ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣದಲ್ಲಿ ದೊರೆಗಳ ಹೆಜ್ಜೆ ಗುರುತು

Last Updated 12 ಡಿಸೆಂಬರ್ 2013, 5:28 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮೈಸೂರು ದೊರೆಗಳು ಸ್ವತಂತ್ರವಾಗಿ ರಾಜ್ಯ ಸ್ಥಾಪಿಸಿದ್ದು ದ್ವೀಪ ನಗರಿ ಶ್ರೀರಂಗಪಟ್ಟಣದಲ್ಲಿ. ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು ರಾಜ ಒಡೆಯರ್‌ (ಕ್ರಿ.ಶ. 1610) ಆರಂಭಿಸಿದ ರಾಜಾಡಳಿತ 1766ರವರೆಗೆ ಅದೇ ವಂಶದ ದೊರೆಗಳ ಕೈಯಲ್ಲಿತ್ತು.

ರಾಜ ಒಡೆಯರ್‌ ಶ್ರೀರಂಗನಾಥಸ್ವಾಮಿ ದೇವಾಲಯದ ಬಲಭಾಗದಲ್ಲಿ ಶ್ರೀಗಂಧದ ಅರಮನೆ ನಿರ್ಮಿಸಿದ್ದರು. ದೇಗುಲ, ಅನ್ನಛತ್ರಗಳು, ರಸ್ತೆ, ಕೆರೆ, ಗೋಕುಂಟೆಗಳನ್ನು ನಿರ್ಮಿಸಿದ್ದರು. ವಿಜಯನಗರ ಮಾದರಿಯಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಉತ್ಸವ ಆರಂಭಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ.

ರಣಧೀರ ಕಂಠೀರವ ನರಸರಾಜ ಒಡೆಯರ್‌ (ಕ್ರಿ.ಶ.1638–59) ಕಾಲದಲ್ಲಿ ಇಲ್ಲಿ ಮೂರು ಅರಮನೆಗಳಿದ್ದವು ಎಂದು ಸಮಕಾಲೀನ ಜೆಸ್ಯೂಯಿಟ್‌ ಗುರುಗಳು ರೋಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜಗಜಟ್ಟಿ ಬಿರುದಾಂಕಿತ ಕಂಠೀರವ ಅರಸು ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದರು.

ಲಕ್ಷ್ಮಿ ನರಸಿಂಹಸ್ವಾಮಿ ದೇಗುಲ ಸೇರಿದಂತೆ ಹಲವು ದೇಗುಲಗಳನ್ನು ನಿರ್ಮಿಸಿದರು. ರೈತರ ಬಗ್ಗೆ ಕಾಳಜಿ ಹೊಂದಿದ್ದ ಇವರು 17ನೇ ಶತಮಾನದಲ್ಲಿಯೇ ಕಾವೇರಿ ನದಿಗೆ ಒಡ್ಡು ನಿರ್ಮಿಸಿ, 8 ಕಿ.ಮೀ. ಉದ್ದದ ‘ಬಂಗಾರದೊಡ್ಡಿ’ ಹೆಸರಿನ ನಾಲೆ ತೋಡಿಸಿದ್ದು, ಈಗಲೂ ಈ ನಾಲೆ ಸಹಸ್ರಾರು ರೈತರಿಗೆ ವರವಾಗಿದೆ.

ದೊಡ್ಡ ದೇವರಾಜ ಒಡೆಯರ್‌ ಬಳಿಕ ಅಧಿಕಾರಕ್ಕೆ ಬಂದ ಚಿಕ್ಕದೇವರಾಜ ಒಡೆಯರ್‌ (ಕ್ರಿ.ಶ.1673–1704) ಅಚ್ಚಳಿಯದ ಕಾರ್ಯ ಮಾಡಿ ಹೋಗಿದ್ದಾರೆ. ಬಲಮುರಿ ಬಳಿ ಕಾವೇರಿ ನದಿಗೆ ಒಡ್ಡು ನಿರ್ಮಿಸಿ 70 ಕಿ.ಮೀ. ಉದ್ದದ ‘ವಿರಿಜಾ’ ನಾಲೆ ನಿರ್ಮಿಸಿದರಲ್ಲದೆ, ಚಿಕ್ಕದೇವರಾಜ ಸಾಗರ (ಸಿಡಿಎಸ್‌) ನಾಲೆಯನ್ನೂ ತೋಡಿಸಿದರು. ಈಗಲೂ ಈ ನಾಲೆಗಳು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಕೃಷಿಕರಿಗೆ ಜೀವನಾಡಿಯಂತಿವೆ.

ಸ್ವತಃ ಸಾಹಿತಿಯಾಗಿದ್ದ ಚಿಕ್ಕದೇವರಾಜ ಭೂಪ ಸಾಹಿತ್ಯ, ಕಲೆ, ಸಂಗೀತಗಳ ಪೋಷಕರಾಗಿದ್ದರು. ದೆಹಲಿ ಸುಲ್ತಾನ ಔರಂಗಜೇಬನ ಸಮಾಕಾಲೀನರಿವರು. ನಂತರ ಇಲ್ಲಿಂದಲೇ ರಾಜ್ಯವಾಳಿದ ಇಮ್ಮಡಿ ಕಂಠೀರವ ನರಸರಾಜ ಒಡೆಯರ್‌ (ಕ್ರಿ.ಶ.1704–14), ಕೃಷ್ಣರಾಜ ಒಡೆಯರ್‌ (ಕ್ರಿ.ಶ.1714–32), 7ನೇ ಚಾಮರಾಜ ಒಡೆಯರ್‌ (ಕ್ರಿ.ಶ.1732–34), ಇಮ್ಮಡಿ ಕೃಷ್ಣರಾಜ ಒಡೆಯರ್‌ (ಕ್ರಿ.ಶ.1734–1766) ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಮುಮ್ಮಡಿ ಕೃಷ್ಣರಾಜರು
ಮುಮ್ಮಡಿ ಕೃಷ್ಣರಾಜ ಒಡೆಯರ್‌ 1794ರಲ್ಲಿ ಪಟ್ಟಣದಲ್ಲಿ ಜನಿಸಿದ್ದು, ಅವರ ಜನನ ಮಂಟಪವನ್ನು ಪ್ರಾಚ್ಯವಸ್ತು ಇಲಾಖೆ ಸಂರಕ್ಷಿಸಿದೆ. ನಾಲ್ಕನೇ ಆಂಗ್ಲೋ– ಮೈಸೂರು ಯುದ್ದ (1799 ಮೇ 4)ದ ಬಳಿಕ ಬ್ರಿಟಿಷರಿಂದ ಅರಸೊತ್ತಿಗೆ ಪಡೆದ ಮುಮ್ಮಡಿಯವರು ರಾಜಧಾನಿಯನ್ನು ಮೈಸೂರಿಗೆ ವರ್ಗಾಯಿಸಿದರು. ಇಲ್ಲಿಗೆ ಸಮೀಪದ ಚಂದ್ರವನ ಬಳಿ ತಮ್ಮ ತಂದೆಯ ಸ್ಮರಣಾರ್ಥ ಇವರು ನಿರ್ಮಿಸಿದ ಕಾಶಿಚಂದ್ರಮೌಳೇಶ್ವರ ದೇಗುಲ ಈಗಲೂ ಇದ್ದು, ಅದರ ಶಿಲಾಸ್ತಂಭದ ಮೇಲೆ ಶಾಸನ ಕೆತ್ತಿಸಲಾಗಿದೆ. ಮೈಸೂರು ರಾಜ್ಯವನ್ನಾಳಿದ 25 ದೊರೆಗಳಲ್ಲಿ 21 ದೊರೆಗಳಿಗೆ ಶ್ರೀರಂಗಪಟ್ಟಣವೇ ರಾಜಧಾನಿಯಾಗಿತ್ತು.

ಶ್ರೀಕಂಠದತ್ತ ಶ್ರೀರಂಗನ ಭಕ್ತರು
ಸೋಮವಾರ ವಿಧಿವಶರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ತಮ್ಮ ವಂಶದ ಮೂಲ ನೆಲೆ ಶ್ರೀರಂಗಪಟ್ಟಣದ ಅಧಿದೇವತೆ ಶ್ರೀರಂಗನಾಥನ ಪರಮ ಭಕ್ತರಾಗಿದ್ದರು. ಪಟ್ಟಾಭಿಷೇಕದ ಬಳಿಕ ಆಗಾಗ ಕುಟುಂಬ ಸದಸ್ಯರ ಜತೆ ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು. 2010ರಲ್ಲಿ ಇಲ್ಲಿಗೆ ಆಗಮಿಸಿದ್ದ ಅವರು ದೋಷ ಪರಿಹಾರಕ್ಕೆ ನಡೆಸುವ ‘ಸುದರ್ಶನ ಹೋಮ’ ದಲ್ಲಿ ಪಾಲ್ಗೊಂಡಿದ್ದರು ಎಂದು ದೇವಾಲಯದ ಅರ್ಚಕ ಪ್ರಸನ್ನ ಹೇಳಿದರು.

ಮಂಗಳವಾರ (ಡಿ. 11) ಬೆಳಿಗ್ಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಆತ್ಮಶಾಂತಿಗಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಗೌರವ ಮರ್ಯಾದೆ ಕಳುಹಿಸಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT