ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ದಸರಾ ಅ.7ರಿಂದ

Last Updated 12 ಸೆಪ್ಟೆಂಬರ್ 2013, 6:25 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಾರಂಪರಿಕ ನಗರಿ ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವ ಅ.7ರಿಂದ 5 ದಿನಗಳ ಕಾಲ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ತಿಳಿಸಿದರು.

ದಸರಾ ಆಚರಣೆ ಹಿನ್ನೆಲೆಯಲ್ಲಿ ಇಲ್ಲಿನ ರಂಗನಾಥ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಅ.7ರಂದು ಕಿರಂಗೂರು ವೃತ್ತದ ಬನ್ನಿ ಮಂಟಪದ ಬಳಿಯಿಂದ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ.

ನಿಘಂಟು ತಜ್ಞ ಪ್ರೊ.ಜಿ. ವೆಂಟಕಸುಬ್ಬಯ್ಯ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ಚಿಂತನೆ ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಶ್ರೀರಂಗನಾಥ ದೇವಾಲಯ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತದೆ. ಕಾಶ್ಮೀರ, ರಾಜಸ್ತಾನ, ಗುಜರಾತ್ ಸೇರಿ 5 ರಾಜ್ಯಗಳ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಕಳೆದ ಬಾರಿ ಯಶಸ್ವಿ ಕಾರ್ಯಕ್ರಮ ನೀಡಿದ್ದ ಸೌತ್ ಜೋನ್ ಕಲ್ಚರಲ್ ಸೆಂಟರ್‌ನ ಕಲಾವಿದರಿಗೆ ಈ ಬಾರಿಯೂ ಅವಕಾಶ ನೀಡಲಾಗುತ್ತದೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ಇರುತ್ತದೆ. 5 ದಿನಗಳ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಯುವಜನರಿಗೆ ಒಂದೊಂದು ದಿನ ಮೀಸಲಿಡಲಾಗುವುದು ಎಂದು ವಿವರಿಸಿದರು. ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪದ ಛಾವಣಿ ಸೇರಿದಂತೆ ದುರಸ್ತಿಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದರು.

ಕೋಟಿ ರೂ.ಗೆ ಬೇಡಿಕೆ: ಕಳೆದ ವರ್ಷ ಇಲ್ಲಿ ನಡೆದ ದಸರಾ ಉತ್ಸವಕ್ಕೆ ಸರ್ಕಾರ ರೂ.50 ಲಕ್ಷ ಹಣ ನೀಡಿತ್ತು. ಈ ಬಾರಿಯ ದಸರಾ ಉತ್ಸವಕ್ಕೆ ಒಂದು ಕೋಟಿ ರೂಪಾಯಿ ಹಣ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರಲ್ಲಿ ಮನವಿ ಮಾಡಲಾಗಿದೆ. ಮೈಸೂರು ಮಾದರಿಯಲ್ಲೇ ಇಲ್ಲಿಯೂ ದಸರಾ ಆಚರಣೆ ನಡೆಯಬೇಕು. ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಸರ್ಕಾರ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣ ತೆಗೆದಿರಿಸಬೇಕು. ದಸರಾ ಆಚರಣೆ ಯಶಸ್ಸಿಗೆ ತಾಲ್ಲೂಕಿನ ಎಲ್ಲ ಸಂಘಟನೆಗಳು ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಕೋರಿದರು.
ಚರ್ಚಾಗೋಷ್ಠಿ ನಡೆಸಿ: ಪ್ರೊ.ಕರಿಮುದ್ದೀನ್ ಮಾತನಾಡಿ, ದಸರಾ ಆಚರಣೆಯಲ್ಲಿ ಯುವ ಜನತೆ ಹಾಗೂ ಸಾಹಿತಿಗಳಿಗೆ ಆದ್ಯತೆ ನೀಡಬೇಕು. ಪುಸ್ತಕ ಪ್ರದರ್ಶನ ಏರ್ಪಡಿಸಬೇಕು. ಇಲ್ಲಿನ ಐತಿಹಾಸಿಕ ಮಹತ್ವ ಕುರಿತು ಚರ್ಚಾಗೋಷ್ಠಿಗಳು ನಡೆಯಬೇಕು.

ಪಟ್ಟಣದಲ್ಲಿ ಶುಚಿತ್ವ ತಾಂಡವವಾಡುತ್ತಿದ್ದು, ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಹೊರ ಜಿಲ್ಲೆಯ ಜನರೂ ಇಲ್ಲಿನ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ದಸರಾ ಆಚರಣೆಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಿಸಬೇಕು. ದಸರೆಗೆ ಬಂದ ಹಣವನ್ನು ವಾಪಸ್ ಕಳುಹಿಸದೆ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು. ವೇದಿಕೆಯ ಗಾಂಭೀರ್ಯಕ್ಕೆ ಕುಂದು ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕಳೆದ ಬಾರಿ ದಸರಾ ಮೆರವಣಿಗೆ ತಡವಾಗಿ ಪಟ್ಟಣ ಪ್ರವೇಶಿಸಿತ್ತು. ವಿದ್ಯುತ್ ಕಡಿತವಾಗಿದ್ದರಿಂದ ಜನರು ಮೆರವಣಿಗೆ ವೀಕ್ಷಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಲೋಪವಾಗದಂತೆ ಕ್ರಮ ವಹಿಸಿ ಎಂದು ಪುರಸಭೆ ಸದಸ್ಯ ಎಸ್.ಪ್ರಕಾಶ್ ತಿಳಿಸಿದರು. ಜೆಡಿಎಸ್ ಮುಖಂಡ ಎಂ. ಸಂತೋಷ್, ಕೃಷಿಕ ಸಮಾಜದ ನಿರ್ದೇಶಕ ಬಿ.ಎಂ. ಸುಬ್ರಹ್ಮಣ್ಯ, ಜೆ. ಸೋಮಶೇಖರ್, ಶೀಲಾ ನಂಜುಂಡಯ್ಯ, ಕೆ.ಬಿ. ಬಸವರಾಜು, ಚಂದಗಾಲು ಶಂಕರ್, ಎನ್.ಟಿ. ಪುಟ್ಟಸ್ವಾಮಿ, ಎಂ. ಚಂದ್ರಶೇಖರ್, ಪ್ರಾಂಶುಪಾಲೆ ಪ್ರೊ.ಗೌರಮ್ಮ ಇತರರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ, ಎಸ್ಪಿ ಭೂಷಣ ಬೊರಸೆ, ಉಪ ವಿಭಾಗಾಧಿಕಾರಿ ಬಿ.ವಾಣಿ, ತಹಶೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ, ಡಾ.ಭಾನುಪ್ರಕಾಶ್ ಶರ್ಮಾ, ವಿಜಯಸಾರಥಿ, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ. ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು, ಇಂಡುವಾಳು ಸಚ್ಚಿದಾನಂದ, ತಾ.ಪಂ. ಮಾಜಿ ಅಧ್ಯಕ್ಷರಾದ ಟಿ.ಶ್ರೀಧರ್, ಪದ್ಮ ವಿಜೇಂದ್ರು, ಎಪಿಎಂಸಿ ನಿರ್ದೇಶಕ ಸ್ವಾಮಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT