ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ದಸರಾಕ್ಕೆ ಡಾ. ಚಂದ್ರಶೇಖರ ಕಂಬಾರ ಚಾಲನೆ....

Last Updated 30 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಪಾರಂಪರಿಕ ಪಟ್ಟಣ ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ನಾಡಹಬ್ಬ ದಸರಾದ ಸಡಗರ. ಸಾಂಪ್ರದಾಯಿಕ ಜಂಬೂಸವಾರಿ ಉತ್ಸವದ ಪುಳಕ.

ಮೈಸೂರು ದಸರಾ ಉತ್ಸವದ ಮೂಲಸೆಲೆ ಎನ್ನಲಾದ ಶ್ರೀರಂಗಪಟ್ಟಣದಲ್ಲಿ ಈ ಬಾರಿ ದಸರಾ ಆಚರಣೆಗೆ ಅದ್ದೂರಿತನ ಮೇಳೈಸಿದ್ದು, ಅಂಬಾರಿಯನ್ನು ಹೊತ್ತ ಆನೆ `ಅಭಿಮನ್ಯು~ ಜಂಬೂಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಸಾಗಿದ ದೃಶ್ಯಕ್ಕೆ ಜಿಲ್ಲೆ, ನೆರೆ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯ ಜನರು ಸಾಕ್ಷಿಯಾದರು.

`ಆಭಿಮನ್ಯು~ ಮೇಲೆ ಇರಿಸಿದ್ದ ಅಲಂಕೃತ ಅಂಬಾರಿಯಲ್ಲಿ ಇರಿಸಲಾಗಿದ್ದ ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ ಪ್ರತಿಮೆಗೆ ಪೂಜೆ ನೇರವೇರಿಸಿ, ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಈ ಜಂಬೂಸವಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂದೇಶ ನೀಡಿದ ಕಂಬಾರರು, `ಜನ ಸಮುದಾಯವನ್ನು ಒಗ್ಗೂಡಿಸುವ ಇಂಥ ಕಾರ್ಯಕ್ರಮಗಳು, ಸಾಂಸ್ಕೃತಿಕ ಹಬ್ಬಗಳು ನಿರಂತರವಾಗಿ ನಡೆಯಬೇಕು. ಜನರೂ ಆಗ ಸಂತೋಷದಿಂದ ಇರುತ್ತಾರೆ. ನಾಡು ಸುಭಿಕ್ಷವಾಗಿ ಇರುತ್ತದೆ~ ಎಂದು ಅಭಿಪ್ರಾಯಪಟ್ಟರು.

ನಾಡಹಬ್ಬ ದಸರಾದಲ್ಲಿ ಭಾಗಿ ಆಗಿರುವುದಕ್ಕೆ ನನಗೆ ಅತೀವ ಸಂತಸವಾಗಿದೆ. ದಸರಾಗೆ ಚಾಲನೆ ನೀಡುವ ಅವಕಾಶ ದೊರಕಿದ್ದು ನನ್ನ ಪುಣ್ಯ, ನಾನು ಭಾಗ್ಯವಂತ ಎಂದು ಸಂತಸವನ್ನು ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರಿನಲ್ಲಿರುವ ಬನ್ನಿಮಂಟಪ ಬಳಿ ಚಾಲನೆ ಪಡೆದ ಮೆರವಣಿಗೆಯನ್ನು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಅಸಂಖ್ಯ ಜನರು ವೀಕ್ಷಿಸಿ ಸಂತಸಪಟ್ಟರು.

ಮೆರವಣಿಗೆ ಬಳಿಕ ನಾಲ್ಕು ದಿನ (ಸೆ. 30ರಿಂದ ಅ.4ರವರೆಗೆ) ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆವ ಶ್ರೀರಂಗಪಟ್ಟಣವನ್ನು ತಲುಪಿತು.ಅಂಬಾರಿ ಹೊತ್ತ ಆನೆ ಅಭಿಮನ್ಯು ಜೊತೆಗೆ ವಿಕ್ರಮ,ಮೇರಿ, ಕಾಂತಿ, ಹರ್ಷ ಮತ್ತು ರೇವತಿ ಕೂಡಾ ಹೆಜ್ಜೆ ಹಾಕುವ ಮೂಲಕ ಸಾಥ್ ನೀಡಿದವು.

ಮೈಸೂರು ದಸರಾದಂತೆ ಈ ವರ್ಷ ಅದ್ಧೂರಿತನ ಪಡೆದುಕೊಂಡ ಮೆರವಣಿಗೆಯಲ್ಲಿ ಪ್ರಸಕ್ತ ವರ್ಷ ವಿವಿಧ ಇಲಾಖೆಗಳ ಸ್ತಬ್ದಚಿತ್ರಗಳು, ಸ್ಕೌಟ್ಸ್, ಗೈಡ್ಸ್, ಪೊಲೀಸ್‌ಬ್ಯಾಂಡ್, ಎನ್‌ಸಿಸಿ, ಪೂಜಾ ಕುಣಿತ, ಡೊಳ್ಳು ಕುಣಿತ, ಬೆದರು ಬೊಂಬೆ, ವೀರಗಾಸೆ ಸೇರಿದಂತೆ ವಿವಿಧಜಾನಪದ ಕಲಾಪ್ರಕಾರಗಳು ಗಮನಸೆಳೆದವು.

ಸಚಿವ ಆರ್.ಅಶೋಕ್, ಸಂಸದ ಚಲುವರಾಯಸ್ವಾಮಿ, ಶಾಸಕರಾದ ಅಶ್ವತ್ಥನಾರಾಯಣ, ಎ.ಬಿ.ರಮೇಶ್‌ಬಾಬು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದ ಪ್ರಮುಖರಲ್ಲಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT