ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಸೇನೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಂದಗಿಯ ಮಿನಿ ವಿಧಾನಸೌಧದ ಮೇಲೆ ಪಾಕಿಸ್ತಾನದ ಬಾವುಟ ಹಾರಿಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸುವ ಸಂಚಿನ ಮೂಲಕ ತಮ್ಮ `ನೈಜ ದೇಶಪ್ರೇಮ~ವನ್ನು ಬಯಲುಮಾಡಿಕೊಂಡ ಶ್ರೀರಾಮಸೇನೆ ಈಗ ನಿಷೇಧಕ್ಕೆ ಯೋಗ್ಯವಾದ ಸಂಘ ಎಂಬುದನ್ನು ಸ್ವತಃ ಸಾಬೀತುಪಡಿಸಿಕೊಂಡಿದೆ. 

ಈಗಿನ ಬಿಜೆಪಿ ಸರ್ಕಾರ ಅಂಥ ಅವಕಾಶವನ್ನು ಅವರಿಗೆ ಒದಗಿಸಿಕೊಡುತ್ತಾ ಬಂದಿದ್ದರಿಂದಲೇ ಈಗವರು `ಸಂವಿಧಾನದ ಕುತ್ತಿಗೆಗೇ ಕೈಹಾಕುವ~ ಕೆಲಸಕ್ಕೆ ಮುಂದಾಗಿರುವುದು.

ಸಿಂದಗಿಯ ಮಿನಿ ವಿಧಾನಸೌಧದ ಮೇಲೆ ಪಾಕಿಸ್ತಾನಿ ಬಾವುಟವನ್ನು ಹಾರಿಸಿ ಮತ್ತೆ ತಾವೇ ಜನರನ್ನು ಸೇರಿಸಿ ಗಲಾಟೆ ಎಬ್ಬಿಸುವ ಮಟ್ಟಕ್ಕೆ ಅವರು `ದೇಶಪ್ರೇಮ~ ಮೆರೆದಿದ್ದು. ಬಹುಶಃ, ಹೆಣ್ಣು ಮಕ್ಕಳ ತಂಟೆಗೆ ಹೋದಾಗಲೇ ಅವರಿಗೆ ಸರಿಯಾದ ಪಾಠ ಕಲಿಸಿದ್ದಿದ್ದರೆ ಸಂವಿಧಾನ ವಿರೋಧಿಯಾದ ಬುಡಮೇಲು ಕೃತ್ಯಗಳನ್ನು ಸಂಘಟಿಸುವ ತನಕ ಅವರು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿರಲಿಲ್ಲ. ಸಂವಿಧಾನದ ಮೂಲ ಆಶಯವಾದ ಜಾತ್ಯತೀತತೆ, ಸೌಹಾರ್ದತೆಯನ್ನು ಕದಡಲು ಶ್ರೀರಾಮಸೇನೆ ನಡೆಸಿದ ಪ್ರಯತ್ನ ಅತ್ಯಂತ ಖಂಡನೀಯ.

ಹಿಂದು ಮುಸಲ್ಮಾನರು ಶತಮಾನಗಳ ಕಾಲ ಸೌಹಾರ್ದತೆಯಿಂದ ಬದುಕುತ್ತಾ ಬಂದಿರುವ, ಸೌಹಾರ್ದ ಪರಂಪರೆಯ ಪ್ರತೀಕಗಳಾಗಿ ವಿಶ್ವಶ್ರೇಷ್ಠ ಸ್ಮಾರಕಗಳನ್ನು ರಕ್ಷಿಸುತ್ತಾ ಬಂದಿರುವ ಬಿಜಾಪುರ ಜಿಲ್ಲೆಯನ್ನು ತಮ್ಮ ಪೂರ್ವಯೋಜಿತ ಕುಕೃತ್ಯಗಳಿಗೆ ಬಳಸಿಕೊಂಡಿರುವುದನ್ನು ನೋಡಿದರೆ ಇವರ ಸಂಚು ಸಾಮಾನ್ಯದ್ದಲ್ಲ ಎಂಬುದು ಹೊರನೋಟಕ್ಕೆ ಭಾಸವಾಗುತ್ತದೆ.

ಹೀಗಾಗಿ ಬಂಧಿಸಿರುವ ಸಮಾಜಘಾತುಕ ಶಕ್ತಿಗಳಿಗೆ ಸರಿಯಾದ ಶಿಕ್ಷೆ ವಿಧಿಸಬೇಕು, ಸಮಾಜಘಾತುಕ ಪಿತೂರಿ, ಸಾಮಾಜಿಕ ಶಾಂತಿಭಂಗ, ಸಂವಿಧಾನ ಹಾಗೂ ಕಾನೂನು ಉಲ್ಲಂಘನೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮುಂತಾದ ಪ್ರಕರಣಗಳನ್ನು ನಿರ್ದಾಕ್ಷಿಣ್ಯವಾಗಿ ಇವರ ಮೇಲೆ ದಾಖಲಿಸಬೇಕು. ಇಷ್ಟರಿಂದಲೇ ಇವರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲದ ಕಾರಣ ಶ್ರೀರಾಮಸೇನೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು.

ಜನರ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಶಾಂತಿ ನೆಮ್ಮದಿ ಕದಡುವ ಶ್ರೀರಾಮಸೇನೆಯ ಪ್ರಯತ್ನಗಳು ಬಿಜಾಪುರದಲ್ಲಿ ಠುಸ್ಸೆಂದಿದ್ದು ಈ ನಾಡಿನ ಜನ ಸೌಹಾರ್ದಪ್ರಿಯರು ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದಂತಾಗಿದೆ. ಹೆಚ್ಚಿನ ಹಾನಿ, ದುರಂತಕ್ಕೆ ದಾರಿಮಾಡಿ ಕೊಡದ ಜಿಲ್ಲೆಯ ಜನ ಅಭಿನಂದನಾರ್ಹರು. ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಕುಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿದ ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನೂ ನಾಡಿನ ಜನ ಅಭಿನಂದಿಸಲೇಬೇಕು.

ಶ್ರೀರಾಮಸೇನೆಯನ್ನು ನಿಷೇಧಿಸದೆ ಅವರು ನಡೆಸುವ ಚಟುವಟಿಕೆಗಳನ್ನೆಲ್ಲ ಮಾನ್ಯ ಮಾಡುತ್ತಾ ಹೋದರೆ ಅವರ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಸರ್ಕಾರದ ಪಾಲೂ ಇದೆಯೆಂಬ ಸಂದೇಶ ರವಾನೆಯಾಗುವುದರಿಂದ ಸರ್ಕಾರ ಈ ಕೂಡಲೆ ಅದನ್ನು ನಿಷೇಧಿಸಲಿ.
- ಎನ್. ಪ್ರಭಾ, ಬೆಂಗಳೂರು

`ದೇಶಪ್ರೇಮಿ~ಗಳಿಂದಲೇ ದ್ರೋಹ!
ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕು ಕಚೇರಿ ಮುಂದೆ ಪಾಕ್ ರಾಷ್ಟ್ರದ ಧ್ವಜವನ್ನು ಹಾರಿಸಿ ಕೋಮು ಗಲಭೆಗಾಗಿ ಹುನ್ನಾರ ನಡೆಸಿರುವವರು ಯಾರೆಂಬುದು  ಗೊತ್ತಾಗಿದೆ.
ಸದಾ ದೇಶಭಕ್ತಿ, ದೇಶಾಭಿಮಾನ, ರಾಷ್ಟ್ರೀಯತೆ ಎಂದೆಲ್ಲ ಇತರರಿಗೆ ಪಾಠ ಹೇಳಿಕೊಡುವ ಇಂಥ `ದೇಶಪ್ರೇಮಿ~ ಸಂಘಟನೆಗಳೇ ಈಗ ರಾಷ್ಟ್ರದ್ರೋಹದ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಆತಂಕಕಾರಿ ಬೆಳವಣಿಗೆ.

ಕೋಮುಗಲಭೆಗಳು ಉಂಟಾದಲ್ಲಿ ತಮಗೆ ರಾಜಕೀಯ ಲಾಭವಾಗಬಹುದೆಂಬ ಲೆಕ್ಕಾಚಾರದಲ್ಲಿರುವ ಇಂತಹ ಸಂಘಟನೆಗಳು ಎಲ್ಲಿಯವರೆಗೆ ತಮ್ಮ ಚಟುವಟಿಕೆಗಳನ್ನು ಮುಂದುವರೆಸುತ್ತವೋ ಅಲ್ಲಿಯವರೆಗೆ ಈ ದೇಶ ನೆಮ್ಮದಿಯಿಂದಿರಲು ಸಾಧ್ಯವಿಲ್ಲ.
ಆದ್ದರಿಂದ ಇಂಥ ಹುನ್ನಾರದ ಚಟುವಟಿಕೆಗಳನ್ನು ಮಾಡುವ ನಕಲಿ ದೇಶಪ್ರೇಮಿ ಸಂಘಟನೆಗಳ ಬಗ್ಗೆ ಸರ್ಕಾರ ಗಂಭೀರ ನಿಲುವು ತಳೆಯಲಿ.
- ಕಿರುಗುಂದ ರಫೀಕ್ ಮೂಡಿಗೆರೆ

ಕಾನೂನು ಪ್ರಕಾರ ಶಿಕ್ಷಿಸಿ

ದೇಶಭಕ್ತ, ಸಂಸ್ಕೃತಿ ರಕ್ಷಕ ಸಂಘಟನೆ ತಮ್ಮದೆಂದು ಎಂದು ಹೇಳಿಕೊಳ್ಳುತ್ತಿರುವ  ಶ್ರಿರಾಮ ಸೇನೆಯ ಕಾರ್ಯಕರ್ತರು ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವ ಮೂಲಕ ದೇಶದ್ರೋಹದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದು ಅತ್ಯಂತ ಹೀನ ಕೃತ್ಯ. ಈ ಕೃತ್ಯ ಎಸಗಿದ ಆರು ಮಂದಿ ಶ್ರೀ ರಾಮಸೇನೆಯ ದೇಶದ್ರೋಹಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು.

ಶ್ರೀರಾಮ ಸೇನೆಯ ನಿಜವಾದ ಬಣ್ಣ ಬಯಲಾಗಿದೆ. ಜನರ ನೆಮ್ಮದಿಯನ್ನು ಕೆಡಿಸುವುದೇ ಈ ಸಂಘಟನೆಯ ಉದ್ದೇಶ.  ಸಿಂದಗಿಯ ಆರು ಯುವಕರನ್ನು ದೇಶದ್ರೋಹಿ ಕೃತ್ಯಕ್ಕೆ ಪ್ರೇರೇಪಿಸಿದವರು ಸಂಘಟನೆಯ ಮುಖ್ಯಸ್ಥ ಹಾಗೂ ಪ್ರಚೋದನಕಾರಿ ಭಾಷಣ ಮಾಡುವ ಪ್ರಮೋದ್ ಮುತಾಲಿಕ್. ಅವರನ್ನೂ ಸರ್ಕಾರ ತಕ್ಷಣ ಬಂಧಿಸಬೇಕು. ಶ್ರೀರಾಮ ಸೇನೆ ಸಂಘಟನೆಯನ್ನು ಸರ್ಕಾರ ತಕ್ಷಣವೇ ನಿಷೇಧಿಸಬೇಕು.
-ಹಾಜಿಸಾಬ ಗ. ಮಕಾನದಾರ, ವಿಜಾಪುರ

ಪಾಕಿಸ್ತಾನಿ ಪ್ರಿಯರು ಯಾರು?
ಪಾಕಿಸ್ತಾನದ ಬಾವುಟ ಹಾರಿಸಿ ಕರ್ನಾಟಕದ ಜನತೆಯ ನೆಮ್ಮದಿಗೆ ಭಂಗ ತರಲು ಯತ್ನಿಸಿದವರು ಶ್ರೀರಾಮ ಸೇನೆಯವರೋ ಆರ್‌ಎಸ್‌ಎಸ್ ನವರೋ? ಎಂಬುದು ದೇಶದ ಜನತೆಯಲ್ಲಿ ಗೊಂದಲ ಮೂಡಿಸಿರುವ ವಿಷಯ. ದೇಶ ಸೇವೆಯ ಮುಖವಾಡ ಹಾಕಿರುವ ಈ ಎರಡು ಸಂಘಟನೆಗಳಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿರುವುದು ಯಾವುದೆಂದು ಜನತೆ ಗೊಂದಲದಲ್ಲಿ ಇದ್ದಾರೆ. ಸರ್ಕಾರವೇ ಗೊಂದಲ ನಿವಾರಿಸಲಿ.
 -  ಮಂಜೇಗೌಡ ಕಲ್ಕೆರೆ ಮಲ್ಲೇನಹಳ್ಳಿ

ಬುದ್ಧಿ ಕಲಿಸಲಿ, ಕಾನೂನು

ಸಿಂದಗಿ ನಂಬಿಗೆಯ ಬಿಂದಗಿ
ಎಂಬ ನುಡಿ ಒಡೆದು
ಪಾಕ್ ಧ್ವಜ ಹಾರಿಸಿ,
ತಾಯಿ ನೆಲಕ್ಕೆ ದ್ರೋಹ ಬಗೆದ
ಇಂಥ ದುರ‌್ಬುದ್ಧಿವಂತರಿಗೆ
ಕಾನೂನು ಸದ್ಬುದ್ಧಿ ಕಲಿಸಲಿ.
- ಸಾಹೇಬಗೌಡ.ವೈ.ಬಿರಾದಾರ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT