ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ದಸರಾ ಸಂಭ್ರಮ ನೆನೆದು..!

Last Updated 14 ಅಕ್ಟೋಬರ್ 2012, 4:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ವಿಜಯನಗರ ಸಾಮ್ರಾಜ್ಯ ಪತನದ ನಂತರ ಹಂಪಿ ಮಾದರಿಯಲ್ಲಿ ದಸರಾ ಉತ್ಸವ  ಶ್ರೀರಂಗಪಟ್ಟಣದಲ್ಲಿ ಆರಂಭಗೊಂಡಿತು.

ವಿಜಯನಗರದ ರಾಜ ಪ್ರತಿನಿಧಿ ಶ್ರೀರಂಗರಾಯನಿಂದ ಸುವರ್ಣ ಸಿಂಹಾಸನವನ್ನು ವಶಪಡಿಸಿಕೊಂಡ ರಾಜ ಒಡೆಯರ್ 1610ರಲ್ಲಿ ಸ್ವತಂತ್ರ ದೊರೆಯಾದ ನಂತರ ಶಾಸ್ತ್ರೋಕ್ತವಾಗಿ ಮಹಾನವಮಿ ಉತ್ಸವವನ್ನು ಆರಂಭಿಸಿದರು. ನಾಡ ಹಬ್ಬದ ಧಾರ್ಮಿಕ, ಸಾಂಸ್ಕೃತಿಕ ಸಂಪ್ರದಾಯಕ್ಕೆ ನಾಂದಿ ಹಾಡಿದರಲ್ಲದೇ ನವರಾತ್ರಿ ಉತ್ಸವದ ಅಧಿಕೃತ ಆಚರಣೆಗೆ ಸಂಬಂಧಿಸಿದ ಶಾಸ್ತ್ರ, ವಿಧಿಗಳನ್ನು ಕ್ರೋಡೀಕರಿಸಿ ತಮ್ಮ ವಂಶದ ಮುಂದಿನ ರಾಜರ ಮಾರ್ಗದರ್ಶನಕ್ಕಾಗಿ ಬರೆಸಿಟ್ಟು ದಸರಾ ಆಚರಣೆಗೆ ಚೌಕಟ್ಟು ನಿರ್ಮಿಸಿಕೊಟ್ಟರು. ಕಂಠೀರವ ನರಸರಾಜ ಒಡೆಯರ್ (1638-59) ದಸರಾ ಆಚರಣೆ ಕಾಲದಲ್ಲಿ ಹೊರ ನಾಡಿನಲ್ಲೂ ಹೆಸರಾಯಿತು.

`ಕಂಠೀರವ ನರಸರಾಜ ವಿಜಯಂ~ ಹೇಳುವ ದಸರಾ ಒಡೆಯರ್ ವಂಶದ ಪ್ರಸಿದ್ಧ ದೊರೆ ಕಂಠೀರವ ನರಸರಾಜ ಒಡೆಯರ್( ಕ್ರಿ.ಶ.1638-59) ಕಾಲದ ದಸರಾ ಉತ್ಸವ ಮತ್ತು ಅದರ ಸೊಬಗನ್ನು ಸಮಕಾಲೀನ ಚಾರಣ ಕವಿ ಗೋವಿಂದ ವೈದ್ಯ ತನ್ನ `ಕಂಠೀರವ ನರಸರಾಜ ವಿಜಯಂ~ ಕೃತಿಯಲ್ಲಿ ಹೃದಯಂಗಮವಾಗಿ ಚಿತ್ರಿಸಿದ್ದಾನೆ.
`ಕಂಠೀರವ ಭೂಪಾಲನು ಪಲ್ಲಕ್ಕಿಯನ್ನೇರಿ ವಾದ್ಯ ಘೋಷಗಳೊಡನೆ, ಮುತ್ತಿನ ಛತ್ರಗಳ ಸಾಲನೆರಳಿನಲ್ಲಿ ಶಂಕ, ಚಕ್ರದ ಬಿರುದಿನ ಸಾಲಧ್ವಜಗಳ ಸಂಭ್ರಮದಲ್ಲಿ ಓಲಗಕ್ಕೆ ಆಗಮಿಸಿ ಗದ್ದುಗೆ ಅಲಂಕರಿಸಿದನು. ಊಳಿಗದವರು, ಮನ್ನೆ-ಮಾಂಡಳಿಕರು, ರಾಯ- ರಾವುತರು, ನಾನಾ ದೇಶಗಳ ದೊರೆಗಳು ಭೂಪಾಲನಿಗೆ ಕಾಣಿಕೆ ಕೊಟ್ಟು ಕೈ ಮುಗಿದರು. ಕಂಠೀರವೇಂದ್ರನ ಓಲಗದ ಸಡಗರವು ಅಷ್ಟ ದಿಕ್ಕುಗಳಿಗೆ ಮಾರ್ದನಿಸಿತು. ದೊರೆಯು ಗುರು, ಹಿರಿಯರಿಗೆ ವಂದಿಸಿ ಅಂತಃಪುರಕ್ಕೆ ನಿರ್ಗಮಿಸಿದನು....~

ಮಲೆಯಾಳ, ತಂಜಾವೂರು, ಮಧುರೈ ದೊರೆಗಳಾದಿಯಾಗಿ ನಾನಾ ದೇಶದ ಭೂಪಾಲಕರು ಶ್ರೀರಂಗಪಟ್ಟಣದ ದಸರಾದಲ್ಲಿ ಭಾಗವಹಿಸುತ್ತಿದ್ದರು.

ಕಲಾ ಸಂಭ್ರಮ
ಅರಮನೆ ಮುಂದಿನ ಕೆಮ್ಮಣ್ಣು ಮಟ್ಟಿಯ ಮೇಲೆ ಜಟ್ಟಿಗಳ ಕಾಳಗ ನಡೆಯುತ್ತಿತ್ತು. ಮಲ್ಲಯುದ್ದ, ದೊಂಬರಾಟ, ಟಗರು ಕಾಳಗ, ಕೋಣಗಳ ಕಾದಾಟ, ಆನೆಗಳ ಹೋರಾಟ, ಹುಲಿ, ಕರಡಿಗಳೊಂದಿಗೆ ವೀರರ ಕಾದಾಟ, ಕೋಲಾಟ, ಕೋಳಿ ಅಂಕ, ಲಲನೆಯರ ನರ್ತನ, ಇಂದ್ರಜಾಲ, ಸಂಗೀತ, ನಾಟಕ ಗಾಯನ, ವೀಣಾ ವಾದನ, ಕವಿಗೋಷ್ಠಿ, ಬಾಣ ಬಿರುಸುಗಳ ಸಂಭ್ರಮ ನೆರೆದಿದ್ದವರಿಗೆ ರಂಜನೆ ನೀಡುತ್ತಿದ್ದವು. ಪಟ್ಟದ ಆನೆ, ಕುದುರೆಗಳೊಡಗೂಡಿದ ಉತ್ಸವ ಹೊಳೆ ದಂಡೆಯ ಚಪ್ಪರಕ್ಕೆ ಮುನ್ನಡೆಯುತ್ತಿತ್ತು. ಮಹಾ ನವಮಿಯಂದು ಕಾವೇರಿ ನದಿಯ ದಂಡೆಯ ಹಾಯ್ಗಡಕ್ಕೆ ಪಟ್ಟದ ಕತ್ತಿ ಹಾಗೂ ಅಮಲದೇವಿ ಪಲ್ಲಕ್ಕಿ ಉತ್ಸವ ಸಾಗುತ್ತಿತ್ತು. ಒಡ್ಡೋಲಗದ ಬಳಿಕ ಆಯುಧಕ್ಕೆ ವಿಶೇಷ ಪೂಜೆ ಸಲ್ಲಿಸಿದ ದೊರೆ ಕಂಕಣ ವಿಸರ್ಜಿಸಿ ಶೀಖಾಸರ ಮತ್ತು ದಫ್ತರಗಳನ್ನೂ ಪೂಜಿಸುತ್ತಿದ್ದನು.

ವಿಜಯ ದಶಮಿ
ವಿಜಯ ದಶಮಿಯಂದು ಅರಮನೆಯ ಹಜಾರಕ್ಕೆ ಚಿತ್ತೈಸುತ್ತಿದ್ದ ದೊರೆಗಳು ಆಯುಧಕ್ಕೆ ಉತ್ತರ ಪೂಜೆ ನೆರವೇರಿಸಿ ಕೂಷ್ಮಾಂಡ ಛೇದನ ಮಾಡಿಸುತ್ತಿದ್ದರು. ಪಟ್ಟದ ಆನೆ, ಕುದುರೆಗಳ ಸಹಿತ ಪಟ್ಟದ ಕತ್ತಿಯನ್ನು ಬನ್ನಿ ಮಂಟಪಕ್ಕೆ ಕಳುಹಿಸಿಕೊಡುತ್ತಿದ್ದರು. ಅರಸನು ಅಂಬಾರಿಯನ್ನೇರಿ ಸೇನಾ ಸಮೇತ ಬನ್ನಿ ವೃಕ್ಷದತ್ತ ಭಿಜಯಂಗೈಯುತ್ತಿದ್ದನು. ಶಮೀ (ಬನ್ನಿ)ವೃಕ್ಷದ ಬಳಿ ಆಯುಧ ಪೂಜೆ ಸಲ್ಲಿಸಲಾಗುತ್ತಿತ್ತು. ಸಂಜೆ ದೀವಟಿಗೆ ಸಲಾಂ ಸ್ವೀಕರಿಸಿ ಆಯುಧ, ಗಜಾಶ್ವಗಳೊಡನೆ ಅತಿ ಸಂಭ್ರಮದಿಂದ ಅರಮನೆಗೆ ಹಿಂದಿರುಗುತ್ತಿದ್ದರು.

1799ರಲ್ಲಿ ಟಿಪ್ಪು ಸುಲ್ತಾನ್ ಮರಣದ ನಂತರ ವರ್ಷಗಳಲ್ಲಿ ದಸರಾ ಹಬ್ಬವು ಮೈಸೂರಿಗೆ ಸ್ಥಳಾಂತರವಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ಆಚರಿಸಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಮರಳಿ ತನ್ನ ವೈಭವ ಪಡೆಯಲಿ ಎಂಬುದು ಜಿಲ್ಲೆಯ ಜನತೆ ಆಶಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT