ್ಳಿ ಕರಡಿಬುಳ್ಳಪ್ಪ, ಈ ಬಾರಿ ಜಾತ್ರಾ ಸಮಿತಿ ರೈತರನ್ನು ಮರೆತಿದೆ ಎಂದು ಆರೋಪಿಸುತ್ತಾರೆ.

‘ಜಾತ್ರೆಯಲ್ಲಿ ವ್ಯಾಪಾರಸ್ಥರಿಗೆ, ರೈತರಿಗೆ ತಂಗಲು ವ್ಯವಸ್ಥೆ ಇಲ್ಲ. ಇರುವ ವ್ಯವಸ್ಥೆಯೂ ಸರಿಯಿಲ್ಲ ನಿಜ.  ಆದರೆ ಈ ಜಾತ್ರೆಯಲ್ಲಿ ಉತ್ತಮ ತಳಿಯ ಕರುಗಳನ್ನು ಕಡಿಮೆ ಬೆಲೆಗೆ ಕೊಳ್ಳಬಹುದು ಎನ್ನುತ್ತಾರೆ’  ಕಂದಿಕೆರೆ ತಿಪ್ಪೇಸ್ವಾಮಿ, ಚಳ್ಳಕೆರೆ ಎಚ್.ಬಿ ವಿಶ್ವನಾಥ್, ಬೆಳಗೆರೆ, ಗೊರ್ಲತ್ತಿನ ರೈತರು.

ಪಾವಗಡ ತಾಲ್ಲೂಕಿನ ಶ್ರೀರಾಮರೆಡ್ಡಿ ಪ್ರಕಾರ, ಮಾಗಡಿ ಜಾತ್ರೆಗೆ ಬರಬೇಕಾದರೆ ಬಸ್ ಸೌಲಭ್ಯ ತೀರ ಕಡಿಮೆ. ಕನಿಷ್ಟ ಜಾತ್ರೆ ಸಮಯದಲ್ಲಾದರೂ ಮುಜರಾಯಿ ಇಲಾಖೆ ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸುತ್ತಾರೆ.


ಮರಳಬೇಕಿದೆ ದಶಕಗಳ ಹಸಿರು ವೈಭವ!
ಒಂದಾನೊಂದು ಕಾಲದಲ್ಲಿ, ರಂಗನಾಥಸ್ವಾಮಿ ದೇವಾಲಯಕ್ಕೆ 650 ಹೆಕ್ಟೇರ್ ಭೂಮಿ ಇತ್ತು. ಅಲ್ಲಿ ಗುಂಡು ತೋಪುಗಳಿದ್ದವು. ಜಾತ್ರೆಗಾಗಿ ಜಾನುವಾರುಗಳೊಂದಿಗೆ ಬಂದ ರೈತರು, ನೂರಾರು ಅರವಟ್ಟಿಕೆಗಳಲ್ಲಿ ಬಿಸಿ ಬಿಸಿ ರಾಗಿಮುದ್ದೆ, ಅವರೇಕಾಯಿ, ಹಲಸಿನ ಕಾಯಿ ಸಾರು ಉಂಡು, ಗುಂಡು ತೋಪುಗಳಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದರು. ವ್ಯಾಪಾರ ವಹಿವಾಟು ಜೋರಾಗಿ ನಡೆಸಿಕೊಂಡು, ಚೈತ್ರ-ಶುದ್ಧ, ತ್ರಯೋದಶಿಯ ರಂಗನಾಥನ ರಥೋತ್ಸವದಲ್ಲಿ ಭಾಗವಹಿಸಿ ಜಾನುವಾರುಗಳನ್ನು ಕೊಂಡ ಸಂತೃಪ್ತಿಯಿಂದ ಕಡ್ಲೇಪುರಿ, ಬೆಂಡು, ಬೆತ್ತಾಸು, ಜಿಲೇಬಿ, ಕಟ್ಟಿಸಿಕೊಂಡು ಊರಿಗೆ ಹಿಂತಿರುಗುತ್ತಿದ್ದರು. ಈಗ ಇವೆಲ್ಲ ಕನಸಾಗಿದೆ....

-ಹೂವಿನ ಹಡಗಲಿಯ ರೈತ ಫಕೀರಪ್ಪ ಹುಸೇನಪ್ಪ ಕುಂಬಾರಪ್ಪ ಹೇಳುತ್ತಾರೆ.  ತಿಮ್ಮಸಂದ್ರ, ಬೈಚಾಪುರ, ಹೊಸಪೇಟೆ, ಗುಂಡಯ್ಯನಬಾವಿ, ತಿರುಮಲೆ, ಕರಣಿಕರ ಬಾವಿ ಸುತ್ತಮುತ್ತ 10 ವರ್ಷದ ಕೆಳಗೆ ಗುಂಡು ತೋಪುಗಳಿದ್ದವು.  ಇಲ್ಲೆಲ್ಲಾ 10 ಸಾವಿರ ರಾುಗಳಿಗೆ ನೆರಳಿತ್ತು.

ಮಾಗಡಿ ಸುತ್ತಲಿನ ರೈತರು, ದೇವಾಲಯ ಸಮಿತಿಯವರು, ಸ್ಥಳೀಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪ್ರತಿ ಬಾರಿ ಜಾತ್ರೆಗೆ ಆಗಮಿಸುವವರು ನೆನಪಿಗಾಗಿ ಜಾತ್ರೆಯ ಅಂಗಳದಲ್ಲಿ ಒಂದೊಂದು ಗಿಡಗಳನ್ನು ನೆಟ್ಟರೆ ಸಾಕು, ದಶಕಗಳ ಹಿಂದಿನ ಹಸಿರು ವೈಭವ ಮತ್ತೆ ಮರುಕಳಿಸುತ್ತದೆ. ಇಂಥ ಕನಸು ನನಸಾಗಲು ಎಲ್ಲರೂ ಮನಸ್ಸು ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT